ಲಾರ್ಡ್ಸ್ ಮ್ಯಾಜಿಕ್​ಗೆ 37 ವರ್ಷ

1983 world cup.jpg kapil
Published on

ಬೆಂಗಳೂರು: ಯಾವುದೇ ನಿರೀಕ್ಷೆಗಳಿಲ್ಲದೆ ಇಂಗ್ಲೆಂಡ್​ಗೆ ಪ್ರಯಾಣಿಸಿದ್ದ ಭಾರತದ ಯುವ ತಂಡ ಎರಡು ಬಾರಿಯ ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಮೊದಲ ಪಂದ್ಯದಲ್ಲೇ ಸೋಲಿಸಿತ್ತು. ಇದೊಂದು ಆಕಸ್ಮಿಕ ಎಂದುಕೊಳ್ಳುತ್ತಿರುವಷ್ಟರಲ್ಲೇ ಭಾರತ ತಂಡ ಒಂದೊಂದು ಅಚ್ಚರಿಯ ಫಲಿತಾಂಶದೊಂದಿಗೆ ಮುನ್ನಡೆದು ಫೈನಲ್​ಗೂ ದಾಪುಗಾಲಿಟ್ಟಿತ್ತು.

ಲಾರ್ಡ್ಸ್ ಮೈದಾನದಲ್ಲಿ ನಡೆದ ಪ್ರಶಸ್ತಿ ಹೋರಾಟದಲ್ಲಿ ಮತ್ತೊಮ್ಮೆ ಅದೇ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಎದುರಾಗಿತ್ತು. ಈ ಬಾರಿ ಭಾರತ ತಂಡದ ಕಥೆ ಮುಗಿಯಿತು ಎಂದೇ ಎಲ್ಲರೂ ಅಂದುಕೊಂಡಿದ್ದರು. ಸ್ಪೋಟಕ ಬ್ಯಾಟ್ಸ್​ಮನ್ ವಿವ್ ರಿಚರ್ಡ್ಸ್, ಪ್ರಚಂಡ ವೇಗಿಗಳಾದ ಜೋಯೆಲ್ ಗಾರ್ನರ್, ಮಾಲ್ಕಂ ಮಾರ್ಷಲ್, ಮೈಕೆಲ್ ಹೋಲ್ಡಿಂಗ್ ಮತ್ತು ಆಂಡಿ ರಾಬರ್ಟ್ಸ್ ಒಳಗೊಂಡ ವಿಂಡೀಸ್ ತಂಡದೆದುರು ನಿರ್ಣಾಯಕ ಪಂದ್ಯದಲ್ಲಿ ಭಾರತ ಗೆಲ್ಲುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಆದರೆ ಅಸಾಧ್ಯವನ್ನು ಸಾಧ್ಯವಾಗಿರುವ ಸಾಮರ್ಥ್ಯ ಕಪಿಲ್ ದೇವ್ ಸಾರಥ್ಯದ ತಂಡಕ್ಕಿತ್ತು. ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿಸಿದ್ದ ಕಪಿಲ್ ದೇವ್ ಬಳಗ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಪ್ರುಡೆನ್ಶಿಯಲ್ ವಿಶ್ವಕಪ್ ಟ್ರೋಫಿ ಎತ್ತಿಹಿಡಿದಿತ್ತು. ಭಾರತೀಯ ಕ್ರಿಕೆಟ್​ನ ಚಿತ್ರಣವನ್ನೇ ಬದಲಾಯಿಸಿದ ಆ ಗೆಲುವಿಗೆ ಗುರುವಾರ 37 ವರ್ಷ ಪೂರ್ಣಗೊಂಡಿದೆ.

