

ಬೆಂಗಳೂರು: ಮುಂಬರುವ ದಿನಗಳಲ್ಲಿ ಏಷ್ಯಾಕಪ್-ವಿಶ್ವಕಪ್ಗಳಲ್ಲಿ ಭಾರತ-ಪಾಕಿಸ್ತಾನ ತಂಡಗಳು ಸತತ ಕೆಲ ಪಂದ್ಯಗಳಲ್ಲಿ ಮುಖಾಮುಖಿ ಆಗಲಿವೆ. ಈ ಹಿನ್ನೆಲೆಯಲ್ಲಿ ಇಂಡೋ-ಪಾಕ್ ನಡುವಿನ ಹೈ-ವೋಲ್ಟೇಜ್ ಪಂದ್ಯಗಳ ಒತ್ತಡ ಯಾವ ರೀತಿ ಇರುತ್ತದೆ ಎಂಬುದರ ಕುರಿತು ಮಾತನಾಡಿರುವ ಮಾಜಿ ನಾಯಕ ಹಾಗೂ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ, "ಆಗಿನ ದಿನಗಳಲ್ಲಿ ಅಭಿಮಾನಿಗಳು, ಕೀನ್ಯಾ ವಿರುದ್ಧದ ಪಂದ್ಯದಲ್ಲಿ ಬೇಕಿದ್ದರೂ ಸೋಲು ಕಾಣಿರಿ, ಆದರೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಾತ್ರ ಸೋಲಲೇಬೇಡಿ ಎನ್ನುತ್ತಿದ್ದರು' ಎಂದು ಹೇಳಿದ್ದಾರೆ.
ಏಷ್ಯಾಕಪ್ನಲ್ಲಿ ಸೆಪ್ಟೆಂಬರ್ 2ರಂದು ಮೊದಲ ಬಾರಿ ಪಾಕಿಸ್ತಾನವನ್ನು ಎದುರಿಸಲಿರುವ ಭಾರತ ತಂಡ ನಂತರ ಸೆಪ್ಟೆಂಬರ್ 10ರಂದು ಸೂಪರ್-4 ಹಂತದಲ್ಲಿ ಮತ್ತೊಮ್ಮೆ ಮುಖಾಮುಖಿ ಆಗಲಿದೆ. ಉಭಯ ತಂಡಗಳು ಫೈನಲ್ಗೇರಿದರೆ ಸೆಪ್ಟೆಂಬರ್ 17ರಂದು ಮತ್ತೊಮ್ಮೆ ಮುಖಾಮುಖಿ ಆಗಲಿವೆ. ಇನ್ನು ವಿಶ್ವಕಪ್ನಲ್ಲಿ ಅಕ್ಟೋಬರ್ 14ರಂದು ಅಹಮದಾಬಾದ್ನಲ್ಲಿ ಮುಖಾಮುಖಿ ಆಗಲಿರುವ ಭಾರತ-ಪಾಕ್ ತಂಡಗಳು ನಂತರ ಸೆಮಿಫೈನಲ್ ಅಥವಾ ಫೈನಲ್ನಲ್ಲಿ ಮತ್ತೆ ಮುಖಾಮುಖಿ ಆಗುವ ಸಾಧ್ಯತೆ ಇದ್ದೇ ಇರುತ್ತದೆ.
ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಮತ್ತೊಂದು ಪಂದ್ಯದಂತೆ ಆಡುವುದು ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಭಿಮಾನಿಗಳ ಮಾತಿನಿಂದ ಒತ್ತಡಕ್ಕೆ ಒಳಗಾಗದೆ ಆಡಬೇಕು ಎಂದು ಕನ್ನಡಿಗ ಅನಿಲ್ ಕುಂಬ್ಳೆ ಹೇಳಿದ್ದಾರೆ.
1999ರಲ್ಲಿ ಪಾಕಿಸ್ತಾನ ವಿರುದ್ಧದ ಫಿರೋಜ್ ಷಾ ಕೋಟ್ಲಾ ಟೆಸ್ಟ್ ಪಂದ್ಯದ ಇನಿಂಗ್ಸ್ ಒಂದರಲ್ಲಿ ಎಲ್ಲ 10 ವಿಕೆಟ್ ಕಬಳಿಸಿ ವಿಶ್ವದಾಖಲೆ ಬರೆದಿದ್ದ ಅನಿಲ್ ಕುಂಬ್ಳೆ, "ಆ ಪಂದ್ಯದಲ್ಲಿ ನಾನು 10 ವಿಕೆಟ್ ಗೊಂಚಲು ಪಡೆಯುವ ಯೋಚನೆಯೊಂದಿಗೆ ಕಣಕ್ಕಿಳಿದಿರಲಿಲ್ಲ. ಅದು ಖಂಡಿತವಾಗಿಯೂ ಬೌಲರ್ ಒಬ್ಬನ ಕನಸು ಆಗಿರುತ್ತದೆ. ಆದರೇನು ಮಾಡೋಣ, ಆ ಸಾಧನೆ ನಂತರ ಕೋಲ್ಕತದಲ್ಲಿ ಆಡಿದ ಪಾಕಿಸ್ತಾನ ವಿರುದ್ಧದ ಏಷ್ಯನ್ ಟೆಸ್ಟ್ ಚಾಂಪಿಯನ್ಷಿಪ್ ಪಂದ್ಯದಲ್ಲಿ ನನಗೆ ಒಂದೇ ಒಂದು ವಿಕೆಟ್ ಪಡೆಯುವುದು ಕೂಡ ಕಠಿಣವಾಗಿತ್ತು. ಇದೇ ಕ್ರಿಕೆಟ್ ಆಟದ ವಿಶಿಷ್ಟತೆ' ಎಂದು ವಿವರಿಸಿದ್ದಾರೆ.