

ಹೈದರಾಬಾದ್: ಕನ್ನಡಿಗ ಕೆಎಲ್ ರಾಹುಲ್ ಇತ್ತೀಚೆಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದ್ದರು. ಆದರೆ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು ವಿಕೆಟ್ ಕೀಪಿಂಗ್ ಮಾಡಲ್ಲ. ಬರೀ ಬ್ಯಾಟರ್ ಆಗಿ ಆಡಲಿದ್ದಾರೆ ಎಂದು ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಂಗಳವಾರ ಸ್ಪಷ್ಟಪಡಿಸಿದರು. ಇದರಿಂದ ಕೆಎಸ್ ಭರತ್ ಮತ್ತು ಧ್ರುವ ಜುರೆಲ್ ಅವರಲ್ಲೇ ಒಬ್ಬರು ವಿಕೆಟ್ ಕೀಪಿಂಗ್ ನಿರ್ವಹಿಸುವುದು ಖಚಿತವೆನಿಸಿದೆ.
ತವರಿನ ಏಕದಿನ ವಿಶ್ವಕಪ್ನಲ್ಲಿ ವಿಕೆಟ್ ಕೀಪರ್&ಬ್ಯಾಟರ್ ಆಗಿ ಆಡಿ ಉತ್ತಮ ಯಶಸ್ಸು ಸಂಪಾದಿಸಿದ್ದ ರಾಹುಲ್, ದ. ಆಫ್ರಿಕಾ ಪ್ರವಾಸದಲ್ಲಿ ಇಶಾನ್ ಕಿಶನ್ ಮಾನಸಿಕ ಆರೋಗ್ಯದ ಕಾರಣ ನೀಡಿ ತವರಿಗೆ ಮರಳಿದಾಗ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ವಿಕೆಟ್ ಕೀಪಿಂಗ್ ನಿರ್ವಹಿಸಿ ಉತ್ತಮ ಪ್ರದರ್ಶನ ತೋರಿದ್ದರು.
"ಇಂಗ್ಲೆಂಡ್ ವಿರುದ್ಧ ರಾಹುಲ್ರನ್ನು ಕೀಪರ್ ಆಗಿ ಆಡಿಸುವುದಿಲ್ಲ ಎಂದು ತಂಡ ಆಯ್ಕೆಯ ವೇಳೆಯೇ ನಾವು ಸ್ಪಷ್ಟತೆ ಹೊಂದಿದ್ದೆವು. ಅದಕ್ಕಾಗಿಯೇ ಇಬ್ಬರು ಕೀಪರ್ಗಳನ್ನು ಆರಿಸಲಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ರಾಹುಲ್ ಅಮೋ ನಿರ್ವಹಣೆ ತೋರಿದ್ದರು ಮತ್ತು ಸರಣಿ ಸಮಬಲ ಸಾಧಿಸಲು ಕೂಡ ನೆರವಾಗಿದ್ದರು. ಆದರೆ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ 5 ಪಂದ್ಯಗಳು ನಡೆಯಲಿವೆ. ಹೀಗಾಗಿ ಇಲ್ಲಿನ ವಾತಾವರಣದಲ್ಲಿ ಇತರ ಇಬ್ಬರು ಕೀಪರ್ಗಳಲ್ಲೇ ಒಬ್ಬರನ್ನು ಆಡಿಸಲಿದ್ದೇವೆ' ಎಂದು