

ಬೆಂಗಳೂರು: ಕರ್ನಾಟಕದ ಓಟಗಾರ ಮಣಿಕಾಂತ್ ಹೋಬಳಿದಾರ್ ಭಾರತದ ಅತ್ಯಂತ ವೇಗದ ಓಟಗಾರ ಎನಿಸಿದ್ದಾರೆ. ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಂಡ 62ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಸರ್ವೀಸಸ್ ತಂಡವನ್ನು ಪ್ರತಿನಿಧಿಸಿದ 21 ವರ್ಷದ ಮಣಿಕಾಂತ್ 100 ಮೀ. ಓಟದ ಸೆಮಿಫೈನಲ್ನಲ್ಲಿ 10.23 ಸೆಕೆಂಡ್ಗಳಲ್ಲಿ ಓಡಿದರು. ಈ ಮೂಲಕ ರಾಷ್ಟ್ರೀಯ ದಾಖಲೆ ಬರೆದ ಅವರು ಅಗ್ರಸ್ಥಾನದೊಂದಿಗೆ ಫೈನಲ್ಗೇರಿದರು.
ಉಡುಪಿಯ ಮಣಿಕಾಂತ್ 2016ರಲ್ಲಿ ಒಡಿಶಾದ ಅಮಿಯಾ ಕುಮಾರ್ ಮಲ್ಲಿಕ್ 10.26 ಸೆಕೆಂಡ್ಗಳಲ್ಲಿ 100 ಮೀ. ಓಡಿದ್ದ ರಾಷ್ಟ್ರೀಯ ದಾಖಲೆ ಮುರಿದರು. ಕಳೆದ ವರ್ಷ ಅಮ್ಲನ್ ಬೋಗೋರ್ಹೈನ್ 10.25 ಸೆಕೆಂಡ್ಗಳಲ್ಲಿ ಓಡಿದ್ದರೂ ಅದು ದಾಖಲೆಯಾಗಿ ಮಾನ್ಯ ಆಗಿರಲಿಲ್ಲ.
ದಿನೇಶ್, ಸೀಮಾಗೆ ಚಿನ್ನ
ಮಹಾರಾಷ್ಟ್ರದ ದಿನೇಶ್ ಮತ್ತು ಹಿಮಾಚಲ ಪ್ರದೇಶದ ಸೀಮಾ ಅಥ್ಲೆಟಿಕ್ಸ್ ಕೂಟದ ಮೊದಲ ದಿನ ಪುರುಷರ ಮತ್ತು ಮಹಿಳೆಯರ 10 ಸಾವಿರ ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದುಕೊಂಡರು. ಮಹಿಳೆಯರ ಹ್ಯಾಮರ್ ಥ್ರೋನಲ್ಲಿ ಪೊಲೀಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ನ ಅನ್ಮೋಲ್ ಕೌರ್ ಮತ್ತು ಪುರುಷರ ಪೋಲ್ವಾಲ್ಟ್ನಲ್ಲಿ ಮಧ್ಯಪ್ರದೇಶದ ದೇವ್ ಮೀನಾ ಸ್ವರ್ಣ ಪದಕ ಜಯಿಸಿದರು.