ಪ್ರೊ ಕಬಡ್ಡಿ ಲೀಗ್​ನಲ್ಲಿ ಬೆಂಗಳೂರು ಬುಲ್ಸ್​ಗೆ ಸತತ 2ನೇ ಸೋಲು; ಕೊನೇಕ್ಷಣದ ಪ್ರತಿಹೋರಾಟ ವ್ಯರ್ಥ

bulls web
Published on

ಅಹಮದಾಬಾದ್​: ಕೊನೆಕ್ಷಣದಲ್ಲಿ ತಿರುಗೇಟು ನೀಡಲು ಯತ್ನಿಸಿದ ಹೊರತಾಗಿಯೂ ಬೆಂಗಳೂರು ಬುಲ್ಸ್​ ತಂಡ ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯಲ್ಲಿ ಸತತ 2ನೇ ಸೋಲು ಅನುಭವಿಸಿದೆ. ಟ್ರಾನ್ಸ್​ಸ್ಟಡಿಯಾದಲ್ಲಿ ಸೋಮವಾರ ನಡೆದ ಕಾದಾಟದಲ್ಲಿ ಬೆಂಗಳೂರು ಬುಲ್ಸ್​ ತಂಡ 30-32 ಅಂಕಗಳಿಂದ ಬೆಂಗಾಲ್​ ವಾರಿಯರ್ಸ್​ ಎದುರು ಪರಾಭವಗೊಂಡಿತು.

ಪಂದ್ಯದ ಆರಂಭದಿಂದಲೂ ಹಿನ್ನಡೆ ಅನುಭವಿಸಿದ್ದ ಬೆಂಗಳೂರು ತಂಡ ಮೊದಲಾರ್ಧದಲ್ಲಿ 11-14ರಿಂದ ಹಿಂದುಳಿದಿತ್ತು. ನಂತರ ದ್ವೀತಿಯಾರ್ಧದಲ್ಲಿ ಆಲೌಟ್​ ಬಲೆಗೆ ಬಿದ್ದ ಬುಲ್ಸ್​ ಇನ್ನಷ್ಟು ಹಿನ್ನಡೆ ಅನುಭವಿಸಿತು. ಆದರೆ ಬೆನ್ನಲ್ಲೇ ಬೆಂಗಾಲ್​ ತಂಡವನ್ನು ಆಲೌಟ್​ ಮಾಡಿ ತಿರುಗೇಟು ನೀಡಿದ ಬುಲ್ಸ್​, ಪಂದ್ಯದ 4 ನಿಮಿಷಗಳ ಆಟ ಬಾಕಿ ಇದ್ದಾಗ 28-28ರಿಂದ ಸಮಬಲ ಸಾಧಿಸಿತು.

ಅಂತಿಮ ನಿಮಿಷಗಳಲ್ಲಿ ಮತ್ತೆ ಮುನ್ನಡೆ ಸಾಧಿಸಿದ ಬೆಂಗಾಲ್​ ತಂಡ ಬುಲ್ಸ್​ ಗೆಲುವು ಒಲಿಸಿಕೊಳ್ಳದಂತೆ ತಡೆಯೊಡ್ಡಿತು. ಬೆಂಗಳೂರು ತಂಡಕ್ಕೆ ರೈಡರ್​ಗಳಾದ ವಿಕಾಸ್​ ಕಂಡೋಲ (3), ಭರತ್​ (6), ನೀರಜ್​ ನರ್ವಾಲ್​ (5) ಹೆಚ್ಚಿನ ಅಂಕ ತಂದುಕೊಡಲು ಶಕ್ತರಾಗಲಿಲ್ಲ. ಭರತ್​ ಕೊನೇಕ್ಷಣಗಳಲ್ಲಿ ಯಶಸ್ವಿ ರೈಡಿಂಗ್​ಗಳನ್ನು ನಡೆಸಿದರೂ, ಅದು ಗೆಲುವಿಗೆ ಸಾಕಾಗಲಿಲ್ಲ.

ಬೆಂಗಾಲ್​ ವಾರಿಯರ್ಸ್​ ನಾಯಕ ಮಣಿಂದರ್​ ಸಿಂಗ್​ (11 ಅಂಕ) ಭರ್ಜರಿ ನಿರ್ವಹಣೆ ತೋರಿದರೆ, ಶ್ರೀಕಾಂತ್​ ಜಾಧವ್​ (3), ವಿಶ್ವಾಸ್​ (4) ಮತ್ತು ಡಿೆಂಡರ್​ಗಳಾದ ಆದಿತ್ಯ (3), ಶುಭಂ ಶಿಂಧೆ (4) ಮಣಿಂದರ್​ಗೆ ಉತ್ತಮ ಬೆಂಬಲ ಒದಗಿಸಿದರು.

ಜೈಪುರಕ್ಕೆ ಶಾಕ್​ ನೀಡಿದ ಪುಣೇರಿ

ಕಳೆದ ವರ್ಷದ ಫೈನಲಿಸ್ಟ್​ಗಳ ನಡುವೆ ನಡೆದ ದಿನದ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟಾನ್​ ತಂಡ ಹಾಲಿ ಚಾಂಪಿಯನ್​ ಜೈಪುರ ಪಿಂಕ್​ಪ್ಯಾಂಥರ್ಸ್​ಗೆ 37-33 ಅಂತರದಿಂದ ಆಘಾತಕಾರಿ ಸೋಲುಣಿಸಿತು. ಈ ಮೂಲಕ ಕಳೆದ ವರ್ಷದ ಫೈನಲ್​ ಸೋಲಿಗೆ ಸೇಡನ್ನೂ ತೀರಿಸಿಕೊಂಡಿತು. ನಾಯಕ ಅಸ್ಲಾಂ ಮುಸ್ತಾ (10 ಅಂಕ), ಮೋಹಿತ್​ ಗೋಯತ್​ (8) ಪುಣೇರಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯದ ಮೊದಲಾರ್ಧದಲ್ಲಿ 14-18ರಿಂದ ಹಿನ್ನಡೆ ಅನುಭವಿಸಿದ್ದ ಪುಣೇರಿ ದ್ವೀತಿಯಾರ್ಧದಲ್ಲಿ ಜೈಪುರ ತಂಡವನ್ನು 2 ಬಾರಿ ಆಲೌಟ್​ ಬಲೆಗೆ ಬೀಳಿಸುವ ಮೂಲಕ ತಿರುಗೇಟು ನೀಡಿತು. ರೈಡರ್​ ಅರ್ಜುನ್​ ದೇಸ್ವಾಲ್​ (17) ಹತ್ತು ಯಶಸ್ವಿ ರೈಡಿಂಗ್​ನೊಂದಿಗೆ ಪ್ರಾಬಲ್ಯ ಸಾಧಿಸಿದರೂ, ಡಿಫೆಂಡರ್​ಗಳ ವೈಲ್ಯದಿಂದಾಗಿ ಜೈಪುರ ತಂಡ ಹಿನ್ನಡೆ ಅನುಭವಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net