

ಹುಬ್ಬಳ್ಳಿ: ವೇಗಿ ವಾಸುಕಿ ಕೌಶಿಕ್ (41ಕ್ಕೆ 7) ತೋರಿದ ಜೀವಮಾನ ಶ್ರೇಷ್ಠ ಬೌಲಿಂಗ್ ನಿರ್ವಹಣೆಯ ನೆರವಿನಿಂದ ಆತಿಥೇಯ ಕರ್ನಾಟಕ ತಂಡ, ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಮೊದಲ ದಿನವೇ ಮೇಲುಗೈ ಸಾಧಿಸಿದೆ.
ರಾಜನಗರ ಕೆಎಸ್ಸಿಎ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಪ್ರವಾಸಿ ಪಂಜಾಬ್ ತಂಡ 152 ರನ್ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. ಕರ್ನಾಟಕ ತಂಡ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 142 ರನ್ಗಳಿಸಿದ್ದು, ಬೃಹತ್ ಮೊತ್ತ ದಾಖಲಿಸುವ ತವಕದಲ್ಲಿದೆ. ರಾಜ್ಯ ತಂಡ ಸದ್ಯ ಇನಿಂಗ್ಸ್ ಮುನ್ನಡೆಯಿಂದ ಕೇವಲ 10 ರನ್ ಹಿಂದಿದೆ. ಶತಕದತ್ತ ದೃಷ್ಟಿನೆಟ್ಟಿರುವ ದೇವದತ್ ಪಡಿಕ್ಕಲ್ (80*ರನ್, 80 ಎಸೆತ, 14 ಬೌಂಡರಿ) ಹಾಗೂ ಮನೀಷ್ ಪಾಂಡೆ (13*ರನ್, 22 ಎಸೆತ, 3 ಬೌಂಡರಿ) ಶನಿವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಕೌಶಿಕ್ ಮಾರಕ ಬೌಲಿಂಗ್
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಪಂಜಾಬ್ ನಾಯಕ ಮಂದೀಪ್ ಸಿಂಗ್ ನಿರ್ಧಾರವನ್ನು ವಾಸುಕಿ ಕೌಶಿಕ್ ಒಬ್ಬರೇ ತಲೆಕೆಳಗೆ ಮಾಡಿದರು. ಅವರು ಮೊದಲ ಸ್ಪೆಲ್ನ 8 ಓವರ್ಗಳಲ್ಲಿ ಪ್ರಭ್ಸಿಮ್ರಾನ್ ಸಿಂಗ್ (5), ಅಭಿಷೇಕ್ ಶರ್ಮ (26), ನಮನ್ ಧೀರ್ (4) ಹಾಗೂ ಮಂದೀಪ ಸಿಂಗ್ ಅವರನ್ನು ಪೆವಿಲಿಯನ್ಗೆ ಕಳುಹಿಸಿ ಪ್ರವಾಸಿ ತಂಡಕ್ಕೆ ಆರಂಭದಲ್ಲಿಯೇ ಬಲವಾದ ಹೊಡೆತ ನೀಡಿದರು. ಈ ಹಂತದಲ್ಲಿ ಜತೆಗೂಡಿದ ನೇಹಲ್ ವಧೇರಾ ಹಾಗೂ ವಿಕೆಟ್ ಕೀಪರ್ ಗೀತಾಂಶ್ ಖೇರ ತಂಡವನ್ನು ಅಪಾಯದಿಂದ ಪಾರು ಮಾಡುವ ಪ್ರಯತ್ನದಲ್ಲಿದ್ದರು. ಆದರೆ, 2ನೇ ಸ್ಪೆಲ್ನಲ್ಲಿ ದಾಳಿಗೆ ಇಳಿದ ಕೌಶಿಕ್, ಗೀತಾಂಶ್ ಖೇರ ವಿಕೆಟ್ ಕಿತ್ತು ಈ ಜತೆಯಾಟವನ್ನು ಬೇರ್ಪಡಿಸಿದರು. ಭೋಜನ ವಿರಾಮಕ್ಕೆ ಮುನ್ನ ಉರುಳಿದ ಪಂಜಾಬ್ ತಂಡದ ಎಲ್ಲ 5 ವಿಕೆಟ್ಗಳು ಕೌಶಿಕ್ ಪಾಲಾದವು. ಬಳಿಕ ಪಂಜಾಬ್ ತಂಡ ಹೆಚ್ಚು ಪ್ರತಿರೋಧ ತೋರಲಿಲ್ಲ. ಪಂದ್ಯದ 38ನೇ ಓವರ್ನಲ್ಲಿ ಸತತ 2 ಎಸೆತಗಳಲ್ಲಿ ನೇಹಲ್ ಹಾಗೂ ಸಿದ್ದಾರ್ಥ್ ಕೌಲ್ ವಿಕೆಟ್ ಪಡೆದ ಕೌಶಿಕ್ ಹ್ಯಾಟ್ರಿಕ್ ಅವಕಾಶ ಹೊಂದಿದ್ದರು. ಆದರೆ, ಅರ್ಷದೀಪ್ ಸಿಂಗ್ ಸಿಕ್ಸರ್ ಸಿಡಿಸಿ ಹ್ಯಾಟ್ರಿಕ್ ತಪ್ಪಿಸಿದರು.
