

ನವದೆಹಲಿ: ಬಾರ್ಬಡೋಸ್ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ 7 ರನ್ಗಳ ಅಂತರದಿಂದ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ, 13 ವರ್ಷಗಳ ಬಳಿಕ ಭಾರತಕ್ಕೆ ವಿಶ್ವಕಪ್ ತಂದಕೊಟ್ಟಿತು. ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಭಾರತಕ್ಕೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಲಕ್ಷಾಂತರ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿ, ಪ್ರಶಂಸೆ, ಮೆಚ್ಚುಗೆಗೆಳ ಮಹಾಪೂರವನ್ನೇ ಹರಿಸಿದರು. ಬಿಸಿಸಿಐ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾದ ವಿಶ್ವಕಪ್ ವೀರರಿಗೆ 125 ಕೋಟಿ ರೂ. ಬಹುಮಾನ ನೀಡಿ, ಸನ್ಮಾನಿಸಲಾಯಿತು.
2024ರ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಿಂದಲೂ ಅತ್ಯಂತ ಕಳಪೆ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ ಮೇಲೆ ತಂಡಕ್ಕೆ ಭರವಸೆ ಕುಸಿದುಹೋಗಿತ್ತು. ಫೈನಲ್ ಪಂದ್ಯವನ್ನು ಹೊರತುಪಡಿಸಿದರೆ, ಉಳಿದೆಲ್ಲಾ ಮ್ಯಾಚ್ಗಳಲ್ಲಿಯೂ ವಿರಾಟ್ ಆರ್ಭಟಿಸುವಲ್ಲಿ ವಿಫಲರಾದರು. ಆರಂಭದ ಪಂದ್ಯದಿಂದಲೂ ರೋಹಿತ್ ಶರ್ಮ ಜತೆ ಓಪನಿಂಗ್ ಬಂದ ವಿರಾಟ್, ಸ್ಪೋಟಕ ಇನ್ನಿಂಗ್ಸ್ ಕೊಡುವಲ್ಲಿ ಬ್ಯಾಕ್ ಟು ಬ್ಯಾಕ್ ಎಡವಿದರು.
ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವುದರ ಜತೆ ಅತ್ಯಧಿಕ ರನ್ ಗಳಿಸಿ, ಸ್ಟಾರ್ ಆಟಗಾರನಾಗಿ ಮಿಂಚಿದ್ದ ವಿರಾಟ್ ಕೊಹ್ಲಿ, ವಿಶ್ವಕಪ್ ಟೂರ್ನಿಯಲ್ಲಿ ನಿರೀಕ್ಷೆಯಂತೆ ಆಟವಾಡಲಿಲ್ಲ. ಇದು ಹಲವರಿಗೆ ಭಾರೀ ಅಚ್ಚರಿ ಮೂಡಿಸಿದ್ದಲ್ಲೇ ಗೊಂದಲ ಉಂಟುಮಾಡಿತ್ತು. ಮೊದಲ ಪಂದ್ಯದಿಂದಲೂ ಸತತವಾಗಿ ಅಬ್ಬರಿಸುವಲ್ಲಿ ವಿಫಲರಾಗಿದ್ದ ವಿರಾಟ್ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 59 ಎಸೆತಗಳಲ್ಲಿ 76 ರನ್ ಸಿಡಿಸಿ, ತಂಡದ ಗೆಲುವಿಗೆ ಪ್ರಮುಖ ಕಾರಣರಾಗಿ ಹೊರಹೊಮ್ಮಿದರು.
ವಿಶ್ವಕಪ್ ಗೆದ್ದ ಬಳಿಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಬ್ಬರಕ್ಕೆ ಫಿದಾ ಆದ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದೇ ಆದರೂ ಕೊಹ್ಲಿಗಿದ್ದ ಬೇಸರ ಮರೆಯಾಗಿರಲಿಲ್ಲ. ಅಂದು ಸತತವಾಗಿ ಕಳಪೆ ಫಾರ್ಮ್ನಲ್ಲಿದ್ದ ತನಗೆ ಧೈರ್ಯ ಹೇಳಿ, ಪ್ರೋತ್ಸಾಹದ ಮಾತುಗಳನ್ನು ಅಲ್ಲಲ್ಲಿ ಹೇಳುವವರ ಮಧ್ಯೆ ವಿರಾಟ್ ಬೆನ್ನುತಟ್ಟಿ, ಮೆಚ್ಚಿ ಮಾತನಾಡಿದ್ದು ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್. ಈ ವಿಷಯವನ್ನು ಸ್ವತಃ ಕೊಹ್ಲಿ ಮನಬಿಚ್ಚಿ ಹಂಚಿಕೊಂಡಿದ್ದಾರೆ.
"ಆ ದಿನ ಯಾವಾಗಲೂ ನನ್ನ ಮನಸ್ಸಿನಲ್ಲಿ ಉಳಿಯುತ್ತದೆ. ಕಾರಣ, ಇಡೀ ಟೂರ್ನಿಯಲ್ಲಿ ನಾನು ಬಯಸಿದ ಕೊಡುಗೆಯನ್ನು ಮತ್ತು ಒಂದೇ ಒಂದು ಪಂದ್ಯದಲ್ಲಿಯೂ ಉತ್ತಮ ಸ್ಟಾರ್ಟ್ ಕೊಡಲು ಸಾಧ್ಯವಾಗಲಿಲ್ಲ ಎಂಬ ಬೇಸರ ಅಡಗಿತ್ತು. ಈ ಕುರಿತು ರಾಹುಲ್ ದ್ರಾವಿಡ್ ಅವರೊಂದಿಗೆ ಮನಬಿಚ್ಚಿ ಮಾತನಾಡಿದೆ. ಆಗ ಅವರು, ಸಮಯ ಬಂದಾಗ ನೀವು ಫಾರ್ಮ್ಗೆ ಬರುವುದು ಖಚಿತ ಎಂದು ಭರವಸೆ ವ್ಯಕ್ತಪಡಿಸಿದರು. ಈಗ ಅದೆಲ್ಲವೂ ನಡೆದಿದೆ" ಎಂದು ವಿರಾಟ್ ಭಾವುಕರಾಗಿ ಹಂಚಿಕೊಂಡರು,(ಏಜೆನ್ಸೀಸ್).