

ಅಯೋಧ್ಯಾ: ಮುಂಬರುವ ದ. ಆಫ್ರಿಕಾ ಪ್ರವಾಸಕ್ಕೆ ಭಾರತ ಟಿ20 ತಂಡದ ಹಂಗಾಮಿ ಮುಖ್ಯ ಕೋಚ್ ಆಗಿ ತೆರಳಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್, ಅದಕ್ಕೆ ಪೂರ್ವಭಾವಿಯಾಗಿ ಆಯೋಧ್ಯೆಯ ರಾಮಮಂದಿರಕ್ಕೆ ತೆರಳಿ ರಾಮಲಲ್ಲನ ದರ್ಶನ ಮಾಡಿದರು.
ಕಳೆದ ಶುಕ್ರವಾರವಷ್ಟೇ 50ನೇ ವಯಸ್ಸಿಗೆ ಕಾಲಿಟ್ಟ ಹಿನ್ನೆಲೆಯಲ್ಲಿ ಅವರು ಪತ್ನಿ ಶೈಲಜಾ ಮತ್ತು ಪುತ್ರಿ ಅಚಿಂತಾ ಜತೆಗೂಡಿ ಶನಿವಾರ ಅಯೋಧ್ಯೆಗೆ ಭೇಟಿ ನೀಡಿದರು.
ದಕ್ಷಿಣ ಆಫ್ರಿಕಾ ವಿರುದ್ಧದ 4 ಪಂದ್ಯಗಳ ಟಿ20 ಸರಣಿ ನವೆಂಬರ್ 8ರಂದು ಡರ್ಬನ್ನಲ್ಲಿ ಶುರುವಾಗಲಿದೆ. ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಟೆಸ್ಟ್ ತಂಡದೊಂದಿಗೆ ಆಸ್ಟ್ರೇಲಿಯಾಕ್ಕೆ ತೆರಳಲಿರುವುದರಿಂದ ಲಕ್ಷ್ಮಣ್ ದಕ್ಷಿಣ ಆಫ್ರಿಕಾದಲ್ಲಿ ತಾತ್ಕಾಲಿಕ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಅವರು ಈ ಹಿಂದೆ ಜಿಂಬಾಬ್ವೆ, ಐರ್ಲೆಂಡ್ನಲ್ಲೂ ಆಗಿನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಗೈರಾದಾಗ ಇದೇ ರೀತಿ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.