

Rohit Sharma : ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗಾಗಿ ಟೀಮ್ ಇಂಡಿಯಾ ಪೂರ್ವ ತಯಾರಿ ನಡೆಸುತ್ತಿದೆ. ಬಿಸಿಸಿಐ ಆಯ್ಕೆ ಸಮಿತಿ ಶೀಘ್ರದಲ್ಲೇ ಈ ಎರಡು ಸರಣಿಗಳಿಗೆ ತಂಡಗಳನ್ನು ಪ್ರಕಟಿಸಲಿದೆ. ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಸರಣಿಯಲ್ಲಿ ವಿಫಲವಾಗಿರುವ ನಾಯಕ ರೋಹಿತ್ ಶರ್ಮ ತಂಡಕ್ಕೆ ಆಯ್ಕೆಯಾಗುತ್ತಾರಾ? ಅಥವಾ ಇಲ್ಲವೇ? ಎಂಬುದು ಕೂಡ ಸದ್ಯ ಅನುಮಾನಾಸ್ಪದವಾಗಿದೆ. ಈ ಬಗ್ಗೆ ಬಿಸಿಸಿಐ ಮೂಲಗಳು ಸ್ಪಷ್ಟನೆ ನೀಡಿವೆ.
ಸದ್ಯ ರೋಹಿತ್ ಶರ್ಮ ಫಾರ್ಮ್ ಕೊರತೆ ಎದುರಿಸುತ್ತಿದ್ದಾರೆ. ಅವರಿಗೆ ವಿಶ್ರಾಂತಿ ನೀಡಿ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಲಾಗುವುದು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಕಣಕ್ಕೆ ಇಳಿಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಅಲ್ಲದೆ, ಇಂಗ್ಲೆಂಡ್ ವಿರುದ್ಧದ ಸರಣಿಯು ಕೂಡ ರೋಹಿತ್ ನಾಯಕತ್ವದಲ್ಲೇ ನಡೆಯಲಿದೆ.
ರೋಹಿತ್ಗೆ ಕೊನೆಯ ಅವಕಾಶ ನೀಡಲು ಬಿಸಿಸಿಐ ಸಿದ್ಧವಾಗಿದೆ ಎಂಬ ವರದಿಗಳಿವೆ. ಒಂದು ವೇಳೆ ಆಸೀಸ್ ಪ್ರವಾಸದ ವೈಫಲ್ಯ ಇಲ್ಲೂ ಮರುಕಳಿಸಿದರೆ, ರೋಹಿತ್ ಅವರಿಗೆ ಇದು ಕೊನೆಯ ಐಸಿಸಿ ಟೂರ್ನಿಯಾದರೂ ಆಶ್ಚರ್ಯವಿಲ್ಲ. ರೋಹಿತ್ ಜೊತೆಗೆ ವಿರಾಟ್ ಕೊಹ್ಲಿಗೂ ಮತ್ತೊಂದು ಅವಕಾಶ ಸಿಗಲಿದೆ. ಸದ್ಯ ವಿರಾಟ್ ಅವರ ಫಾರ್ಮ್ ಕೂಡ ಉತ್ತಮವಾಗಿಲ್ಲ. ಆದರೆ, ಬಿಸಿಸಿಐ ಆಯ್ಕೆಗಾರರು ಹಿರಿಯ ಆಟಗಾರರ ಮೇಲೆ ನಂಬಿಕೆ ಇಟ್ಟಿದ್ದಾರೆ. ಜನವರಿ 12ರೊಳಗೆ ಚಾಂಪಿಯನ್ಸ್ ಟ್ರೋಫಿಗೆ ಬಿಸಿಸಿಐ ತಂಡ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಗೂ ಇನ್ನು 2 ರಿಂದ 3 ದಿನಗಳಲ್ಲಿ ತಂಡಗಳನ್ನು ಪ್ರಕಟಿಸಲಿದೆ.
ಸದ್ಯ ಬೆನ್ನು ನೋವಿನಿಂದ ಬಳಲುತ್ತಿರುವ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಮೊಣಕಾಲಿನ ಊತದಿಂದಾಗಿ ಆಸ್ಟ್ರೇಲಿಯಾ ಸರಣಿಯಿಂದ ಹೊರಗುಳಿದಿದ್ದ ಹಿರಿಯ ವೇಗಿ ಮೊಹಮ್ಮದ್ ಶಮಿ ತಂಡಕ್ಕೆ ಮರಳುವ ಸಾಧ್ಯತೆ ಇದೆ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ರಿಷಭ್ ಪಂತ್ ಅವರಿಗೆ ವಿಶ್ರಾಂತಿ ನೀಡುವ ನಿರೀಕ್ಷೆಯಿದೆ. ಅದು ನಿಜವಾದರೆ ಅಂತಿಮ ತಂಡದಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗಲಿದೆ. ಇಂಗ್ಲೆಂಡ್ ಏಕದಿನ ಸರಣಿಗೆ ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್ ಮತ್ತು ಅರ್ಷದೀಪ್ ಸಿಂಗ್ ಆಯ್ಕೆಯಾಗುವ ನಿರೀಕ್ಷೆಯಿದೆ. (ಏಜೆನ್ಸೀಸ್)