1983ರಲ್ಲಿ ವಿಶ್ವಕಪ್ ಗೆದ್ದ ಟೀಂ ಇಂಡಿಯಾ
1983ರಲ್ಲಿ ವಿಶ್ವಕಪ್ ಗೆದ್ದ ಟೀಂ ಇಂಡಿಯಾ

ಎಂಎಸ್ ಧೋನಿ ಸಾರಥ್ಯದಲ್ಲಿ ಭಾರತ ತಂಡ 2011ರಲ್ಲಿ 2ನೇ ಬಾರಿ ಏಕದಿನ ವಿಶ್ವಕಪ್ ಗೆಲುವು ದಾಖಲಿಸಿದಾಗ ತವರು ಮೈದಾನದಲ್ಲೇ ಕನಸು ನನಸಾದ ಸಾರ್ಥಕ ಕ್ಷಣ ಅದಾಗಿತ್ತು. ಆದರೆ ಅದಕ್ಕೆ 28 ವರ್ಷ ಮುನ್ನ ಭಾರತ ಚೊಚ್ಚಲ ವಿಶ್ವಕಪ್ ಟ್ರೋಫಿ ಜಯಿಸಿದಾಗ ಅದು ಬರೀ ಗೆಲುವಾಗಿರಲಿಲ್ಲ. ಲಾರ್ಡ್ಸ್ ಬಾಲ್ಕನಿಯಲ್ಲಿ ವಿಶ್ವಕಪ್ ಟ್ರೋಫಿ ಸ್ವೀಕರಿಸುತ್ತ ನಾಯಕ ಕಪಿಲ್ ದೇವ್ ಬೀರಿದ್ದ ನಗು ಹೊಸ ಸಂಚಲನವನ್ನೇ ಮೂಡಿಸಿತ್ತು. ಯುವಕರೆಲ್ಲ ಕ್ರಿಕೆಟ್​ನತ್ತ ಆಕರ್ಷಿತರಾಗುವಂತೆ ಮಾಡಿ ಭಾರತದಲ್ಲಿ ಕ್ರಿಕೆಟ್ ಹೊಸ ಧರ್ಮವಾಗುವಂತೆ ಮಾಡಿದ್ದು ಮಾತ್ರವಲ್ಲ, ಕ್ರಿಕೆಟ್​ಗೆ ಹಣದ ಪ್ರವಾಹ ಹರಿದು ಬರುವಂತೆ ಮತ್ತು ಕ್ರಿಕೆಟ್ ಶ್ರೀಮಂತ ಆಟವಾಗಿ ಬೆಳೆದುನಿಲ್ಲುವ ವಿಶ್ವಾಸ ತುಂಬಿದ ಗೆಲುವು ಅದಾಗಿತ್ತು.

ಫೈನಲ್ ಪಂದ್ಯ ಹೀಗಿತ್ತು: 1983ರ ಜೂನ್ 25ರಂದು ಲಾರ್ಡ್ಸ್ ಮೈದಾನದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದಿದ್ದ ಭಾರತ ತಂಡ 54.5 ಓವರ್​ಗಳಲ್ಲಿ 183 ರನ್​ಗಳಿಗೆ ಕುಸಿದಿತ್ತು. ಕೆ. ಶ್ರೀಕಾಂತ್ (38) ಮತ್ತು ಮೊಹಿಂದರ್ ಅಮರ್​ನಾಥ್ (26) ಅಗ್ರ ಸರದಿಯಲ್ಲಿ ತಂಡಕ್ಕೆ ಆಸರೆಯಾಗಿದ್ದರೆ, ಸಂದೀಪ್ ಪಾಟೀಲ್ (27) ಮತ್ತು ಕಪಿಲ್ ದೇವ್ (15) ಮೊತ್ತ ಏರಿಸಿದ್ದರು. ಬಳಿಕ ಮದನ್ ಲಾಲ್ (31ಕ್ಕೆ 3) ಅಮರ್​ನಾಥ್ (12ಕ್ಕೆ 3) ಮಾರಕ ದಾಳಿ ನೆರವಿನಿಂದ 52 ಓವರ್​ಗಳಲ್ಲಿ 140 ರನ್​ಗೆ ವಿಂಡೀಸ್ ತಂಡವನ್ನು ಕಟ್ಟಿಹಾಕಿ, 43 ರನ್​ಗಳಿಂದ ಗೆಲುವು ದಾಖಲಿಸಿತ್ತು.

‘83’ ಸಿನಿಮಾ ಬಿಡುಗಡೆ ಮುಂದೂಡಿಕೆ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 1983ರ ವಿಶ್ವಕಪ್ ಯಶೋಗಾಥೆಯನ್ನು ನಾವು ಈಗಾಗಲೆ ಬೆಳ್ಳಿತೆರೆಯಲ್ಲಿ ನೋಡಬೇಕಾಗಿತ್ತು. ಆದರೆ ಕಳೆದ ಏಪ್ರಿಲ್ 10ರಂದು ಬಿಡುಗಡೆಯಾಗಬೇಕಾಗಿದ್ದ ’83’ ಸಿನಿಮಾ ಲಾಕ್​ಡೌನ್​ನಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಕಬೀರ್ ಖಾನ್ ನಿರ್ದೇಶನದ ಸಿನಿಮಾದಲ್ಲಿ ರಣವೀರ್ ಸಿಂಗ್ ನಾಯಕ ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪತ್ನಿ ರೋಮಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಸಿನಿಮಾದ ಫಸ್ಟ್ ಲುಕ್ ಈಗಾಗಲೆ ಬಿಡುಗಡೆಯಾಗಿದ್ದು, ಟೀಸರ್ ರಿಲೀಸ್ ಮುಂದೂಡಿಕೆಯಾಗಿದೆ. ಸಿನಿಮಾ ಕೂಡ ಸಾಕಷ್ಟು ಸುದ್ದಿಯಲ್ಲಿದೆ.