ದ್ರಾವಿಡ್ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಭಾರತದ ಸ್ಪಿನ್ ಸ್ನೇಹಿ ಪಿಚ್ಗಳಲ್ಲಿ ಕೀಪರ್ಗಳು ವಿಕೆಟ್ ಬಳಿ ಹೆಚ್ಚಿನ ಸಮಯ ಇರಬೇಕಾಗುತ್ತದೆ. ಅಲ್ಲದೆ ಆರ್. ಅಶ್ವಿನ್, ರವೀಂದ್ರ ಜಡೇಜಾ ಅವರಂಥ ಗುಣಮಟ್ಟದ ಸ್ಪಿನ್ನರ್ಗಳ ಎದುರು ತಜ್ಞ ವಿಕೆಟ್ ಕೀಪರ್ ಆಡಿಸುವುದೇ ಉತ್ತಮ ಆಯ್ಕೆ ಎನಿಸಿದೆ. ದಣ ಆಫ್ರಿಕಾ ಸರಣಿಗೆ ಮುನ್ನ ಕೆಎಲ್ ರಾಹುಲ್ ತಾನಾಡಿದ 92 ಪ್ರಥಮ ದರ್ಜೆ ಪಂದ್ಯಗಳಲ್ಲಿ 3ರಲ್ಲಿ ಮಾತ್ರ ವಿಕೆಟ್ ಕೀಪರ್ ಆಗಿದ್ದರು. ಇಂಗ್ಲೆಂಡ್ ಈಗ "ಬಜ್ಬಾಲ್' ಎಂಬ ಹೊಸ ಆಕ್ರಮಣಕಾರಿ ಕಾರ್ಯತಂತ್ರದೊಂದಿಗೆ ಆಡುತ್ತಿದೆ. ಹೀಗಾಗಿ ಕೀಪರ್ ಒಂದೆರಡು ಕ್ಯಾಚ್ಗಳನ್ನು ಮಿಸ್ ಮಾಡಿಕೊಂಡರೂ, ತಂಡಕ್ಕೆ ಅಪಾಯವಾಗುವ ಭೀತಿ ಇರುತ್ತದೆ.
ಕೀಪಿಂಗ್ಗೆ ಭರತ್ ಫೇವರಿಟ್
ರಿಷಭ್ ಪಂತ್ ಕಾರು ಅಪಘಾತದಲ್ಲಿ ಗಾಯಗೊಂಡ ಬಳಿಕ ಅವರ ಸ್ಥಾನದಲ್ಲಿ ಆಡಿರುವ ಕೆಎಸ್ ಭರತ್ ಬ್ಯಾಟಿಂಗ್ನಲ್ಲಿ ಗಮನಸೆಳೆಯದಿದ್ದರೂ, ಕೀಪರ್ ಆಗಿ ಉತ್ತಮ ನಿರ್ವಹಣೆಯನ್ನೇ ತೋರಿದ್ದರು. 91 ಪ್ರಥಮ ದರ್ಜೆ ಪಂದ್ಯಗಳಲ್ಲೂ ಕೀಪಿಂಗ್ ನಿರ್ವಹಿಸಿದ ಅನುಭವ ಹೊಂದಿದ್ದಾರೆ ಮತ್ತು 287 ಕ್ಯಾಚ್ ಹಿಡಿದಿದ್ದಾರೆ ಮತ್ತು 33 ಸ್ಟಂಪಿಂಗ್ ಮಾಡಿದ್ದಾರೆ. ತಂಡದ ಇನ್ನೋರ್ವ ಕೀಪರ್ ಆಗಿರುವ 23 ವರ್ಷದ ಧ್ರುವ ಜುರೆಲ್ ಇದುವರೆಗೆ 15 ಪ್ರಥಮ ದರ್ಜೆ ಪಂದ್ಯಗಳನ್ನಷ್ಟೇ ಆಡಿದ್ದಾರೆ. ಹೀಗಾಗಿ ಇತ್ತೀಚೆಗೆ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಚತುರ್ದಿನ ಪಂದ್ಯದಲ್ಲಿ ಶತಕ ಸಿಡಿಸಿ ಭಾರತ ಎ ತಂಡಕ್ಕೆ ಡ್ರಾ ಸಾಧಿಸಲು ನೆರವಾಗಿದ್ದ ಭರತ್ ಮೊದಲ ಟೆಸ್ಟ್ನಲ್ಲಿ ಕೀಪರ್ ಆಗಿ ಕಣಕ್ಕಿಳಿಯುವ ನಿರೀಕ್ಷೆ ಹೆಚ್ಚಿದೆ.