RCBಗೆ ಇದು ಕೊನೆಯ ಅವಕಾಶ: ಮತ್ತೆ ಆ ಒಂದು ತಪ್ಪು ಮರುಕಳಿಸಿದ್ರೆ ಈ ಬಾರಿಯೂ ಕಪ್​ ನಮ್ಮದಲ್ಲ!

RCB
Published on

RCB : ಪ್ರಸ್ತುತ ನಡೆಯುತ್ತಿರುವ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್ ಹಂತವು ಅಂತಿಮ ಹಂತಕ್ಕೆ ತಲುಪಿದೆ. ಕಳೆದ 66 ದಿನಗಳಿಂದ ನಡೆಯುತ್ತಿರುವ ಲೀಗ್ ಹಂತವು ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಲಖನೌ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ನಡುವಿನ ಪಂದ್ಯದೊಂದಿಗೆ ಕೊನೆಗೊಳ್ಳಲಿದೆ. ಈ ಸೀಸನ್​ನಲ್ಲಿ ನಾಲ್ಕು ತಂಡಗಳು 'ಪ್ಲೇ-ಆಫ್' ತಲುಪಿವೆ. ಆದಾಗ್ಯೂ, ಇಂದಿನ ಪಂದ್ಯವನ್ನು ಕಡೆಗಣಿಸುವಂತಿಲ್ಲ ಏಕೆಂದರೆ, ಆರ್​ಸಿಬಿ ಪಾಲಿಗೆ ಈ ಪಂದ್ಯದ ಬಹಳ ನಿರ್ಣಾಯಕವಾಗಿದೆ.

'ಪ್ಲೇ-ಆಫ್' ತಲುಪಿರುವ ನಾಲ್ಕು ತಂಡಗಳಲ್ಲಿ ಒಂದಾದ ಆರ್‌ಸಿಬಿಗೆ ಟಾಪ್-2 ರಲ್ಲಿ ಸ್ಥಾನ ಗಿಟ್ಟಿಸಲು ಇದು ಕೊನೆಯ ಅವಕಾಶವಾಗಿದೆ. ಮಾರ್ಚ್ 22 ರಂದು ಈಡನ್ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಕೋಲ್ಕತ ನೈಟ್​ ರೈಡರ್ಸ್​ ವಿರುದ್ಧದ ಗೆಲುವಿನೊಂದಿಗೆ ಐಪಿಎಲ್​ನಲ್ಲಿ ಶುಭಾರಂಭ ಕಂಡ ಬೆಂಗಳೂರು, ಈಗ ಲಖನೌದಲ್ಲಿ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದು ಲೀಗ್​ ಪಂದ್ಯವನ್ನು ಯಶಸ್ವಿಯಾಗಿ ಕೊನೆಗೊಳಿಸಿ, ಟಾಪ್-2 ತಲುಪುವ ಗುರಿಯೊಂದಿಗೆ ಕಣಕ್ಕೆ ಇಳಿಯುತ್ತಿದೆ. ಮತ್ತೊಂದೆಡೆ, ಈ ಸೀಸನ್​ನಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಗದ ಲಖನೌ, ಕನಿಷ್ಠ ತನ್ನ ಗೆಲುವಿನೊಂದಿಗೆ ಪ್ರಸ್ತಕ್ತ ಟೂರ್ನಿಗೆ ವಿದಾಯ ಹೇಳಲು ಬಯಸಿದೆ.

ಬೆಂಗಳೂರು ತಂಡಕ್ಕೆ ಆರಂಭಿಕ ಆಟಗಾರರಾದ ಫಿಲ್ ಸಾಲ್ಟ್ ಮತ್ತು ಕೊಹ್ಲಿ ಉತ್ತಮ ಆರಂಭ ನೀಡುತ್ತಿದ್ದಾರೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ, ಮೊದಲ ವಿಕೆಟ್‌ಗೆ 7 ಓವರ್‌ಗಳಲ್ಲಿ 80 ರನ್‌ಗಳನ್ನು ಸೇರಿಸಿದರು. ನಂತರ ಬಂದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ರಜತ್ ಪಟಿದಾರ್, ಜಿತೇಶ್ ಶರ್ಮಾ, ರೊಮ್ಯಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ ಮತ್ತು ಟಿಮ್ ಡೇವಿಡ್ ತುಂಬಾ ನಿರಸ ಪ್ರದರ್ಶನ ನೀಡಿದರು. ಅವರೆಲ್ಲರ ವೈಫಲ್ಯವು ಪಂದ್ಯದ ಫಲಿತಾಂಶವನ್ನು ಬದಲಾಯಿಸಿತು. ಇಲ್ಲದಿದ್ದರೆ, ಬೆಂಗಳೂರು 200+ ಗುರಿಯನ್ನು ಸುಲಭವಾಗಿ ಬೆನ್ನಟ್ಟುತ್ತಿತ್ತು.

