RCB ವಿರುದ್ಧ ಮುಗ್ಗರಿಸಿದ ಹಾಲಿ ಚಾಂಪಿಯನ್ಸ್​: ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ KKR ನಾಯಕ ರಹಾನೆ! KKR vs RCB

KKR vs RCB
Published on

KKR vs RCB : ನಿನ್ನೆಯಿಂದ (ಮಾರ್ಚ್​ 22) ಐಪಿಎಲ್ 2025ನೇ ಆವೃತ್ತಿ ಆರಂಭವಾಗಿದ್ದು, ಹಾಲಿ ಚಾಂಪಿಯನ್ ಆಗಿ 18ನೇ ಸೀಸನ್​ ಪ್ರವೇಶಿಸಿದ ಕೋಲ್ಕತ್ತ ನೈಟ್ ರೈಡರ್ಸ್ (KKR) ತಂಡ, ತನ್ನ ಮೊದಲ ಪಂದ್ಯದಲ್ಲೇ ಭಾರಿ ಆಘಾತ ಅನುಭವಿಸಿದೆ.

ಶನಿವಾರ (ಮಾರ್ಚ್​ 22) ಕೋಲ್ಕತದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿರುದ್ಧ ಏಳು ವಿಕೆಟ್‌ಗಳಿಂದ ಸೋಲುಂಡಿತು. ಸೋಲಿನ ನಂತರ ಮಾತನಾಡಿದ ಕೆಕೆಆರ್ ನಾಯಕ ಅಜಿಂಕ್ಯಾ ರಹಾನೆ, ಮಧ್ಯಮ ಓವರ್‌ಗಳಲ್ಲಿ ಎರಡು ಅಥವಾ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದ್ದು ಸೋಲಿಗೆ ಕಾರಣವಾಯಿತು ಎಂದರು.

ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯವೇ ಸೋಲಿಗೆ ಪ್ರಮುಖ ಕಾರಣ. ನಾವು ಬ್ಯಾಟಿಂಗ್ ಮಾಡುತ್ತಿದ್ದಾಗ 13ನೇ ಓವರ್‌ವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಮಧ್ಯಮ ಓವರ್​ಗಳಲ್ಲಿ ಸತತ ಎರಡು ಅಥವಾ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ನಂತರ ನಮ್ಮ ರನ್​ ವೇಗಕ್ಕೆ ಕಡಿವಾಣ ಬಿತ್ತು. ಬ್ಯಾಟ್ಸ್‌ಮನ್‌ಗಳು ತಮ್ಮ ಅತ್ಯುತ್ತಮ ಹೊಡೆತಗಳನ್ನು ಆಡಲು ಪ್ರಯತ್ನಿಸಿದರು, ಆದರೆ, ದುರದೃಷ್ಟವಶಾತ್ ಯಾವುದೇ ಫಲ ನೀಡಲಿಲ್ಲ ಎಂದು ರಹಾನೆ ಅವರು ಹೇಳಿದರು.

ನಮ್ಮ ಇನ್ನಿಂಗ್ಸ್‌ ವೇಳೆ 200 ರಿಂದ 210 ರನ್ ಗಳಿಸಬಹುದೆಂದು ನಾನು ಮತ್ತು ವೆಂಕಟೇಶ್ ಅಯ್ಯರ್ ಚರ್ಚಿಸಿದ್ದೆವು. ಆದರೆ, ವಿಕೆಟ್‌ಗಳ ನಷ್ಟದಿಂದಾಗಿ, ನಾವು ಬಯಸಿದ ಸ್ಕೋರ್ ಅನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಇಬ್ಬನಿ ಅಂಶವೂ ನಮ್ಮ ಮೇಲೆ ಸ್ವಲ್ಪ ಪರಿಣಾಮ ಬೀರಿದೆ. ಸದ್ಯಕ್ಕೆ ನಾವು ಸೋತಿದ್ದೇವೆ. ಹೀಗಾಗಿ ಆ ಪಂದ್ಯದ ಬಗ್ಗೆ ಹೆಚ್ಚು ಯೋಚಿಸುವ ಅಗತ್ಯವಿಲ್ಲ. ಆದರೆ, ಅದೇ ಸಮಯದಲ್ಲಿ, ನಾವು ನಮ್ಮ ತಪ್ಪುಗಳ ಮೇಲೆ ಕೇಂದ್ರೀಕರಿಸಿ ಆಟದಲ್ಲಿ ಮುಂದುವರಿಯುತ್ತೇವೆ ಎಂದು ರಹಾನೆ ಹೇಳಿದರು.

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಈ ಪಂದ್ಯದಲ್ಲಿ, ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್​ ಆಯ್ದುಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಕೆಕೆಆರ್, ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 174 ರನ್ ಗಳಿಸಿತು. ಅನುಭವಿ ಆಟಗಾರರಾದ ಸುನೀಲ್​ ನಾರಾಯಣ್​ ( 44 ರನ್​, 26 ಎಸೆತ, 5 ಬೌಂಡರಿ, 3 ಸಿಕ್ಸರ್) ಮತ್ತು ನಾಯಕ ಅಜಿಂಕ್ಯ ರಹಾನೆ ( 56 ರನ್​, 31 ಎಸೆತ 6 ಬೌಂಡರಿ, 3 ಸಿಕ್ಸರ್) ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಕೆಕೆಆರ್ ತಂಡಕ್ಕೆ ಗೌರವಾನ್ವಿತ ಸ್ಕೋರ್ ಒದಗಿಸಿದರು. ಇವರಿಬ್ಬರನ್ನು ಹೊರತುಪಡಿಸಿ, ಕೆಕೆಆರ್ ಇನ್ನಿಂಗ್ಸ್‌ನಲ್ಲಿ ಬೇರೆ ಯಾರೂ ಗಮನಾರ್ಹ ಸ್ಕೋರ್‌ಗಳನ್ನು ಗಳಿಸಲಿಲ್ಲ. ಯುವ ಆಟಗಾರ ಅಂಗ್‌ಕ್ರಿಶ್ ರಘುವಂಶಿ 30 ರನ್ ಗಳಿಸಿದರೂ ನಿಧಾನವಾಗಿ ಆಡಿದರು. ಕ್ವಿಂಟನ್​ ಡಿಕಾಕ್ 4, ವೆಂಕಟೇಶ್ ಅಯ್ಯರ್ 6, ರಿಂಕು ಸಿಂಗ್ 12 ಮತ್ತು ಆಂಡ್ರೆ ರಸೆಲ್ 4 ರನ್ ಗಳಿಸಿ ಔಟಾದರು.

