

ಪರ್ತ್: ವಿಶ್ವ ಟೆಸ್ಟ್ ಚಾಂಪಿಯನ್ ಆಸ್ಟ್ರೆಲಿಯಾ ಹಾಗೂ ಪ್ರವಾಸಿ ಪಾಕಿಸ್ತಾನ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಗುರುವಾರ ಆರಂಭವಾಗಲಿದ್ದು, ಏಕದಿನ ವಿಶ್ವಕಪ್ ವೈಫಲ್ಯದ ಬಳಿಕ ಮೇಜರ್ ಸರ್ಜರಿಗೆ ಒಳಗಾಗಿರುವ ಪಾಕ್ ತಂಡ ಹೊಸ ಟೆಸ್ಟ್ ನಾಯಕ ಶಾನ್ ಮಸೂದ್ ಸಾರಥ್ಯದಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯಲಿದೆ.
ಅನುಭವಿ ಸ್ಪಿನ್ನರ್ ನಾಥನ್ ಲ್ಯಾನ್ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪಡೆದ 3ನೇ ಆಸೀಸ್ ಆಟಗಾರ ಎನಿಸುವ ಮೂಲಕ ಶೇನ್ ವಾರ್ನ್ (708) ಹಾಗೂ ಗ್ಲೆನ್ ಮೆಕ್ಗ್ರಾತ್ (563) ಸಾಲಿಗೆ ಸೇರಲು ಸಜ್ಜಾಗಿದ್ದಾರೆ. ಈ ಸಾಧನೆಗೆ ಲ್ಯಾನ್ ಇನ್ನೂ 4 ವಿಕೆಟ್ ಕಬಳಿಸಬೇಕಿದೆ. ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಕಬಳಿಸಿದ 7 ಬೌಲರ್ಗಳಲ್ಲಿ ಶೇನ್ ವಾರ್ನ್, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್, ಭಾರತದ ಅನಿಲ್ ಕುಂಭ್ಳೆ ಮಾತ್ರ ಸ್ಪಿನ್ನರ್ಗಳಾಗಿದ್ದಾರೆ.
ಆಶಸ್ ಸರಣಿಯಲ್ಲಿ ಗಾಯದ ಸಮಸ್ಯೆಗೆ ತುತ್ತಾಗಿದ್ದ 36 ವರ್ಷದ ಲ್ಯಾನ್ ಪಾಕ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ನನ್ನ ಕ್ರಿಕೆಟ್ ಜೀವನದ ಆರಂಭ ದಿನಗಳಿಂದ ಆರ್.ಅಶ್ವಿನ್ ಅವರನ್ನು ಹತ್ತಿರದಿಂದ ಗಮನಿಸಿದ್ದೇನೆ. ಅವರೊಬ್ಬ ವಿಶ್ವ ಶ್ರೇಷ್ಠ ಬೌಲರ್ ಹಾಗೂ ನನಗೆ ಸದಾ ಸ್ಫೂರ್ತಿ ಎಂದು ನಾಥನ್ ಲ್ಯಾನ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅವರು ಪರ್ತ್ ಕ್ರೀಡಾಂಗಣದಲ್ಲಿ ಉತ್ತಮ ದಾಖಲೆ ಹೊಂದಿದ್ದು, ಆಡಿರುವ 3 ಪಂದ್ಯಗಳಲ್ಲಿ 22 ವಿಕೆಟ್ ಕಬಳಿಸಿದ್ದಾರೆ.
ಆರಂಭ: ಬೆಳಗ್ಗೆ 7.50
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್1