

ನವದೆಹಲಿ: ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ಪದಕ ವಿಜೇತ ವೇಟ್ಲಿಫ್ಟರ್ ಅಚಿಂತ ಶೆಯುಲಿ ಪಟಿಯಾಲದ ಎನ್ಐಎಸ್ನಲ್ಲಿ ರಾತ್ರಿಯ ವೇಳೆಗೆ ಮಹಿಳೆಯರ ಹಾಸ್ಟೆಲ್ಗೆ ನುಗ್ಗಲು ಯತ್ನಿಸಿ ಸಿಕ್ಕಿಬಿದ್ದಿರುವ ಕಾರಣ, ಪ್ಯಾರಿಸ್ ಒಲಿಂಪಿಕ್ಸ್ ಪೂರ್ವಸಿದ್ಧತಾ ಶಿಬಿರದಿಂದ ಹೊರಬಿದ್ದಿದ್ದಾರೆ. ಇದರಿಂದಾಗಿ 22 ವರ್ಷ ಅಚಿಂತ 73 ಕೆಜಿ ವಿಭಾಗದ ವೇಟ್ಲಿಫ್ಟಿಂಗ್ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವ ಅವಕಾಶದಿಂದಲೂ ವಂಚಿತರಾಗಿದ್ದಾರೆ.
ಗುರುವಾರ ರಾತ್ರಿಯ ವೇಳೆ ಅಚಿಂತ ಲೇಡಿಸ್ ಹಾಸ್ಟೆಲ್ಗೆ ಅಕ್ರಮ ಪ್ರವೇಶ ಮಾಡಲು ಯತ್ನಿಸಿದಾಗ ಭದ್ರತಾ ಸಿಬ್ಬಂದಿ ತಡೆದಿದ್ದರು. ಈ ಟನೆಯ ವಿಡಿಯೋ ಕೂಡ ನಂತರದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಪ್ರಮುಖ ಸಾಕ್ಷ್ಯ ಆಗಿದ್ದರಿಂದ ಯಾವುದೇ ಹೆಚ್ಚಿನ ತನಿಖೆಯನ್ನೂ ನಡೆಸದೆ ಅಚಿಂತ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಶಿಬಿರದಿಂದ ಹೊರಬಿದ್ದಿರುವುದರಿಂದ ಅಚಿಂತ, ಈ ತಿಂಗಳು ಥಾಯ್ಲೆಂಡ್ನ ಫುಕೆಟ್ನಲ್ಲಿ ಒಲಿಂಪಿಕ್ಸ್ ಅರ್ಹತೆಗಾಗಿ ನಡೆಯಲಿರುವ ಐಡಬ್ಲ್ಯುಎಫ್ ವಿಶ್ವಕಪ್ನಲ್ಲಿ ಸ್ಪರ್ಧಿಸುವ ಅವಕಾಶ ತಪ್ಪಿಸಿಕೊಂಡಿದ್ದಾರೆ. ಇದು ಅವರ ಪ್ಯಾರಿಸ್ ಒಲಿಂಪಿಕ್ಸ್ ಕನಸನ್ನೂ ಭಗ್ನಗೊಳಿಸಿದೆ. ಒಲಿಂಪಿಕ್ಸ್ ಅರ್ಹತಾ ರ್ಯಾಂಕಿಂಗ್ನಲ್ಲಿ 27ನೇ ಸ್ಥಾನದಲ್ಲಿದ್ದ ಅಚಿಂತ, ಕಾಂಟಿನೆಂಟಲ್ ಕೋಟಾದಲ್ಲಿ ಅರ್ಹತೆ ಅವಕಾಶ ಹೊಂದಿದ್ದರು.
ಅಶಿಸ್ತಿನ ವರ್ತನೆಗಾಗಿ ಅಚಿಂತರನ್ನು ಕೂಡಲೆ ಶಿಬಿರದಿಂದ ಹೊರಹಾಕಲಾಗಿದೆ ಎಂದು ಭಾರತೀಯ ವೇಟ್ಲಿಫ್ಟಿಂಗ್ ಒಕ್ಕೂಟದ ಅಧಿಕಾರಿ ತಿಳಿಸಿದ್ದಾರೆ. ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಎನ್ಐಎಸ್ ಪಟಿಯಾಲದ ನಿರ್ದೇಶಕ ವಿನೀತ್ ಕುಮಾರ್ ಗಮನಕ್ಕೂ ತರಲಾಗಿದೆ. ಪಟಿಯಾಲದಲ್ಲಿ ಪುರುಷ-ಮಹಿಳಾ ಕ್ರೀಡಾಪಟುಗಳಿಗೆ ಪ್ರತ್ಯೇಕ ಹಾಸ್ಟೆಲ್ಗಳಿವೆ. ಮಹಿಳಾ ಹಾಸ್ಟೆಲ್ನಲ್ಲಿ ಸದ್ಯ ಮಹಿಳಾ ಬಾಕ್ಸರ್ಗಳು, ಅಥ್ಲೀಟ್ಗಳು ಮತ್ತು ಕುಸ್ತಿಪಟುಗಳು ಇದ್ದಾರೆ.
ಅಚಿಂತ 2022ರ ರ್ಬಮಿಂಗ್ಹ್ಯಾಂ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಹೊಸ ಕೂಟದಾಖಲೆಯೊಂದಿಗೆ ಚಿನ್ನ ಗೆದ್ದಿದ್ದರು. ಈ ಮುನ್ನ ಮತ್ತೋರ್ವ ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ವಿಜೇತ ವೇಟ್ಲಿಫ್ಟರ್ ಜೆರೆಮಿ ಲಾಲ್ರಿನುಂಗ ವಿರುದ್ಧವೂ ಅಶಿಸ್ತಿನ ವರ್ತನೆಗಾಗಿ ಕ್ರಮ ತೆಗೆದುಕೊಂಡು, ರಾಷ್ಟ್ರೀಯ ಶಿಬಿರದಿಂದ ಹೊರಹಾಕಲಾಗಿತ್ತು.