ಕೆಎಸ್​ಸಿಎ ಚುನಾವಣೆ: ನವೆಂಬರ್​ 12ರಿಂದ 15ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ

web ksca
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಹಲವು ಗೊಂದಲ ಹಾಗೂ ವಿಳಂಬದ ಬಳಿಕ ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆಯ (ಕೆಎಸ್​ಸಿಎ) 2025-28ರ ಸಾಲಿನ ಆಡಳಿತ ಮಂಡಳಿಯ ಚುನಾವಣೆಯ ದಿನಾಂಕ ಈಗಾಗಲೆ ಘೋಷಣೆ ಆಗಿದ್ದು, ನೂತನ ಪದಾಧಿಕಾರಿಗಳ ಆಯ್ಕೆಯ ಚುನಾವಣಾ ಪ್ರಕ್ರಿಯೆಯ ವೇಳಾಪಟ್ಟಿಯ ವಿವರ ವಿಜಯವಾಣಿಗೆ ಲಭ್ಯವಾಗಿದೆ. ನವೆಂಬರ್​ 30ರಂದು ನಿಗದಿಯಾಗಿರುವ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ನವೆಂಬರ್​ 12ರ ಬುಧವಾರ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ.

ನಾಮಪತ್ರ ಸಲ್ಲಿಕೆಗೆ ನವೆಂಬರ್​ 15 ಅಂತಿಮ ದಿನವಾಗಿದ್ದು, ಅಭ್ಯರ್ಥಿಗಳು ಮಧ್ಯಾಹ್ನ 12ರಿಂದ ಸಂಜೆ 5 ಗಂಟೆಯವರೆಗೆ ಉಮೇದುವಾರಿಕೆ ಸಲ್ಲಿಸಬಹುದಾಗಿದೆ. ಸ್ವೀಕೃತ ನಾಮಪತ್ರಗಳ ಪರಿಶೀಲನೆ ನವೆಂಬರ್​ 17ರ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಲಿದ್ದು, ಸಂಜೆ 5 ಗಂಟೆಗೆ ಮಾನ್ಯತೆ ಹೊಂದಿರುವ ನಾಮಪತ್ರಗಳ ಪಟ್ಟಿ ಪ್ರಕಟವಾಗಲಿದೆ.

ಅಭ್ಯರ್ಥಿಗಳು ಉಮೇದುವಾರಿಕೆ ಹಿಂಪಡೆಯಲು ನವೆಂಬರ್​ 18 ಅಂತಿಮ ದಿನವಾಗಿದ್ದು, ಮರುದಿನ ಅಂದರೆ 19ರ ಸಂಜೆ 5 ಗಂಟೆಗೆ ಚುನಾವಣೆಯ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ನವೆಂಬರ್​ 30ರಂದು ಬೆಳಗ್ಗೆ 11ರಿಂದ ಸಂಜೆ 7ರವರೆಗೆ ಮತದಾನ ಪ್ರಕ್ರಿಯೆ ಬಳಿಕ ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ. ಮಂಗಳವಾರ ಚುನಾವಣಾಧಿಕಾರಿಯ ನೇಮಕವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಭಾರತದ ತಂಡದ ಮಾಜಿ ವೇಗಿ ಹಾಗೂ ಕೆಎಸ್​ಸಿಎ ಮಾಜಿ ಉಪಾಧ್ಯಕ್ಷ ವೆಂಕಟೇಶ್​ ಪ್ರಸಾದ್​ ಮತ್ತು ಮಾಜಿ ಖಜಾಂಚಿ ವಿನಯ್​ ಮೃತ್ಯುಂಜಯ ಬಣ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಆಗಸ್ಟ್​ನಲ್ಲೇ ಅಧಿಕೃತವಾಗಿ ಘೋಷಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net