

RCB : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 18ನೇ ಆವೃತ್ತಿಯ ಚಾಂಪಿಯನ್ ಪಟ್ಟದೊಂದಿಗೆ ಶೋಭಿತವಾಗಿದೆ. ಈ ಮೂಲಕ ಅಭಿಮಾನಿಗಳ 18 ವರ್ಷಗಳ ಪ್ರಶಸ್ತಿ ಗೆಲುವಿನ ಕನಸು ನನಸಾಗಿದ್ದು, ‘ಈ ಸಲ ಕಪ್ ನಮ್ದೇ’ ಎಂಬ ಘೋಷವಾಕ್ಯ ಕೊನೆಗೂ ನಿಜವಾಗಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸುದೀರ್ಘ ಕಾಯುವಿಕೆಯ ಬಳಿಕ ಕೊನೆಗೂ ಐಪಿಎಲ್ ಟ್ರೋಫಿಗೆ ಮುತ್ತಿಟ್ಟರು.
ಪಂಜಾಬ್ ಕಿಂಗ್ಸ್ ವಿರುದ್ಧ ಮಂಗಳವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ಆರ್ಸಿಬಿ ತಂಡ ಅಮೋಘ ಬೌಲಿಂಗ್ ನಿರ್ವಹಣೆ ತೋರುವ ಮೂಲಕ 6 ರನ್ಗಳಿಂದ ಗೆದ್ದು ಹೊಸ ಇತಿಹಾಸ ಬರೆಯಿತು. ರಜತ್ ಪಾಟೀದಾರ್ ಆರ್ಸಿಬಿಗೆ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟ ಮೊದಲ ನಾಯಕ ಎನಿಸಿದರು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ವೇಗಿಗಳಾದ ಕೈಲ್ ಜೇಮಿಸನ್ (48ಕ್ಕೆ 3) ಹಾಗೂ ಅರ್ಷದೀಪ್ ಸಿಂಗ್ (40ಕ್ಕೆ 3) ಬಿಗಿ ದಾಳಿಯ ನಡುವೆಯೂ ಅನುಭವಿ ವಿರಾಟ್ ಕೊಹ್ಲಿ (43 ರನ್, 35 ಎಸೆತ, 3 ಬೌಂಡರಿ) ಸಹಿತ ಇತರ ಬ್ಯಾಟರ್ಗಳ ಕೊಡುಗೆಯಿಂದ 9 ವಿಕೆಟ್ಗೆ 190 ರನ್ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಶಶಾಂಕ್ ಸಿಂಗ್ (61*ರನ್, 30 ಎಸೆತ, 3 ಬೌಂಡರಿ, 6 ಸಿಕ್ಸರ್) ಹೋರಾಟದ ನಡುವೆಯೂ ಪಂಜಾಬ್ ಕಿಂಗ್ಸ್ 7 ವಿಕೆಟ್ಗೆ 184 ರನ್ಗಳಿಸಲಷ್ಟೇ ಶಕ್ತಗೊಂಡಿತು.
ಸವಾಲಿನ ಮೊತ್ತದ ಚೇಸಿಂಗ್ಗೆ ಇಳಿದ ಪಂಜಾಬ್ಗೆ ಪ್ರಿಯಾಂಶ್ (24)-ಪ್ರಭ್ಸಿಮ್ರನ್ ಸಿಂಗ್ (26) ಮೊದಲ ವಿಕೆಟ್ಗೆ 30 ಎಸೆತಗಳಲ್ಲಿ 43 ರನ್ಗಳಿಸಿ ಉತ್ತಮ ಆರಂಭ ಒದಗಿಸಿದರು. ನಂತರ ಜೋಶ್ ಇಂಗ್ಲಿಸ್ (39) ಚೇಸಿಂಗ್ಗೆ ಬಲ ತುಂಬಿದರು. ಇಂಗ್ಲಿಸ್ ವಿಕೆಟ್ ಪಡೆದ ಕೃನಾಲ್ (17ಕ್ಕೆ 2) ಪಂದ್ಯದ ಗತಿ ಬದಲಾಯಿಸಿದರು. 10ನೇ ಓವರ್ನಲ್ಲಿ ರೊಮಾರಿಯೊ ಶೆಫರ್ಡ್, ನಾಯಕ ಶ್ರೇಯಸ್ ಅಯ್ಯರ್ (1) ವಿಕೆಟ್ ಪಡೆದ ಬಳಿಕ ಪಂದ್ಯ ತಿರುವು ಪಡೆಯಿತು. ಅನುಭವಿ ಭುವನೇಶ್ವರ್ (38ಕ್ಕೆ 2) 17ನೇ ಓವರ್ನಲ್ಲಿ ವಧೇರ (15), ಸ್ಟೋಯಿನಿಸ್ (6) ವಿಕೆಟ್ ಪಡೆದು ಆರ್ಸಿಬಿ ಹಾದಿ ಸುಗಮಗೊಳಿಸಿದರು.