ಇಬ್ಬರು ಕನ್ನಡಿಗರ ಕೊಡುಗೆ: 83ರ ವಿಶ್ವಕಪ್ ವಿಜೇತ ತಂಡದಲ್ಲಿ ಇಬ್ಬರು ಕನ್ನಡಿಗರೂ ಪ್ರಮುಖ ಕೊಡುಗೆ ನೀಡಿದ್ದರು. ವೇಗಿ ರೋಜರ್ ಬಿನ್ನಿ ಟೂರ್ನಿಯಲ್ಲಿ ಗರಿಷ್ಠ 18 ವಿಕೆಟ್ ಕಬಳಿಸಿದ್ದರು. ಸಯ್ಯದ್ ಕಿರ್ಮಾನಿ ವಿಕೆಟ್ ಕೀಪಿಂಗ್​ನಲ್ಲಿ ಕೆಲವು ಪ್ರಮುಖ ಕ್ಯಾಚ್ ಹಿಡಿಯುವ ಜತೆಗೆ ಬ್ಯಾಟಿಂಗ್​ನಲ್ಲೂ ಉಪಯುಕ್ತ ಕೊಡುಗೆಗಳನ್ನು ನೀಡಿದ್ದರು.

ಅಲ್ಪ ಬಹುಮಾನ ಮೊತ್ತ: ಭಾರತ ಕ್ರಿಕೆಟ್ ತಂಡದ ಆಟಗಾರರು ಈಗ ಕೋಟಿ ಲೆಕ್ಕಾಚಾರದಲ್ಲಿ ಸಂಭಾವನೆ ಗಳಿಸುತ್ತಿ ದ್ದಾರೆ. ಇದಕ್ಕೆಲ್ಲ ಕಾರಣ 1983ರ ವಿಶ್ವಕಪ್ ಗೆಲುವಿನ ನಂತರ ಆದ ಬದಲಾವಣೆ. ಆದರೆ 83ರ ವಿಶ್ವಕಪ್ ವಿಜೇತ ತಂಡದ ಆಟಗಾರರ ಸಂಭಾವನೆ ಸಾವಿರದ ಲೆಕ್ಕಾಚಾರದಲ್ಲೇ ಇತ್ತು. ಕಪಿಲ್ ದೇವ್ ಬಳಗದ ಆಟಗಾರರಿಗೆ ಪ್ರತಿ ಪಂದ್ಯದ ಸಂಭಾವನೆ 1,500 ರೂ. ಆಗಿತ್ತು. ಜತೆಗೆ 200 ರೂ. ದಿನಭತ್ಯೆ. ವಿಶ್ವಕಪ್ ಪ್ರಾಯೋಜಕ ಪ್ರುಡೆನ್ಶಿಯಲ್ ಕಂಪನಿಯಿಂದ ಆಗ 20 ಸಾವಿರ ಪೌಂಡ್ಸ್ ಬಹುಮಾನ ಲಭಿಸಿತ್ತು. ಲತಾ ಮಂಗೇಶ್ಕರ್ ಸಾರಥ್ಯದಲ್ಲಿ ಆಗ ಸಂಗೀತಗೋಷ್ಠಿಯೊಂದನ್ನು ನಡೆಸುವ ಮೂಲಕ ಹಣ ಸಂಗ್ರಹ ಮಾಡಿದ್ದ ಬಿಸಿಸಿಐ, ಎಲ್ಲ ಆಟಗಾರರಿಗೆ ತಲಾ 1 ಲಕ್ಷ ರೂ. ಬಹುಮಾನ ವಿತರಿಸಿತ್ತು. ಕೆಲ ಆಟಗಾರರಿಗೆ ಆಗ ವಿವಿಧ ಜಾಹೀರಾತು ಆಫರ್​ಗಳಿಂದ 30ರಿಂದ 50 ಸಾವಿರ ರೂ. ಮೊತ್ತದ ಒಪ್ಪಂದಗಳು ಲಭಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net