ಬಾಬರ್​ ಆಜಂ, ಶಾನ್ ಮಸೂದ್ ಲೆಕ್ಕಕ್ಕಿಲ್ಲ! ನನ್ನ ಪ್ರಕಾರ ಈತನೇ ಪಾಕ್​ನ ಬೆಸ್ಟ್​ ಕ್ಯಾಪ್ಟನ್​ ಎಂದ ಬಸಿತ್​ ಅಲಿ

ವಿಜಯವಾಣಿ - 2024-09-17T110210.832
Published on

ಲಾಹೋರ್​: ಜೂ. 01ರಿಂದ ಪ್ರಾರಂಭವಾದ ಐಸಿಸಿ ಟಿ20 ವಿಶ್ವಕಪ್​ ಟೂರ್ನಿಯ ಮೊದಲ ಹಂತದಲ್ಲೇ ತವರಿಗೆ ಓಡಿ ಬಂದ ಪಾಕಿಸ್ತಾನ, ಕ್ಯಾಪ್ಟನ್ ಬಾಬರ್ ಆಜಂ ನೇತೃತ್ವದಲ್ಲಿ ಭಾರೀ ಮುಖಭಂಗ ಎದುರಿಸಿತು. ಆದಾದ ನಂತರವು ಕೆಲವು ಸರಣಿಯನ್ನು ಆಡಿದ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ಮಕಾಡೆ ಮಲಗಿತು. ವ್ಯಾಪಕ ಟೀಕೆ, ವ್ಯಂಗ್ಯಗಳ ಮಧ್ಯೆ ಫಿಕ್ಸಿಂಗ್ ಆರೋಪಗಳನ್ನು ಎದುರಿಸಿದ ಪಾಕ್ ಕ್ರಿಕೆಟ್ ಟೀಮ್, ಬಾಬರ್​ ನಾಯಕತ್ವದಲ್ಲಿಯೇ ಏನೋ ಒಂದು ಸಮಸ್ಯೆಯಿದೆ ಎಂದು ನಿರ್ಧರಿಸಿ ಅವರನ್ನು ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಸಿತು. ಆಜಂ ಬದಲಿಗೆ ನಾಯಕನಾಗಿ ಶಾನ್ ಮಸೂದ್​​ರನ್ನು ಕ್ಯಾಪ್ಟನ್ ಮಾಡಿದ ಪಿಸಿಬಿ ಕಂಡಿದ್ದು ಹೀನಾಯ ಸೋಲು ಬಿಟ್ಟರೆ ಮತ್ತೇನು ಅಲ್ಲ. ಸದಾ ಟೀಮ್ ಇಂಡಿಯಾವನ್ನು ಗುರಿಯಾಗಿಸಿ, ಟೀಕಿಸುವ ಪಾಕ್​ನ ಮಾಜಿ ಹಿರಿಯ ಆಟಗಾರ ಬಸಿತ್ ಅಲಿ ಇದೀಗ ಪಾಕ್​ಗೆ ಯಾರು ಬೆಸ್ಟ್​ ಕ್ಯಾಪ್ಟನ್ ಎಂಬುದನ್ನು ಬಹಿರಂಗವಾಗಿ ಹೇಳಿದ್ದಾರೆ.

ಕಳೆದ ಟೆಸ್ಟ್​ ಸರಣಿಯಲ್ಲಿ ಬಾಂಗ್ಲಾ ಎದುರು ಕಳಪೆ ಪ್ರದರ್ಶನ ನೀಡಿದ ಶಾನ್ ಮಸೂದ್​ ನಾಯಕತ್ವದ ಪಾಕಿಸ್ತಾನ, ಹೀನಾಯ ಸೋಲಿನಿಂದ ವ್ಯಾಪಕ ಛೀಮಾರಿಗೆ ತುತ್ತಾಯಿತು. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ಅಭಿಪ್ರಾಯ ಹೊರಹಾಕಿರುವ ಬಸಿತ್, "ಬಾಬರ್​ ಆಜಂ, ಶಾನ್ ಮಸೂದ್​​ಗಿಂತಲೂ ಮೊಹಮ್ಮದ್​ ರಿಜ್ವಾನ್​ ಒಬ್ಬ ಒಳ್ಳೆಯ ಕ್ಯಾಪ್ಟನ್. ಆತನನ್ನು ಪಾಕಿಸ್ತಾನ ತಂಡಕ್ಕೆ ನಾಯಕನಾಗಿ ಮಾಡಬೇಕು. ಪಾಕ್ ಕ್ರಿಕೆಟ್ ಮಂಡಳಿ ಈ ಬಗ್ಗೆ ಗಮನಹರಿಸಿ, ತಕ್ಷಣವೇ ರಿಜ್ವಾನ್​ರನ್ನು ನಾಯಕನ ಸ್ಥಾನಕ್ಕೆ ಕೂರಿಸಬೇಕು. ಈ ಬದಲಾವಣೆ ಪಾಕಿಸ್ತಾನ ಕ್ರಿಕೆಟ್​ಗೆ ಬಹಳ ಸಹಾಯವಾಗಲಿದೆ" ಎಂದಿದ್ದಾರೆ.

"ಪಾಕಿಸ್ತಾನದಲ್ಲಿ ರಿಜ್ವಾನ್‌ಗಿಂತ ಮತ್ತೊಬ್ಬ ಉತ್ತಮ ನಾಯಕ ಇಲ್ಲ. ಈಗಾಗಲೇ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಪಿಚ್ ಅನ್ನು ಅರ್ಥಮಾಡಿಕೊಳ್ಳುವಲ್ಲಿ ಬಾಬರ್ ಆಜಂ ಮತ್ತು ಶಾನ್ ಮಸೂದ್ ಇಬ್ಬರು ಕೂಡ ವಿಫಲರಾದರು. ಆದ್ರೆ, ಮೊಹಮ್ಮದ್​ ಆ ರೀತಿ ಇಲ್ಲ. ಈ ಸಮಯದಲ್ಲಿ ರಿಜ್ವಾನ್ ಅವರನ್ನು ತಂಡದ ನಾಯಕನನ್ನಾಗಿ ಮಾಡಿದರೆ ಉತ್ತಮ. ಇಲ್ಲದಿದ್ದರೆ ಖಂಡಿತ ಪಾಕಿಸ್ತಾನಕ್ಕೆ ನಷ್ಟ ಉಂಟಾಗಲಿದೆ. ರಿಜ್ವಾನ್​ರನ್ನು ಕ್ಯಾಪ್ಟನ್ ಮಾಡಲು ಇದು ಸೂಕ್ತ ಸಮಯ" ಎಂದು ಬಸಿತ್ ಅಲಿ ಪಿಸಿಬಿಗೆ ಸಲಹೆ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net