ಟೂರ್ನಿಯುದ್ದಕ್ಕೂ ಉತ್ತಮ ಆರಂಭ ಒದಗಿಸಿದ ಫಿಲ್ ಸಾಲ್ಟ್ (16) ನಿರಾಸೆಗೊಳಿಸಿದರು. ಮೊದಲ ಓವರ್ನಲ್ಲಿ 13 ರನ್ಗಳಿಸಿ ಬಿರುಸಿನಾಟಕ್ಕಿಳಿದ ಸಾಲ್ಟ್, ಮರು ಓವರ್ನಲ್ಲಿ ಜೇಮಿಸನ್ ಎಸೆತದಲ್ಲಿ ಶ್ರೇಯಸ್ಗೆ ಕ್ಯಾಚಿತ್ತರು. ಆಗ ಕೊಹ್ಲಿ ಜತೆಗೂಡಿದ ಕನ್ನಡಿಗ ಮಯಾಂಕ್ ಅಗರ್ವಾಲ್ (24) ತುಸು ಚೇತರಿಕೆ ನೀಡಿದರು. ಇವರಿಬ್ಬರು 2ನೇ ವಿಕೆಟ್ಗೆ 28 ಎಸೆತಗಳಲ್ಲಿ 38 ರನ್ ಸೇರಿಸಿದರು. ಈ ಜತೆಯಾಟ ಮುರಿದ ಚಾಹಲ್ ಆರ್ಸಿಬಿಗೆ ಮತ್ತೆ ಆಘಾತ ನೀಡಿದರು. ನಂತರ ಕೊಹ್ಲಿ ಜತೆಯಾದ ರಜತ್ ಪಾಟೀದಾರ್ (26) ರನ್ಗಳಿಕೆಗೆ ಚುರುಕು ನೀಡಿದರು. ಕೊಹ್ಲಿ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ (25) ಮೊತ್ತ ಏರಿಸಿದರು. ಇವರಿಬ್ಬರು 4ನೇ ವಿಕೆಟ್ಗೆ 24 ಎಸೆತಗಳಲ್ಲಿ 35 ರನ್ ಸೇರಿಸಿದರು. ಸ್ಲಾಗ್ ಓವರ್ಗಳಲ್ಲಿ ಜಿತೇಶ್ ಶರ್ಮ (24), ರೊಮಾರಿಯೊ ಶೆಫರ್ಡ್ (17) ಕೊಡುಗೆ 180 ರನ್ ಗಡಿ ದಾಟಿಸಿತು.
