

Dehradun Family: ಸಾಲಭಾದೆಯನ್ನು ತಾಳಲಾರದೇ ಉತ್ತರಾಖಂಡದ ಡೆಹ್ರಾಡೂನ್ ಮೂಲದ ಒಂದೇ ಕುಟುಂಬದ 7 ಮಂದಿ ವಿಷ ಸೇವಿಸಿ ಸಾವಿಗೆ ಶರಣಾಗಿರುವ ಮನಕಲಕುವ ಘಟನೆ ಹರಿಯಾಣದ ಪಂಚಕುಲದಲ್ಲಿ ನಡೆದಿದೆ. ಸೆಕ್ಟರ್ 27ರಲ್ಲಿರುವ ಮನೆಯ ಹೊರಭಾಗದಲ್ಲಿ ಪಾರ್ಕ್ ಮಾಡಿದ್ದ ಕಾರಿನಲ್ಲಿ ಮೃತದೇಹಗಳು ಪತ್ತೆಯಾಗಿದೆ.
ಕೊನೆಯುಸಿರೆಳೆಯುವ ಮುನ್ನ ಮೃತ ಏಳು ಮಂದಿಯಲ್ಲಿ ಓರ್ವ ಸ್ಥಳೀಯ ಜನರೊಂದಿಗೆ ಮಾತನಾಡಿ, ನಾವು ಸಾಲದಲ್ಲಿ ಮುಳುಗಿ ಹೋಗಿದ್ದೇವೆ. ಸಾಲಭಾದೆಯನ್ನು ತಾಳಲಾರದೇ ನಾವು ಈ ದುಡುಕಿನ ಹೆಜ್ಜೆ ಇಟ್ಟಿದ್ದೇವೆ ಎಂದು ಹೇಳಿ, ಉಸಿರು ನಿಲ್ಲಿಸಿದ್ದಾನೆ. ಈ ಮಾಹಿತಿಯನ್ನು ಕಾರಿನಿಂದ ಇಳಿಯಲು ಸಹಾಯ ಮಾಡಿದ ಸ್ಥಳೀಯ ನಿವಾಸಿ ಪುನೀತ್ ರಾಣಾ ಅವರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಮೃತ ಕುಟುಂಬವು ಭಾರೀ ಸಾಲ ಮತ್ತು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿತ್ತು. ಡೆಹ್ರಾಡೂನ್‌ನ ನಿವಾಸಿ ಪ್ರವೀಣ್ ಮಿತ್ತಲ್, ಪಂಚಕುಲದ ಬಾಗೇಶ್ವರ ಧಾಮದಲ್ಲಿ ತಮ್ಮ ಕುಟುಂಬದೊಂದಿಗೆ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಕುಟುಂಬವು ಡೆಹ್ರಾಡೂನ್‌ಗೆ ಹಿಂತಿರುಗುತ್ತಿದ್ದಾಗ ಭಾನುವಾರ ಈ ಘಟನೆ ನಡೆದಿದೆ. ವಿಷ ಸೇವಿಸಿದ್ದ ಕುಟುಂಬ ಕಾರಿನೊಳಗೆ ಹೆಣಗಾಡುತ್ತಿರುವುದನ್ನು ನೋಡಿದ ಸ್ಥಳೀಯ ನಿವಾಸಿಗಳು ಅವರನ್ನು ಹೊರಗೆಳೆದು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಈ ಘಟನೆಯ ಬಗ್ಗೆ ಮಾತನಾಡಿರುವ ಪ್ರತ್ಯಕ್ಷದರ್ಶಿ ಪುನೀತ್, ನಮ್ಮ ಮನೆಯ ಬಳಿಯೇ ಈ ಘಟನೆ ನಡೆದಿದೆ. ಯಾರೋ ಒಬ್ಬರು ಹೊರಗೆ ಕಾರು ನಿಲ್ಲಿಸಿದ್ದಾರೆ ಎಂದು ಹೇಳಿದರು. ನಾವು ಅವರ ಬಳಿ ಹೋಗಿ ವಿಚಾರಿಸಿದಾಗ ಅವರು ಬಾಬಾ ಕಾರ್ಯಕ್ರಮಕ್ಕೆ ಬಂದಿದ್ದೇವೆ ಮತ್ತು ಹೋಟೆಲ್ ಸಿಗಲಿಲ್ಲ ಎಂದು ಹೇಳಿದರು. ಆದ್ದರಿಂದ ಅವರು ಕಾರಿನಲ್ಲೇ ಮಲಗಿದ್ದರು. ಕಾರನ್ನು ಸ್ಥಳಾಂತರಿಸಿ ಬೇರೆಡೆ ನಿಲ್ಲಿಸಲು ಅವರಿಗೆ ಹೇಳಿದೆವು. ಇದಾದ ನಂತರ, ಅವರು ಪರಸ್ಪರ ವಾಂತಿ ಮಾಡಿಕೊಂಡಿರುವುದನ್ನು ಗಮನಿಸಿದೆವು. ಬಳಿಕ ನಾವು ಅವರನ್ನು ಕಾರಿನಿಂದ ಹೊರಗೆಳೆದೆವು ಎಂದು ಪುನೀತ್ ಸುದ್ದಿಗಾರರಿಗೆ ತಿಳಿಸಿದರು.
ಹೊರಗೆಳೆದ ಸಮಯದಲ್ಲಿ ಒಬ್ಬ ವ್ಯಕ್ತಿ ಮಾತ್ರ ಉಸಿರಾಡುತ್ತಿದ್ದ. ಇತರರು ಪ್ರಜ್ಞಾಹೀನರಾಗಿದ್ದರು. ಆ ವ್ಯಕ್ತಿಯನ್ನು ಹೊರಗೆಳೆಯುತ್ತಿದ್ದಂತೆ, ಮಾತನಾಡಲು ಶುರು ಮಾಡಿದ. ಸಾಲಭಾದೆ ತಾಳಲಾರದೇ ವಿಷ ಸೇವಿಸಿದ್ದೇವೆ. ಇನ್ನೂ ಐದು ನಿಮಿಷಗಳಲ್ಲಿ ಸಾಯುತ್ತೇನೆಂದು ಹೇಳಿದ ಎಂದು ಪುನೀತ್ ತಿಳಿಸಿದರು.
ಪೊಲೀಸರು ಸಮಯಕ್ಕೆ ಸರಿಯಾಗಿ ಬಂದರೂ, ಆಂಬ್ಯುಲೆನ್ಸ್ 45 ನಿಮಿಷ ತಡವಾಗಿ ಬಂದಿತು ಎಂದು ಪುನೀತ್ ಆರೋಪಿಸಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕುಟುಂಬ ಸದಸ್ಯರು ಮೃತಪಟ್ಟಿದ್ದಾರೆ. ಮೃತರನ್ನು 42 ವರ್ಷದ ಪ್ರವೀಣ್ ಮಿತ್ತಲ್, ಅವರ ಪಾಲಕರು, ಪತ್ನಿ ಮತ್ತು ಮೂವರು ಮಕ್ಕಳು (ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ) ಎಂದು ಗುರುತಿಸಲಾಗಿದೆ.
ಆರಂಭಿಕ ತನಿಖೆಯಲ್ಲಿ ಇದು ಆತ್ಮಹತ್ಯೆ ಪ್ರಕರಣವೆಂದು ತಿಳಿದುಬಂದಿದೆ. ವಿಧಿವಿಜ್ಞಾನ ತಂಡ ಸ್ಥಳಕ್ಕೆ ತಲುಪಿದ್ದು, ಎಲ್ಲಾ ಪುರಾವೆಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಶ್ಲೇಷಿಸುತ್ತಿದೆ. ಸ್ಥಳದಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪಂಚಕುಲದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹಿಮಾದ್ರಿ ಕೌಶಿಕ್ ಹೇಳಿದ್ದಾರೆ. (ಏಜೆನ್ಸೀಸ್)