

ಅಡಿಲೇಡ್: ಟಿ-20 ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಹೀನಾಯ ಸೋಲು ಕಂಡಿದೆ. ಇದೀಗ ತಂಡದ ಆರಂಭಿಕ ಆಟಗಾರ, ಉಪನಾಯಕ ಕೆಎಲ್ ರಾಹುಲ್ ವಿರುದ್ಧ ಎಲ್ಲೆಡೆ ಟೀಕೆಗಳು ಕೇಳಿ ಬರುತ್ತಿವೆ. ರಾಹುಲ್ ವಿಶ್ವಕಪ್ ಟೂರ್ನಿಯುದ್ದಕ್ಕೂ ಕಳಪೆ ಪ್ರದರ್ಶನವನ್ನೇ ನೀಡುತ್ತಾ ಬಂದಿದ್ದಾರೆ. ಸತತ ಅವಕಾಶ ಕೊಟ್ಟರೂ ರಾಹುಲ್ಗೆ ಆರಂಭಿಕನಾಗಿ ಯಶಸ್ವಿಯಾಗಲು ಸಾಧ್ಯವಾಗಿಲ್ಲ.
ಆರಂಭಿಕನಾಗಿ ಇನ್ನಿಂಗ್ಸ್ ಆರಂಭಿಸುವ ಜವಾಬ್ದಾರಿ ಹೊತ್ತಿರುವ ರಾಹುಲ್, ಟಿ-20 ವಿಶ್ವಕಪ್ನಲ್ಲಿ ಆರು ಪಂದ್ಯಗಳಿಂದ ಗಳಿಸಿರುವುದು ಕೇವಲ 128 ರನ್. ಬಾಂಗ್ಲಾದೇಶ ಹಾಗೂ ನೆದರ್ಲೆಂಡ್ ವಿರುದ್ಧ ಅರ್ಧಶತಕ ಸಿಡಿಸಿರುವುದು ಬಿಟ್ಟರೆ, ಉಳಿದೆ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದಕಿ ಮೊತ್ತಕ್ಕೆ ಔಟ್ ಆಗಿದ್ದಾರೆ. ಈ ಮೂಲಕ ನಿರ್ಣಾಯಕ ಹಂತದ ಸೆಮಿಫೈನಲ್ ಪಂದ್ಯದಲ್ಲೂ ರಾಹುಲ್ ಕಳಪೆ ಪ್ರದರ್ಶನ ನೀಡಿರುವುದು ಇದೀಗ ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ರಾಹುಲ್ ಕಳಪೆ ಇನ್ನಿಂಗ್ಸ್ ಬಗ್ಗೆ ಇದೀಗ ನೆಟ್ಟಿಗರು ಟ್ವಿಟರ್ನಲ್ಲಿ ವ್ಯಂಗ್ಯವಾಡುತ್ತಿದ್ದಾರೆ. ಹಲವು ಮೀಮ್ಗಳ ಮೂಲಕ ರಾಹುಲ್ ಟ್ರೋಲ್ಗೆ ಗುರಿಯಾಗಿದ್ದಾರೆ.
ಐಪಿಎಲ್ನಲ್ಲಿ ಪಾಸ್...ಐಸಿಸಿ ಟೂರ್ನಿಯಲ್ಲಿ ಫೇಲ್!
ಹೌದು, ಕೆಎಲ್ ರಾಹುಲ್ ಐಪಿಎಲ್ ಟೂರ್ನಿಗಳಲ್ಲಿ ಅದ್ಭುತವಾಗಿಯೇ ಪ್ರದರ್ಶನ ನೀಡುತ್ತಾ ಬರುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪ್ರತಿ ಟೂರ್ನಿಯಲ್ಲೂ ಸರಾಸರಿ 400ಕ್ಕೂ ಅಧಿಕ ರನ್ ಕಲೆ ಹಾಕಿದ್ದಾರೆ. ಆದರೆ ಐಸಿಸಿ ಟೂರ್ನಿಗಳಲ್ಲಿ ಮಾತ್ರ ವೈಫಲ್ಯ ಕಂಡಿದ್ದಾರೆ. ದುರ್ಬಲ ತಂಡದ ಎದುರು ಬ್ಯಾಟ್ ಬೀಸುತ್ತಾರೆ, ಆದರೆ ಬಲಿಷ್ಠ ತಂಡಗಳ ಎದುರು ರಾಹುಲ್ ರನ್ ಗಳಿಸಲು ಪರದಾಡುತ್ತಿದ್ದಾರೆ ಎಂದು ಜನರು ಟ್ರೋಲ್ ಮಾಡುತ್ತಿದ್ದಾರೆ.
ಒಟ್ಟಾರೆ ಈ ಬಾರಿಯೂ ಟಿ-20 ವಿಶ್ವಕಪ್ನ ಟೂರ್ನಿಯಲ್ಲಿ ಉಪನಾಯಕ ಕೆ.ಎಲ್ ರಾಹುಲ್ ಬ್ಯಾಟಿಂಗ್ ವೈಫಲ್ಯ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಇದರಿಂದಾಗಿ ಮೊದಲ ವಿಕೆಟ್ಗೆ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಲು ಭಾರತ ತಂಡಕ್ಕೆ ಸಾಧ್ಯವಾಗಿಲ್ಲ.