ಜೀವನಶ್ರೇಷ್ಠ ಪ್ರದರ್ಶನ
ವಾಸುಕಿ ಕೌಶಿಕ್ ಪಂದ್ಯದಲ್ಲಿ 41 ರನ್ ನೀಡಿ 7 ವಿಕೆಟ್ ಕಬಳಿಸಿದ್ದು ಪ್ರಥಮ ದರ್ಜೆ ಕ್ರಿಕೆಟ್ನ ಇನಿಂಗ್ಸ್ವೊಂದರಲ್ಲಿ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಈ ಹಿಂದೆ ಅವರು ಕೇರಳ ವಿರುದ್ಧ 54 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. 2022&23ರ ರಣಜಿ ಋತುವಿನಲ್ಲಿ ಕೌಶಿಕ್ 5 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದರು.
ರೋಹಿತ್ ಪದಾರ್ಪಣೆ
ಕರ್ನಾಟಕ ಪರ ಈ ಪಂದ್ಯದ ಮೂಲಕ ಹುಬ್ಬಳ್ಳಿ ಹುಡುಗ ಎಡಗೈ ಸ್ಪಿನ್ನರ್ ರೋಹಿತ್ ಕುಮಾರ್ ಎ.ಸಿ. ರಣಜಿಗೆ ಪದಾರ್ಪಣೆ ಮಾಡಿದರು. ಅವರು ಬಲ್ತೇಜ್ ಸಿಂಗ್ ವಿಕೆಟ್ ಪಡೆದು ಪಂಜಾಬ್ ತಂಡದ ಇನಿಂಗ್ಸ್ ಕೊನೆಗೊಳಿಸಿದರು.
ಪಂಜಾಬ್: 46.5 ಓವರ್ಗಳಲ್ಲಿ 152 (ಅಭಿಷೇಕ್ ಶರ್ಮ 26, ನೇಹಲ್ ವಧೇರಾ 44, ಗೀತಾಂಶ್ ಖೇರ 27, ಮಯಾಂಕ್ ಮಾರ್ಕಂಡೆ 26*, ವಾಸುಕಿ ಕೌಶಿಕ್ 41ಕ್ಕೆ 7, ವೈಶಾಕ್ 35ಕ್ಕೆ 2, ರೋಹಿತ್ ಕುಮಾರ್ ಎ.ಸಿ. 18ಕ್ಕೆ 1). ಕರ್ನಾಟಕ: 33 ಓವರ್ಗಳಲ್ಲಿ 3 ವಿಕೆಟ್ಗೆ 142 (ಸಮರ್ಥ್ 38, ಮಯಾಂಕ್ 0, ದೇವದತ್ ಪಡಿಕ್ಕಲ್ 80*, ನಿಕಿನ್ 8, ಮನೀಷ್ ಪಾಂಡೆ 13*, ಅರ್ಷದೀಪ್ ಸಿಂಗ್ 37ಕ್ಕೆ 1, ಪ್ರೇರಿತ್ 18ಕ್ಕೆ 1, ನಮನ್ ಧೀರ್ 13ಕ್ಕೆ 1).