

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನೀರಸ ನಿರ್ವಹಣೆಯೊಂದಿಗೆ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಕಳೆದ 10 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಸ್ಥಾನಕ್ಕೆ ಕುಸಿದಿದ್ದಾರೆ. 8 ಸ್ಥಾನ ಕುಸಿತದೊಂದಿಗೆ 2014ರ ಬಳಿಕ ಮೊದಲ ಬಾರಿ ಅಗ್ರ 20ರಿಂದ ಹೊರಬಿದ್ದಿರುವ ಕೊಹ್ಲಿ, 22ನೇ ಸ್ಥಾನಕ್ಕಿಳಿದಿದ್ದಾರೆ. ನಾಯಕ ರೋಹಿತ್ ಶರ್ಮ ಕೂಡ 2 ಸ್ಥಾನ ಕುಸಿದು 26ನೇ ಸ್ಥಾನಕ್ಕಿಳಿದಿದ್ದಾರೆ.
ಮಂಗಳವಾರವಷ್ಟೇ 36ನೇ ವರ್ಷಕ್ಕೆ ಕಾಲಿಟ್ಟಿರುವ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯ 6 ಇನಿಂಗ್ಸ್ಗಳಲ್ಲಿ ಕೇವಲ 15.50ರ ಸರಾಸರಿಯಲ್ಲಿ ಕೇವಲ 93 ರನ್ ಗಳಿಸಿದ್ದರು. ಈ ಪೈಕಿ ಬೆಂಗಳೂರು ಟೆಸ್ಟ್ನ 2ನೇ ಇನಿಂಗ್ಸ್ನಲ್ಲಿ 70 ರನ್ ಬಾರಿಸಿದ್ದನ್ನು ಬಿಟ್ಟರೆ, ಇತರ 5 ಇನಿಂಗ್ಸ್ಗಳಲ್ಲಿ 0, 1, 17, 4, 1 ರನ್ಗಳನ್ನಷ್ಟೇ ಗಳಿಸಿದ್ದರು.
2014ರ ಇಂಗ್ಲೆಂಡ್ ಪ್ರವಾಸದ 5 ಇನಿಂಗ್ಸ್ಗಳಲ್ಲಿ ಕೇವಲ 134 ರನ್ ಗಳಿಸಿ ನಿರಾಸೆ ಮೂಡಿಸಿದಾಗ ಕೊಹ್ಲಿ ಕೊನೆಯದಾಗಿ ಅಗ್ರ 20ರಿಂದ ಹೊರಗಿದ್ದರು. ನಂತರ 2014ರ ಡಿಸೆಂಬರ್ನಿಂದ 2024ರ ನವೆಂಬರ್ ತನಕವೂ ಅಗ್ರ 20ರೊಳಗಿದ್ದರು. 2018ರಲ್ಲಿ ವಿಶ್ವ ನಂ. 1 ಬ್ಯಾಟರ್ ಕೂಡ ಆಗಿದ್ದರು. 2019ರಲ್ಲಿ 55.10ಕ್ಕೇರಿದ್ದ ಕೊಹ್ಲಿ ಟೆಸ್ಟ್ ಬ್ಯಾಟಿಂಗ್ ಸರಾಸರಿಯೂ ಈಗ 47.83ಕ್ಕಿಳಿದಿದೆ.