ಇನ್ನು ಕಳೆದ ಪಂದ್ಯದಲ್ಲಿ ಬೌಲರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ರನ್‌ಗಳನ್ನು ಬಿಟ್ಟುಕೊಟ್ಟರು. ಯಶ್ ದಯಾಳ್, ಲುಂಗಿ ಎಂಗಿಡಿ, ರೊಮ್ಯಾರಿಯೊ ಶೆಫರ್ಡ್ ಮತ್ತು ಸುಯಾಶ್ ಅವರು ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ವಿಫಲರಾದರು. ಆದಾಗ್ಯೂ, ಇಂದಿನ ನಿರ್ಣಾಯಕ ಪಂದ್ಯದಲ್ಲಿ ಸಾಮೂಹಿಕ ಜವಾಬ್ದಾರಿಯನ್ನು ತೋರಿಸಿದರೆ, ಆರ್‌ಸಿಬಿ ಟಾಪ್​ 2ರಲ್ಲಿ ಸ್ಥಾನ ಪಡೆಯಲಿದೆ. ಮತ್ತೆ ಏನಾದರೂ ಮಧ್ಯಮ ಕ್ರಮಾಂಕ ಮತ್ತು ಬೌಲಿಂಗ್​ನಲ್ಲಿ ವೈಫಲ್ಯ ಕಂಡರೆ ಆರ್​ಸಿಬಿಗೆ ಹೊಡೆತ ಬೀಳಲಿದ್ದು, ಕಪ್​ ಗೆಲ್ಲುವ ಆಸೆ, ಆಸೆಯಾಗಿಯೇ ಉಳಿಯಲಿದೆ.

ಲಖನೌ ತಂಡವನ್ನು ಕಡೆಗಣಿಸುವಂತಿಲ್ಲ

ಲಖನೌ ತಂಡ ಪ್ಲೇಆಫ್ ಹಂತಕ್ಕೆ ತಲುಪುವ ಅವಕಾಶವನ್ನು ಮಾತ್ರ ಕಳೆದುಕೊಂಡಿದೆ. ಆದರೆ, ಅವರಿನ್ನೂ ತಮ್ಮ ಹೋರಾಟವನ್ನು ಬಿಟ್ಟುಕೊಟ್ಟಿಲ್ಲ. ಕಳೆದ ಎರಡು ಪಂದ್ಯಗಳನ್ನು ನೋಡಿದರೆ ಇದು ಅರ್ಥವಾಗುತ್ತದೆ. ಲಖನೌ ತಂಡವು ಎಸ್​ಆರ್​ಎಚ್​ ತಂಡದ ವಿರುದ್ಧ ತನ್ನದೇ ನೆಲದಲ್ಲಿ 205 ರನ್ ಗಳಿಸಿತು. ಆದರೆ, ಎಸ್​ಆರ್​ಎಚ್​ ಸೋಲುಂಡಿತು. ಗುಜರಾತ್ ತಂಡದ ವಿರುದ್ಧ ಅಹಮದಾಬಾದ್‌ನಲ್ಲಿ 235ರನ್​ಗಳನ್ನು ಪೇರಿಸಿ, ಲಖನೌ ಗೆಲುವು ದಾಖಲಿಸಿತು. ಕಳೆದ ಎರಡು ಪಂದ್ಯಗಳಲ್ಲಿ ಸುಲಭವಾಗಿ 200 ಕ್ಕೂ ಹೆಚ್ಚು ರನ್ ಗಳಿಸಿರುವ ಲಖನೌ ತಂಡ, ಬಲಿಷ್ಠ ಬ್ಯಾಟಿಂಗ್​ನೊಂದಿಗೆ ಆರ್​ಸಿಬಿಗೆ ಸವಾಲಾಗುವುದರಲ್ಲಿ ಅನುಮಾನವೇ ಇಲ್ಲ.