ಆರ್‌ಸಿಬಿ ಬೌಲರ್‌ಗಳಲ್ಲಿ ಕೃನಾಲ್ ಪಾಂಡ್ಯ ಅದ್ಭುತ ಬೌಲಿಂಗ್ ಮಾಡಿದರು, 4 ಓವರ್‌ಗಳಲ್ಲಿ 29 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು. ಜೋಶ್​ ಹ್ಯಾಜಲ್‌ವುಡ್ 4 ಓವರ್‌ಗಳಲ್ಲಿ 22 ರನ್‌ಗಳಿಗೆ 2 ವಿಕೆಟ್‌ಗಳನ್ನು ಪಡೆದು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಿದರು. ಯಶ್ ದಯಾಳ್ (3-0-25-1)ರಿಂದ ಉತ್ತಮ ಪ್ರದರ್ಶನ ಕಾಣಲಿಲ್ಲ. ಸುಯಾಶ್ ಶರ್ಮಾ ಮತ್ತು ರಸಿಕ್ ಸಲಾಂ ತಲಾ ಒಂದು ವಿಕೆಟ್ ಪಡೆದಿದ್ದರೂ ಉದಾರವಾಗಿ ರನ್‌ಗಳನ್ನು ಬಿಟ್ಟುಕೊಟ್ಟರು.

ಸವಾಲಿನ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡ, ಫಿಲ್ ಸಾಲ್ಟ್ ( 56 ರನ್​, 31 ಎಸೆತ, 9 ಬೌಂಡರಿ, 2 ಸಿಕ್ಸರ್) ಮತ್ತು ವಿರಾಟ್ ಕೊಹ್ಲಿ ( ಔಟಾಗದೇ 59 ರನ್​, 36 ಎಸೆತ, 4 ಬೌಂಡರಿ, 3 ಸಿಕ್ಸರ್) ಅವರ ಹೊಸ ಆರಂಭಿಕ ಜೋಡಿಯೊಂದಿಗೆ ಅದ್ಭುತ ಆರಂಭವನ್ನು ಕಂಡುಕೊಂಡಿತು. ಈ ಜೋಡಿ ಪವರ್ ಪ್ಲೇನಲ್ಲಿ (ಮೊದಲ 6 ಓವರ್‌ಗಳು) 80 ರನ್ ಗಳಿಸಿತು. ಆರ್‌ಸಿಬಿ ಉತ್ತಮ ಅಡಿಪಾಯದೊಂದಿಗೆ ಪಂದ್ಯವನ್ನು ಆರಾಮವಾಗಿ ಗೆದ್ದಿತು. ಸಾಲ್ಟ್ ಔಟಾದ ನಂತರ ಕ್ರೀಸ್‌ಗೆ ಬಂದ ದೇವದತ್ ಪಡಿಕ್ಕಲ್ (10 ಎಸೆತಗಳಲ್ಲಿ 10) ನಿರಾಶೆ ಮೂಡಿಸಿದರು. ಆದರೆ, ನಾಯಕ ರಜತ್ ಪಾಟಿದಾರ್ ( 34 ರನ್​, 16 ಎಸೆತ, 5 ಬೌಂಡರಿ, 1 ಸಿಕ್ಸರ್​) ಬೇಗನೆ ಆರ್‌ಸಿಬಿಯನ್ನು ಗೆಲುವಿನತ್ತ ಕೊಂಡೊಯ್ದರು. ಅಂತಿಮವಾಗಿ, ಲಿವಿಂಗ್‌ಸ್ಟೋನ್ (ಔಟಾಗದೆ 15 ರನ್​, 5 ಎಸೆತ, 2 ಬೌಂಡರಿ, 1 ಸಿಕ್ಸರ್​) ಮಿಂಚಿನ ಇನ್ನಿಂಗ್ಸ್ ಆಡುವ ಮೂಲಕ ಪಂದ್ಯವನ್ನು ಔಪಚಾರಿಕವಾಗಿ ಕೊನೆಗೊಳಿಸಿದರು.

ಕೆಕೆಆರ್ ಬೌಲರ್‌ಗಳಲ್ಲಿ ವೈಭವ್ ಅರೋರಾ, ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ತಲಾ ಒಂದು ವಿಕೆಟ್ ಪಡೆದರು. ಸುನಿಲ್ ನಾರಾಯಣ್​ (4-0-27-1) ಹೊರತುಪಡಿಸಿ, ಈ ಪಂದ್ಯದಲ್ಲಿ ಎಲ್ಲ ಕೆಕೆಆರ್ ಬೌಲರ್‌ಗಳನ್ನು ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಮನಸೋ ಇಚ್ಛೆ ದಂಡಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net