ಯಶಸ್ವಿ ವಿಕ್ಟರಿ ಪರೇಡ್​; ಮುಂಬೈ ಪೊಲೀಸರಿಗೆ ಕೊಹ್ಲಿ, ಜಡೇಜಾ ಸಲಾಂ

web ind vk
Published on

ಮುಂಬೈ: ಸಾವಿರಾರು ಕ್ರಿಕೆಟ್​ ಪ್ರೇಮಿಗಳ ನಡುವೆ ಸಾಗಿದ ವಿಕ್ಟರಿ ಪರೇಡ್​ಗೆ ಬಿಗಿ ಭದ್ರತಾ ವ್ಯವಸ್ಥೆ ಮಾಡಿದ ಮುಂಬೈ ಪೊಲೀಸರಿಗೆ ಟೀಮ್​ ಇಂಡಿಯಾದ ಆಟಗಾರರಾದ ವಿರಾಟ್​ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಶುಕ್ರವಾರ ಧನ್ಯವಾದ ಹೇಳಿದ್ದಾರೆ. ನಾರಿಮನ್​ ಪಾಯಿಂಟ್​ನಿಂದ ಮರೀನ್​ ಡೆವ್​ ಮೂಲಕ ವಾಂಖೆಡೆ ಸ್ಟೇಡಿಯಂಗೆ 2 ಕಿಲೋಮೀಟರ್​ ದೂರ ಸಾಗಿದ ತೆರೆದ ಬಸ್​ ಮೆರವಣಿಗೆಯ ವೇಳೆ ಸಾವಿರಾರು ಜನ ಸೇರಿದ್ದರೂ, ಯಾವುದೇ ಅಹಿತಕರ ಘಟನೆಗಳಿಲ್ಲದೆ ವಿಜಯಯಾತ್ರ ಸುಸೂತ್ರವಾಗಿ ಸಾಗಿತ್ತು.

"ಮುಂಬೈ ಪೊಲೀಸರ ಕೆಲಸ ಅದ್ಭುತವಾದುದು. ನಿಮ್ಮ ಬದ್ಧತೆ ಮತ್ತು ಸೇವೆ ಅಭಿನಂದನಾರ್ಹ. ಜೈ ಹಿಂದ್​' ಎಂದು ಕೊಹ್ಲಿ ಎಕ್ಸ್​ನಲ್ಲಿ ಬರೆದಿದ್ದಾರೆ. ಜಡೇಜಾ ಕೂಡ, "ಮುಂಬೈ ಪೊಲೀಸರಿಗೆ ದೊಡ್ಡ ಥ್ಯಾಂಕ್ಸ್​. ಕಳೆದ ರಾತ್ರಿ ನೀವು ಅದ್ಭುತವಾಗಿ ಕೆಲಸ ನಿರ್ವಹಿಸಿದಿರಿ' ಎಂದು ಪೋಸ್ಟ್​ ಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ಮುಂಬೈ ಪೊಲೀಸ್​ ಆಯುಕ್ತ ವಿವೇಕ್​ ನ್​ಸಾಲ್ಕರ್​, ಕ್ರಿಕೆಟ್​ ಅಭಿಮಾನಿಗಳ ಸಹಕಾರಕ್ಕೆ ಕೃತಜ್ಞತೆ ತಿಳಿಸಿದ್ದು, "ನಾವು ಜತೆಯಾಗಿ ಇದನ್ನು ಸಾಧಿಸಿದೆವು' ಎಂದಿದ್ದಾರೆ.

ವಿಕ್ಟರಿ ಪರೇಡ್​ನಲ್ಲಿ 11 ಮಂದಿಗೆ ಗಾಯ

ಮರೀನ್​ ಡೆವ್​ನಲ್ಲಿ ಭಾರತ ತಂಡದ ವಿಜಯಯಾತ್ರೆಯ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ಸುಮಾರು 11 ಜನರು ಸಣ್ಣಪುಟ್ಟ ಗಾಯಕ್ಕೀಡಾಗಿದ್ದಾರೆ. ಅವರಿಗೆ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ನೀಡಲಾಗಿದೆ ಎಂದು ವರದಿಯಾಗಿದೆ. ಜಿಟಿ ಸರ್ಕಾರಿ ಆಸ್ಪತ್ರೆಗೆ ಶುಕ್ರವಾರ ರಾತ್ರಿ 9 ಮಂದಿ ದಾಖಲಾಗಿದ್ದರು. ಈ ಪೈಕಿ ಕೆಲವರು ಉಸಿರಾಟದ ಸಮಸ್ಯೆ ಎದುರಿಸಿದ್ದರು. ಇನ್ನು ಕೆಲವರು ಸಣ್ಣಪುಟ್ಟ ಗಾಯಕ್ಕೀಡಾಗಿದ್ದರು ಮತ್ತು ಅವರೆಲ್ಲರ ಸ್ಥಿತಿ ಸ್ಥಿರವಾಗಿದೆ. ಇನ್ನಿಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net