ಲಖನೌ ತಂಡದಲ್ಲಿ ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಾಮ್ ಮತ್ತು ನಿಕೋಲಸ್ ಪೂರನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಎದುರಾಳಿ ಬೌಲರ್‌ಗಳ ಮೇಲೆ ದಾಳಿ ಮನಬಂದಂತೆ ಮಾಡುತ್ತಿದ್ದಾರೆ. ಈ ಮೂವರು ಲಖನೌ ತಂಡದ ಬ್ಯಾಟಿಂಗ್‌ನ ಬೆನ್ನೆಲುಬಾಗಿದ್ದಾರೆ. ಬೌಲಿಂಗ್ ವಿಭಾಗಕ್ಕೆ ಬಂದರೆ, ರೂರ್ಕೆ ಮತ್ತು ಆವೇಶ್ ಖಾನ್ ನಿರಂತರವಾಗಿ ವಿಕೆಟ್ ಪಡೆಯುತ್ತಿದ್ದಾರೆ. ಒಂದು ಪಂದ್ಯದ ಅಮಾನತು ಕಾರಣದಿಂದ ಕಳೆದ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಸ್ಪಿನ್ನರ್ ದಿಗ್ವೇಶ್ ರಾಥಿ ಮತ್ತೆ ತಂಡಕ್ಕೆ ಸೇರಿಕೊಂಡಿರುವುದು ಲಖನೌಗೆ ಪ್ಲಸ್​ ಆಗಿದೆ. ರಾಥಿ ಅವರ ನಡವಳಿಕೆಯನ್ನು ಬದಿಗಿಟ್ಟರೆ, ಅವರು ತಮ್ಮ ಸ್ಪಿನ್‌ನೊಂದಿಗೆ ಬ್ಯಾಟ್ಸ್‌ಮನ್‌ಗಳಿಗೆ ಬಹಳಷ್ಟು ತೊಂದರೆ ನೀಡುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ ಅವರೆಲ್ಲರೂ ನಿರೀಕ್ಷೆಯಂತೆ ಪ್ರದರ್ಶನ ನೀಡಿದರೆ, ಗೆಲುವಿನೊಂದಿಗೆ ವಿದಾಯ ಹೇಳುವುದು ಕಷ್ಟವೇನಲ್ಲ.

ಲಖನೌ ಕ್ರೀಡಾಂಗಣ ಬ್ಯಾಟಿಂಗ್‌ಗೆ ಅನುಕೂಲಕರವಾಗಿದೆ. ಮೂರು ಪಂದ್ಯಗಳಲ್ಲಿ 200 ಕ್ಕಿಂತ ಹೆಚ್ಚಿನ ಸ್ಕೋರ್‌ಗಳು ಇಲ್ಲಿ ದಾಖಲಾಗಿವೆ. ಇವುಗಳಲ್ಲಿ ಒಂದರಲ್ಲಿ 206 ರನ್‌ಗಳ ಗುರಿಯನ್ನು ಸುಲಭವಾಗಿ ಸಾಧಿಸಲಾಯಿತು. ಟಾಸ್ ಗೆದ್ದ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರೆ ಉತ್ತಮ ಎಂಬ ಅಭಿಪ್ರಾಯವಿದೆ. ಇನ್ನು ಮಳೆ ವಿಚಾರಕ್ಕೆ ಬಂದರೆ, ಮಂಗಳವಾರ ಯಾವುದೇ ಮಳೆಯ ಮುನ್ಸೂಚನೆ ಇಲ್ಲ.

ಅಂತಿಮ ತಂಡಗಳು (ಅಂದಾಜು)

ರಾಯಲ್​ ಚಾಲೆಂಜರ್ಸ್​ ಬೆಂಗಳೂರು: ರಜತ್ ಪಾಟಿದಾರ್ (ನಾಯಕ), ಫಿಲ್​ ಸಾಲ್ಟ್, ವಿರಾಟ್​ ಕೊಹ್ಲಿ, ಮಾಯಾಂಕ್ ಅಗರ್ವಾಲ್​, ಜಿತೇಶ್ ಶರ್ಮಾ, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಟಿಮ್ ಶಫರ್ಟ್​, ಭುವನೇಶ್ವರ್, ಸುಯಾಶ್ ಶರ್ಮ, ಯಶ್​ ದಯಾಳ್ ಮತ್ತು ಜೋಶ್ ಹ್ಯಾಸಲ್​ವುಡ್​.​

ಲಖನೌ ಸೂಪರ್​ಜೈಂಟ್ಸ್​: ರಿಷಭ್ ಪಂತ್ (ನಾಯಕ), ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್​ ಪೂರನ್, ಆಯುಷ್ ಬಡೋನಿ, ಸಮದ್, ಹಿಮ್ಮತ್ ಸಿಂಗ್, ಶಹಬಾಜ್, ಆವೇಶ್ ಖಾನ್, ಆಕಾಶ್‌ದೀಪ್ ಮತ್ತು ವಿಲ್ ರೂರ್ಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net