

ಬೆಂಗಳೂರು: ಎನ್ಆರ್ ಗ್ರೂಪ್ ಒಡೆತನ ಮತ್ತು ಸೈಕಲ್ ಪ್ಯೂರ್ ಅಗರ್ಬತ್ತಿ ಸಹಯೋಗದ ಮೈಸೂರು ವಾರಿಯರ್ಸ್ ತಂಡಕ್ಕೆ ಅನುಭವಿ ಬ್ಯಾಟರ್ ಕರುಣ್ ನಾಯರ್ ನಾಯಕ ಮತ್ತು ಆರ್ಎಕ್ಸ್ ಮುರಳೀಧರನ್ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಭಾನುವಾರದಿಂದ ನಡೆಯಲಿರುವ 2ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಟೂರ್ನಿಯಲ್ಲಿ ಮೈಸೂರು ತಂಡ ಮೊದಲ ದಿನದ 2ನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಅಭಿಯಾನ ಆರಂಭಿಸಲಿದೆ.
ಕಳೆದ ತಿಂಗಳು ನಡೆದ ಹರಾಜಿನಲ್ಲಿ ತಂಡಕ್ಕೆ ಸೇರಿಸಿಕೊಳ್ಳಲಾದ ಆಟಗಾರರ ಜತೆಗೆ ಯುವ ಕ್ರಿಕೆಟಿಗರಾದ ಲಂಕೇಶ್ ಮತ್ತು ಗೌತಮ್ ಸಾಗರ್ ಅವರನ್ನು ಪ್ರತಿಭಾಶೋಧದ ಮೂಲಕ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಪ್ರಸಿದ್ಧಕೃಷ್ಣ, ಜೆ. ಸುಚಿತ್, ಆರ್ ಸಮರ್ಥ್, ಮನೋಜ್ ಭಾಂಡಗೆ ತಂಡದಲ್ಲಿರುವ ಇತರ ಪ್ರಮುಖ ಆಟಗಾರರಾಗಿದ್ದಾರೆ. ಆರ್ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಆರ್.ಎಕ್ಸ್. ಮುರಳೀಧರನ್, ಪ್ರತಿಭಾಶೋಧದ ನೇತೃತ್ವ ವಹಿಸಿದ್ದರು.
"ಮೈಸೂರು ವಾರಿಯರ್ಸ್ ಈಗ ಕೇವಲ ಒಂದು ತಂಡವಲ್ಲ. ಕರ್ನಾಟಕ ಮತ್ತು ಭಾರತೀಯ ಕ್ರಿಕೆಟಿಗೆ ಹಲವು ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತಿದೆ. ರಾಜ್ಯಮಟ್ಟದಲ್ಲಿ ಪ್ರತಿಭಾನ್ವೇಷಣೆ ನಡೆಸಿ ಭರವಸೆಯ ಪ್ರತಿಭೆಗಳನ್ನು ಗುರುತಿಸುತ್ತಿದ್ದೇವೆ' ಎಂದು ತಂಡದ ಮಾಲೀಕ ಹಾಗೂ ಸೈಕಲ್ ಪ್ಯೂರ್ ಅಗರ್ಬತ್ತಿಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ ಶುಕ್ರವಾರ ನಡೆದ ತಂಡದ ಜೆರ್ಸಿ ಅನಾವರಣ ಕಾರ್ಯಕ್ರಮದಲ್ಲಿ ತಿಳಿಸಿದರು.
ತಂಡದ ಸಹಾಯಕ ಕೋಚ್ ಆಗಿ ವಿಜಯ್ ಮಡ್ಯಾಳ್ಕರ್, ಬೌಲಿಂಗ್ ಕೋಚ್ ಆಗಿ ಆದಿತ್ಯ ಸಾರ್, ಫಿಸಿಯೋ ಆಗಿ ಶ್ರೀರಂಗ, ಫಿಟ್ನೆಸ್ ಟ್ರೇನರ್ ಆಗಿ ಅರ್ಜುನ್ ಹೊಯ್ಸಳ ಮತ್ತು ಪಾರ್ಮೆನ್ಸ್ ಅನಾಲಿಸ್ಟ್ ಆಗಿ ಸಚ್ಚಿದಾನಂದ ಮತ್ತು ಶಣ್ಮುಗಂ ಮಸ್ಸರ್ ನೇಮಕಗೊಂಡಿದ್ದಾರೆ.
ಮೈಸೂರು ವಾರಿಯರ್ಸ್ ತಂಡದ ಭಾಗವಾಗಿ ಮುಂದುವರಿಯುತ್ತಿರುವುದು ಮತ್ತು ತಂಡದ ನಾಯಕತ್ವ ವಹಿಸುತ್ತಿರುವುದು ಅಪಾರ ಖುಷಿ ತಂದಿದೆ. ತಂಡದೊಂದಿಗೆ ಮೈದಾನಕ್ಕೆ ಕಾಲಿಡಲು ಉತ್ಸುಕನಾಗಿರುವೆ. ನನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಪ್ರಯತ್ನಿಸುವೆ ಎಂದು ನಾಯಕ ಕರುಣ್ ನಾಯರ್ ಹೇಳಿದ್ದಾರೆ.