ಐಪಿಎಲ್ ಟೂರ್ನಿ 2008ರಲ್ಲಿ ಜನ್ಮತಾಳಿದಾಗ ಬಿಸಿಸಿಐನಿಂದ ಉದ್ಯಮಿ ವಿಜಯ್ ಮಲ್ಯ ಬೆಂಗಳೂರಿನ ತಂಡವನ್ನು ಖರೀದಿಸಿದ್ದರು. ಅಂದಿನಿಂದ ಹಲವಾರು ಏಳುಬೀಳು, ಸೋಲು-ಗೆಲುವು, ಸಂಭ್ರಮ-ಹತಾಶೆಗಳನ್ನು ಕಂಡ ನಡುವೆ ಸದಾ ಅಭಿಮಾನಿಗಳ ಹೃದಯವನ್ನು ಗೆದ್ದುಕೊಂಡು ಬಂದಿರುವ ತಂಡ ಆರ್ಸಿಬಿ. ಈ ಬಾರಿ ಕಪ್ ಕೂಡ ಗೆದ್ದು 18 ವರ್ಷಗಳ ಕನಸು ನನಸಾಗಿಸಿದೆ. ನಿರ್ವಹಣೆ, ಸಾಧನೆ, ಅರ್ಹತೆ ಆಧಾರದಲ್ಲಿ ನೋಡುವುದಾದರೆ ಆರ್ಸಿಬಿ ಯಾವಾಗಲೋ ಕಪ್ ಗೆಲ್ಲಬೇಕಾಗಿತ್ತು. ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಯುವರಾಜ್ ಸಿಂಗ್, ಶೇನ್ ವ್ಯಾಟ್ಸನ್, ಜಹೀರ್ ಖಾನ್ ಮುಂತಾದ ದಿಗ್ಗಜ ಆಟಗಾರರು ಆರ್ಸಿಬಿ ತಂಡಕ್ಕೆ ಈ ನಿಟ್ಟಿನಲ್ಲಿ ಬಲ ತುಂಬಿದ್ದರು. ಆದರೆ ಅದೃಷ್ಟದ ಸಾಥ್ ಸಿಕ್ಕಿರಲಿಲ್ಲ. ಈ ಬಾರಿ ಎಲ್ಲವೂ ಜತೆಯಾಗಿ ಕೂಡಿಬಂದಿತು ಮತ್ತು ಪ್ರಶಸ್ತಿ ಗೆಲುವಿನ ಸುಯೋಗ ಒಲಿದಿದೆ. ವಿರಾಟ್ ಕೊಹ್ಲಿ ಕೈ ಬಲಪಡಿಸಿ ಆರ್ಸಿಬಿ ತಂಡವನ್ನು ಗೆಲುವಿನ ಮೆಟ್ಟಿಲು ಏರಿಸಿದ ಆ ಆಟಗಾರರ ಸಂಕ್ಷಿಪ್ತ ವಿವರ ಇಲ್ಲಿದೆ...
ಕಳೆದ 17 ವರ್ಷಗಳಂತೆ 18ನೇ ವರ್ಷವೂ ಕೊಹ್ಲಿ ಆರ್ಸಿಬಿ ಬ್ಯಾಟಿಂಗ್ ವಿಭಾಗಕ್ಕೆ ಆಧಾರವಾದರು. ಅವರು ಈ ಬಾರಿ ಸಿಡಿಸಿದ ಎಲ್ಲ 8 ಅರ್ಧಶತಕಗಳೂ ಗೆಲುವು ತಂದುಕೊಟ್ಟಿವೆ. ಅವರ ಸ್ಟ್ರೈಕ್ರೇಟ್ ಕೂಡ ಗಮನಾರ್ಹ ಪ್ರಗತಿ ಸಾಧಿಸಿದೆ. ಅಗ್ರ ಕ್ರಮಾಂಕದಲ್ಲಿ ಫಿಲ್ ಸಾಲ್ಟ್, ಪಡಿಕ್ಕಲ್ ಜತೆಗೆ ಅಮೋಘ ಜತೆಯಾಟವಾಡಿದರು.
ಪಂದ್ಯ: 15, ರನ್: 657
ನಾಯಕನಾಗಿ ಮಿಂಚುವ ಜತೆಗೆ ಬ್ಯಾಟಿಂಗ್ನಲ್ಲೂ ರಜತ್ ಪಾಟೀದಾರ್ ಆರ್ಸಿಬಿಗೆ ಬಲ ತುಂಬಿದರು. ಚೆಪಾಕ್ನಲ್ಲಿ 17 ವರ್ಷ ಬಳಿಕ ಮತ್ತು ವಾಂಖೆಡೆಯಲ್ಲಿ 10 ವರ್ಷ ಬಳಿಕ ಕಂಡ ಪಂದ್ಯಗಳಲ್ಲಿ ಗೆಲುವಿನ ರೂವಾರಿ ಎನಿಸಿದರು. ನಾಯಕತ್ವದಲ್ಲೂ ಅನುಭವಿಯಂತೆಯೇ ಕಾರ್ಯನಿರ್ವಹಿಸಿದರು.
