

Rajat Patidar : ಐಪಿಎಲ್ನ 18ನೇ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಉತ್ತಮ ಆರಂಭವನ್ನು ಕಂಡುಕೊಂಡಿದೆ. ಕೋಲ್ಕತ್ತದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಿನ್ನೆ (ಮಾರ್ಚ್ 22) ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ 7 ವಿಕೆಟ್ಗಳಿಂದ ಭರ್ಜರಿ ಜಯಗಳಿಸಿತು. ಆರ್ಸಿಬಿ ನಾಯಕನಾಗಿ ರಜತ್ ಪಾಟಿದಾರ್ ತಮ್ಮ ಮೊದಲ ಪಂದ್ಯದಲ್ಲೇ ಅಮೋಘ ಜಯ ದಾಖಲಿಸಿದ್ದಾರೆ.
ಪಂದ್ಯದ ನಂತರ ಮಾತನಾಡಿದ ಪಾಟಿದಾರ್, ಸ್ಪಿನ್ನರ್ಗಳಾದ ಕೃನಾಲ್ ಪಾಂಡ್ಯ ಮತ್ತು ಸುಯಾಶ್ ಶರ್ಮ ಅವರನ್ನು ಶ್ಲಾಘಿಸಿದರು. ಆರ್ಸಿಬಿ ಗೆಲುವು ಸಾಧಿಸಿದ್ದು ಅವರ ಬೌಲಿಂಗ್ನಿಂದ ಎಂದರು. ಮಧ್ಯಮ ಓವರ್ಗಳಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ್ದಕ್ಕೆ ಅವರಿಬ್ಬರನ್ನೂ ಪಾಟಿದಾರ್ ಶ್ಲಾಘಿಸಿದರು.
ಪಂದ್ಯ ಗೆದ್ದಿದ್ದಕ್ಕೆ ತುಂಬಾ ಸಂತೋಷವಾಗಿದೆ. ಈ ಗೆಲುವಿನ ಓಟ ಹೀಗೆಯೇ ಮುಂದುವರಿದರೆ ಇನ್ನೂ ಉತ್ತಮ ಎಂದರು. ನಾಯಕತ್ವದ ಬಗ್ಗೆ ಮಾತನಾಡುತ್ತಾ, ನಾಯಕತ್ವ ಸ್ವಲ್ಪ ಒತ್ತಡದಿಂದ ಕೂಡಿರುತ್ತದೆ ಎಂದ ಪಾಟಿದಾರ್, ಸುಯಾಶ್ ಶರ್ಮಾ ರನ್ಗಳನ್ನು ನೀಡುತ್ತಿರುವುದಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನಾನು ಚಿಂತಿಸುವುದಿಲ್ಲ. ಅವರೊಬ್ಬ ಪ್ರಮುಖ ವಿಕೆಟ್ ಟೇಕಿಂಗ್ ಬೌಲರ್. ಹೀಗಾಗಿ ನಾನು ಅವರ ಪರವಾಗಿ ನಿಂತಿದ್ದೇನೆ. 13ನೇ ಓವರ್ ನಂತರ, ಸುಯಾಶ್ ಮತ್ತು ಕೃನಾಲ್ ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದರು ಎಂದು ಪಾಟಿದಾರ್ ಹೊಗಳಿದರು.
ಕೊಹ್ಲಿಯಂತಹ ಆಟಗಾರನನ್ನು ಹೊಂದಿರುವುದು ನಮ್ಮ ಅದೃಷ್ಟ. ಹುಡುಗರಾಗಿ ನಾವು ಈ ಹಿರಿಯ ಆಟಗಾರನಿಂದ ಬಹಳಷ್ಟು ಕಲಿಯುತ್ತಿದ್ದೇವೆ ಎಂದು ಪಾಟಿದಾರ್ ಹೇಳಿದರು.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 174 ರನ್ ಗಳಿಸಿತು. ಕೆಕೆಆರ್ ಪರ ನಾಯಕ ರಹಾನೆ (56 ರನ್, 31 ಎಸೆತ, 6 ಬೌಂಡರಿ, 4 ಸಿಕ್ಸರ್) ಅರ್ಧಶತಕ ಗಳಿಸಿದರು. ಸುನೀಲ್ ನಾರಾಯಣ್ (44 ರನ್, 26 ಎಸೆತ, 5 ಬೌಂಡರಿ, 3 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಆರ್ಸಿಬಿ ಪರ ಕೃನಾಲ್ ಪಾಂಡ್ಯ ಮೂರು ವಿಕೆಟ್ ಪಡೆದರು. ಜೋಶ್ ಹ್ಯಾಜಲ್ವುಡ್ ಎರಡು ವಿಕೆಟ್ ಪಡೆದರು.
ನಂತರ ಕೆಕೆಆರ್ ನೀಡಿದ ಗುರಿ ಬೆನ್ನತ್ತಿದ ವಿರಾಟ್ ಕೊಹ್ಲಿ (ಔಟಾಗದೆ 59 ರನ್ 36 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್) ಮತ್ತು ಫಿಲ್ ಸಾಲ್ಟ್ (56 ರನ್ 9 ಬೌಂಡರಿ, 31 ಎಸೆತಗಳಲ್ಲಿ 2 ಸಿಕ್ಸರ್) ಆಕರ್ಷಕ ಅರ್ಧಶತಕದ ನೆರವಿನಿಂದ ಸುಲಭವಾಗಿ ಗುರಿ ಬೆನ್ನತ್ತಿದರು. ನಾಯಕ ರಜತ್ ಪಾಟಿದಾರ್ (34 ರನ್ 16 ಎಸೆತಗಳು) ಕೂಡ ಮಿಂಚಿದರು. ಅಂತಿಮವಾಗಿ ಆರ್ಸಿಬಿ 16.2 ಓವರ್ಗಳಲ್ಲಿ ಮೂರು ವಿಕೆಟ್ಗಳ ನಷ್ಟಕ್ಕೆ ಗುರಿಯನ್ನು ತಲುಪಿತು.
ಮೂರು ವಿಕೆಟ್ಗಳನ್ನು ಪಡೆಯುವ ಮೂಲಕ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಕೃನಾಲ್ ಪಾಂಡ್ಯ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. (ಏಜೆನ್ಸೀಸ್)