

ಲಖನೌ: ಮಾರ್ಚ್ 22ರಂದು ಆರಂಭವಾದ 17ನೇ ಆವೃತ್ತಿಯ ಟೂರ್ನಿಯು ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದ್ದು, ಈಗಾಗಲೇ 26 ಪಂದ್ಯಗಳು ಮುಕ್ತಾಯಗೊಂಡಿವೆ. ಶುಕ್ರವಾರ ಇಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನದ ಫಲವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಲಖನೌ ಸೂಪರ್ಜೈಂಟ್ಸ್ ವಿರುದ್ಧ 6 ವಿಕೆಟ್ಗಳ ಜಯ ಸಾಧಿಸಿದ್ದು, ಪಾಯಿಂಟ್ಸ್ ಟೇಬಲ್ನಲ್ಲಿ ಬದಲಾವಣೆ ಆಗಿದೆ.
ಆಡಿರುವ ಐದು ಪಂದ್ಯಗಳಲ್ಲಿ 3ರಲ್ಲಿ ಗೆದ್ದು ಎರಡರಲ್ಲಿ ಸೋತಿರುವ ಲಖನೌ ಸೂಪರ್ಜೈಂಟ್ಸ್ ತಂಡವು ನಾಲ್ಕನೇ ಸ್ಥಾನದಲ್ಲಿದ್ದು, ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 9ನೇ ಸ್ಥಾನದಲ್ಲಿದೆ. ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಾಯಿಂಟ್ಸ್ ಟೇಬಲ್ನಲ್ಲಿ 10ನೇ ಸ್ಥಾನಕ್ಕೆ ಕುಸಿದಿದೆ.
ಉಳಿದಂತೆ ಈ ಬಾರಿಯ ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ರಾಜಸ್ಥಾನ್ ರಾಯಲ್ಸ್ ತಂಡವು ಇದುವರೆಗೆ 5 ಪಂದ್ಯಗಳನ್ನಾಡಿದ್ದು, 4 ಮ್ಯಾಚ್ನಲ್ಲಿ ಜಯ ಸಾಧಿಸಿದೆ. ಈ ಮೂಲಕ ಒಟ್ಟು 8 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಜಯ ಸಾಧಿಸಿ ಎರಡರಲ್ಲಿ ಸೋಲು ಕಂಡಿರುವ ಕಲ್ಕತ್ತಾ ನಯಟ್ರೈಡರ್ಸ್ ತಂಡವು ಎರಡನೇ ಸ್ಥಾನದಲ್ಲಿದೆ.
ಇನ್ನು ಆಡಿರುವ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಎರಡರಲ್ಲಿ ಸೋಲು ಕಂಡಿರುವ ಚೆನ್ನೈ ಸೂಪರ್ಕಿಂಗ್ಸ್ ತಂಡವು ಮೂರನೇ ಸ್ಥಾನದಲ್ಲಿದ್ದು, ಲಖನೌ ಸೂಪರ್ಜೈಂಟ್ಸ್ ತಂಡವು ನಾಲ್ಕನೇ ಸ್ಥಾನದಲ್ಲಿದೆ. ಉಳಿದಂತೆ ಸನ್ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟಾನ್ಸ್, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ನಂತರದ ಸ್ಥಾನದಲ್ಲಿವೆ.
ಆರ್ಸಿಬಿ ತಂಡವು ಇದುವರೆಗೆ 6 ಪಂದ್ಯಗಳನ್ನಾಡಿದ್ದು, ಇದರಲ್ಲಿ 5 ಮ್ಯಾಚ್ನಲ್ಲಿ ಸೋತಿದೆ. ಈ ಮೂಲಕ ಕೇವಲ 2 ಅಂಕ ಸಂಪಾದಿಸಿರುವ ಆರ್ಸಿಬಿ ಅಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಕುಸಿದಿದೆ. ಅಲ್ಲದೆ ಆರ್ಸಿಬಿ ತಂಡದ ಪ್ರಸ್ತುತ ನೆಟ್ ರನ್ ರೇಟ್ -0.975. ಹೀಗಾಗಿ ಮುಂಬರುವ ಪಂದ್ಯಗಳು ಆರ್ಸಿಬಿ ಪಾಲಿಗೆ ನಿರ್ಣಾಯಕವಾಗಿದೆ.