ಪಂದ್ಯ: 15, ರನ್: 312
ಕಳೆದ ವರ್ಷ ಆರ್ಸಿಬಿ ತಂಡದ ಪರ ಐಪಿಎಲ್ನಲ್ಲಿ ಮರುಹುಟ್ಟು ಪಡೆದುಕೊಂಡಿದ್ದ ವೇಗಿ ಯಶ್ ದಯಾಳ್ ಈ ಸಲವೂ ಅದೇ ರೀತಿಯ ಉಪಯುಕ್ತ ಕೊಡುಗೆಗಳನ್ನು ನೀಡಿದರು. ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ಧೋನಿ ವಿಕೆಟ್ ಕಬಳಿಸಿ ಆರ್ಸಿಬಿಗೆ ಅಮೂಲ್ಯ ಗೆಲುವು ತಂದರು.
ಪಂದ್ಯ: 15, ವಿಕೆಟ್: 13
ಭುಜ ನೋವಿನ ಸಮಸ್ಯೆಯ ನಡುವೆಯೂ ಆರ್ಸಿಬಿ ಬೌಲಿಂಗ್ ವಿಭಾಗಕ್ಕೆ ಹೆಗಲು ಕೊಟ್ಟವರು ಜೋಶ್ ಹ್ಯಾಸಲ್ವುಡ್. ಡೆತ್ ಓವರ್ಗಳಲ್ಲಿ ಆರ್ಸಿಬಿಗೆ ಹೆಚ್ಚಿನ ಬಲ ತುಂಬಿದರು. ರಾಜಸ್ಥಾನ ವಿರುದ್ಧ ಪಂದ್ಯದಲ್ಲಿ ಏಕಾಂಗಿಯಾಗಿ ಗೆಲುವು ತಂದುಕೊಟ್ಟರು. ಮೊದಲ ಕ್ವಾಲಿಫೈಯರ್ನಲ್ಲೂ ಅವರ ಮಾರಕ ದಾಳಿ ಪಂಜಾಬ್ ತಂಡವನ್ನು ಪಂಚರ್ ಮಾಡಿತ್ತು.
ಪಂದ್ಯ: 12, ವಿಕೆಟ್: 22
ವಿಕೆಟ್ ಹಿಂದೆ ಅಮೋಘ ನಿರ್ವಹಣೆ ತೋರಿದ್ದಲ್ಲದೆ, ಡಿಆರ್ಎಸ್ಅನ್ನು ಆರ್ಸಿಬಿ ಸಮರ್ಥವಾಗಿ ಬಳಸಿಕೊಳ್ಳು ವಲ್ಲೂ ನೆರವಾದರು. ಹಂಗಾಮಿ ನಾಯಕತ್ವವನ್ನೂ ನಿರ್ವಹಿಸಿದರು. ಲಖನೌ ವಿರುದ್ಧದ ಕೊನೇ ಲೀಗ್ ಪಂದ್ಯದಲ್ಲಿ 33 ಎಸೆತಗಳಲ್ಲಿ 85 ರನ್ ಸಿಡಿಸಿ ಆರ್ಸಿಬಿ ಮೊದಲ ಕ್ವಾಲಿಫೈಯರ್ಗೆ ಅರ್ಹತೆ ಪಡೆಯುವಂತೆ ಮಾಡಿದರು.
ಆರ್ಸಿಬಿ ತಂಡದ ಮೊದಲ ಪಂದ್ಯದಲ್ಲೇ ಗೆಲುವಿನ ರೂವಾರಿಯಾಗಿ ಉತ್ಸಾಹ ತುಂಬಿದವರು ಕೃನಾಲ್ ಪಾಂಡ್ಯ. ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಆರ್ಸಿಬಿಗೆ ಅನುಭವದ ಬಲ ತುಂಬಿದರು. ಜತೆಗೆ ಬ್ಯಾಟಿಂಗ್ನಲ್ಲೂ ಕೊಡುಗೆ ನೀಡಿದರು. ಅದರಲ್ಲೂ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿರುವ ಮೂಲಕ, ಆರಂಭಿಕ ಆಘಾತ ಕಂಡಿದ್ದ ಆರ್ಸಿಬಿಗೆ ಆಧಾರವಾಗಿದ್ದರು.
