

ಬೆಂಗಳೂರು: ಸಣ್ಣ ಪುಟ್ಟ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ನಡುವೆ ಟೀಮ್ ಇಂಡಿಯಾಗೆ ಮರಳಿರುವ ಬ್ಯಾಟರ್ ಹಾಗೂ ಕನ್ನಡಿಗ ಕೆಎಲ್ ರಾಹುಲ್, ಏಷ್ಯಾಕಪ್ಗೆ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಆರಂಭಿಕ ಕೆಲ ಪಂದ್ಯಗಳಿಗೆ ಲಭ್ಯರಾಗುವುದು ಅನುಮಾನವೆನಿಸಿದೆ.
ಸದ್ಯ ಬೆಂಗಳೂರಿನಲ್ಲಿ ಭಾರತ ತಂಡದ ಆಟಗಾರರೊಂದಿಗೆ ವಿವಿಧ ಫಿಟ್ನೆಸ್ ಡ್ರಿಲ್ಗಳಲ್ಲಿ ಭಾಗವಹಿಸಿದ್ದಾರೆ. ಆದರೆ ಯೋ&ಯೋ ಟೆಸ್ಟ್ ಎದುರಿಸಲಿಲ್ಲ ಎನ್ನಲಾಗಿದೆ. ರಾಹುಲ್ಗೆ ಕೆಲ ಸಣ್ಣಪುಟ್ಟ ಗಾಯಗಳಿವೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್, ಏಷ್ಯಾಕಪ್ಗೆ ತಂಡ ಪ್ರಕಟಿಸಿದ ಸಮಯದಲ್ಲೇ ತಿಳಿಸಿದ್ದರು. ಹೀಗಾಗಿ ರಾಹುಲ್ಗೆ ಮೀಸಲು ಆಟಗಾರರಾಗಿ ಸಂಜು ಸ್ಯಾಮ್ಸನ್ರನ್ನು ತಂಡದಲ್ಲಿ ಹೆಸರಿಸಲಾಗಿದೆ.
ರಾಹುಲ್ ಬ್ಯಾಟಿಂಗ್ ಫಿಟ್ನೆಸ್ ಬಗ್ಗೆ ಎನ್ಸಿಎ ತರಬೇತಿ ಸಿಬ್ಬಂದಿಗೆ ತೃಪ್ತಿ ಇದೆ. ಆದರೆ ಅವರು ವಿಕೆಟ್ ಕೀಪಿಂಗ್ ಕೂಡ ನಿರ್ವಹಿಸಲು ಇನ್ನೂ ಸಿದ್ದರಾಗಿಲ್ಲ ಎನ್ನಲಾಗಿದೆ. ಇದರಿಂದಾಗಿ ಅವರು ಏಷ್ಯಾಕಪ್ನಲ್ಲಿ ಸೆಪ್ಟೆಂಬರ್ 2ರಂದು ಪಾಕಿಸ್ತಾನ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಅಲಭ್ಯರಾಗಬಹುದು ಎನ್ನಲಾಗಿದೆ.