ಪಂದ್ಯ: 15, ವಿಕೆಟ್: 17, ರನ್: 109
ಆರಂಭಿಕ ಪಂದ್ಯಗಳಿಗೆ ಕಡೆಗಣಿಸಲ್ಪಟ್ಟಿದ್ದ ವೆಸ್ಟ್ ಇಂಡೀಸ್ ಆಲ್ರೌಂಡರ್ ರೊಮಾರಿಯೊ ಶೆಫರ್ಡ್ ನಂತರ ಸಿಕ್ಕ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಂಡು, ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಉಪಯುಕ್ತ ಕೊಡುಗೆ ನೀಡಿದರು. ಸಿಎಸ್ಕೆ ಎದುರು ಸ್ಪೋಟಕ ಅರ್ಧಶತಕ ಸಿಡಿಸಿ ಆರ್ಸಿಬಿ ನಿರೀಕ್ಷೆಗೂ ಮೀರಿದ ಮೊತ್ತ ಪೇರಿಸಲು ನೆರವಾಗಿದ್ದರು.
ಪಂದ್ಯ: 8, ರನ್: 70, ವಿಕೆಟ್: 6
ಫಾಫ್ ಡು ಪ್ಲೆಸಿಸ್ ಅವರಿಂದ ತೆರವಾಗಿದ್ದ ಆರಂಭಿಕನ ಸ್ಥಾನವನ್ನು ಸಮರ್ಥವಾಗಿ ತುಂಬಿದವರು ಫಿಲ್ ಸಾಲ್ಟ್. ಜತೆಗೆ ಅಗ್ರ ಕ್ರಮಾಂಕದಲ್ಲಿ ಕೊಹ್ಲಿ ಮೇಲಿನ ಭಾರ ವನ್ನೂ ಸಾಕಷ್ಟು ಇಳಿಸಿದರು. ಪವರ್ಪ್ಲೇನಲ್ಲಿ ಹೆಚ್ಚು ಪವರ್ಫುಲ್ ಆಟವಾಡಲು ನೆರವಾದರು. ಉದ್ಘಾಟನಾ ಮತ್ತು ಮೊದಲ ಕ್ವಾಲಿಫೈಯರ್ನಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದರು.
ಪಂದ್ಯ: 13, ರನ್: 403
ಬರೋಬ್ಬರಿ 15 ವರ್ಷಗಳ ಬಳಿಕ ಆರ್ಸಿಬಿ ತಂಡಕ್ಕೆ ಮರಳಿದ ವೇಗಿ ಭುವನೇಶ್ವರ್ ಕುಮಾರ್ ತನ್ನ ಮೂಲ ತಂಡಕ್ಕೆ ಅನುಭವದ ಧಾರೆ ಎರೆದರು. ನಿರ್ಣಾಯಕ ಸಂದರ್ಭಗಳಲ್ಲಿ ವಿಕೆಟ್ ಕಬಳಿಸುವ ಮೂಲಕ ಹ್ಯಾಸಲ್ವುಡ್ಗೆ ಸಮರ್ಥ ಬೆಂಬಲ ಒದಗಿಸಿದರು.
ಪಂದ್ಯ: 14, ವಿಕೆಟ್: 17
ಸ್ಲಾಗ್ ಓವರ್ಗಳಲ್ಲಿ ಆರ್ಸಿಬಿ ಮೊತ್ತ ಏರಿಸುವ ಕೆಲಸವನ್ನು ಸಮರ್ಥವಾಗಿ ನಿಭಾಯಿಸಿದವರು ಟಿಮ್ ಡೇವಿಡ್. ಚೇಸಿಂಗ್ನಲ್ಲೂ ಎದುರಿಸಿದ ಅಲ್ಪ ಎಸೆತಗಳಲ್ಲಿ ದಡ ಸೇರಿಸಲು ಶ್ರಮಿಸಿದರು. ಪಂಜಾಬ್ ವಿರುದ್ಧ ತವರಿನ ಪಂದ್ಯದಲ್ಲಿ ಆರ್ಸಿಬಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿದಾಗ ಮಾನ ಕಾಪಾಡಿದ್ದರು.
ಪಂದ್ಯ: 12, ರನ್: 187
ಅಲ್ಪ ಮಟ್ಟದ ಕೊಡುಗೆಗಳನ್ನು ನೀಡಿದ ನಡುವೆಯೂ ದೊಡ್ಡ ಮಟ್ಟದ ಪರಿಣಾಮಗಳನ್ನು ಬೀರಿದವರು ಸುಯಶ್ ಶರ್ಮ. ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಇನಿಂಗ್ಸ್ನ 18ನೇ ಓವರ್ನಲ್ಲಿ ಕೇವಲ 6 ರನ್ ಬಿಟ್ಟುಕೊಟ್ಟು ಗೆಲುವಿಗೆ ನೆರವಾದರು. ಮೊದಲ ಕ್ವಾಲಿಫೈಯರ್ನಲ್ಲಿ 17 ರನ್ಗಳಿಗೆ 3 ವಿಕೆಟ್ ಕಬಳಿಸಿ ಪಂಜಾಬ್ಗೆ ಕಡಿವಾಣ ಹಾಕಿದರು.
ಪಂದ್ಯ: 14, ವಿಕೆಟ್: 8
ಐಪಿಎಲ್ಗೆ ಪದಾರ್ಪಣೆ ಮಾಡಿದ ತಂಡಕ್ಕೆ ಮತ್ತೆ ಮರಳಿದ ಕನ್ನಡಿಗ ದೇವದತ್ ಪಡಿಕ್ಕಲ್ ಹಿಂದಿನ ಲಯವನ್ನೂ ಕಂಡುಕೊಂಡರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿ 2 ಅರ್ಧಶತಕಗಳನ್ನು ಬಾರಿಸಿದರು. ಆದರೆ ಗಾಯದಿಂದಾಗಿ ಟೂರ್ನಿಯ ನಡುವೆ ಹೊರಬಿದ್ದರು.
ಪಂದ್ಯ: 10, ರನ್: 247
ಆರ್ಸಿಬಿಗೆ 18ರ ಅದೃಷ್ಟ ಪ್ರಶಸ್ತಿ ಗೆದ್ದುಕೊಡುವಲ್ಲಿ ವರವಾಗಿದೆ. 18 ನಂಬರ್ ಜೆರ್ಸಿ ಧರಿಸುವ ವಿರಾಟ್ ಕೊಹ್ಲಿ ತಂಡದ ಸ್ಟಾರ್ ಆಟಗಾರನಾಗಿದ್ದರೆ, 18ನೇ ಆವೃತ್ತಿಯೂ ಪ್ರಶಸ್ತಿ ಬರ ನೀಗಿಸಿದೆ. 2025ರ ಜೂನ್ 3ರಂದು ಅಂದರೆ ಇಲ್ಲೂ 18 (3+6+2+0+2+5=18) ಆರ್ಸಿಬಿಗೆ ವರದಾನವಾಗಿದೆ.
ವಿರಾಟ್ ಕೊಹ್ಲಿ ಫೈನಲ್ ಪಂದ್ಯದ ಕೊನೇ 2 ಎಸೆತಗಳ ಬಳಿಕ ಆರ್ಸಿಬಿ ತಂಡಕ್ಕೆ ಪ್ರಶಸ್ತಿ ಗೆಲುವು ಖಚಿತವಾಗುತ್ತಿದ್ದಂತೆ ಮೈದಾನದಲ್ಲೇ ಆನಂದಬಾಷ್ಪ ಸುರಿಸಿ, 18 ವರ್ಷಗಳ ಕಪ್ ಕನಸು ನನಸಾದ ಸಂಭ್ರಮ ಆಚರಿಸಿದರು. ಗೆಲುವಿನ ಬಳಿಕ ಆರ್ಸಿಬಿ ತಂಡದ ಎಲ್ಲ ಆಟಗಾರರು ವಿರಾಟ್ ಕೊಹ್ಲಿ ಅವರನ್ನು ಬಿಗಿದಪ್ಪಿಕೊಂಡು ವಿಜಯೋತ್ಸವ ಆಚರಿಸಿದರು. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಕೂಡ ಅಪಾರ ಸಂಭ್ರಮ ಹಂಚಿಕೊಂಡರು.