ಮಾರ್ಚ್​ 22ಕ್ಕೆ ಕೋಲ್ಕತದಲ್ಲಿ ಕೆಕೆಆರ್​-ಆರ್​ಸಿಬಿ ಉದ್ಘಾಟನಾ ಪಂದ್ಯ? ಧರ್ಮಶಾಲಾ, ಗುವಾಹಟಿಯಲ್ಲೂ ಪಂದ್ಯಗಳು!

web ipl
Published on

ನವದೆಹಲಿ: ವಿಶ್ವದ ಶ್ರೀಮಂತ ಟಿ20 ಟೂರ್ನಿ ಎಂಬ ಹೆಗ್ಗಳಿಕೆಯ ಇಂಡಿಯನ್​ ಪ್ರೀಮಿಯರ್​ ಲೀಗ್​ 18ನೇ ಆವೃತ್ತಿಗೆ ಮಾರ್ಚ್​ 22ರ ಶನಿವಾರದಂದು ಕೋಲ್ಕತದ ಈಡನ್​ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ಚಾಲನೆ ಸಿಗಲಿದ್ದು, ಹಾಲಿ ಚಾಂಪಿಯನ್​ ಕೋಲ್ಕತ ನೈಟ್​ರೈಡರ್ಸ್​ ಮತ್ತು ಆರ್​ಸಿಬಿ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ ಎಂದು ವರದಿಯಾಗಿದೆ. ಟೂರ್ನಿಯ ವೇಳಾಪಟ್ಟಿ ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಗೊಳ್ಳುವ ನಿರೀಕ್ಷೆ ಹರಡಿರುವ ನಡುವೆ, ವೇಳಾಪಟ್ಟಿಯ ಕೆಲ ಪ್ರಮುಖಾಂಶಗಳು ಬಹಿರಂಗಗೊಂಡಿವೆ.

ಹಾಲಿ ರನ್ನರ್​ಅಪ್​ ಸನ್​ರೈಸರ್ಸ್​ ಹೈದರಾಬಾದ್​ ತಂಡ ಟೂರ್ನಿಯ 2ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ಆಡಲಿದೆ. ಈ ಪಂದ್ಯ ಮಾರ್ಚ್​ 23ರಂದು ಹೈದರಾಬಾದ್​ನಲ್ಲಿ ನಡೆಯಲಿದೆ. ಟೂರ್ನಿಯ ಮೊದಲ ಭಾನುವಾರದ 2 ಪಂದ್ಯಗಳಲ್ಲಿ ಇದು ಮೊದಲ ಕಾದಾಟವಾಗಿರಲಿದೆ ಎನ್ನಲಾಗಿದೆ.

12 ತಾಣಗಳಲ್ಲಿ ಪಂದ್ಯಗಳು?

ಟೂರ್ನಿಯಲ್ಲಿ ಆಡುವ 10 ತಂಡಗಳ ತವರು ಮೈದಾನಗಳ ಜತೆಗೆ ಈ ಬಾರಿ ಗುವಾಹಟಿ ಮತ್ತು ಧರ್ಮಶಾಲಾದಲ್ಲೂ ಪಂದ್ಯಗಳು ನಡೆಯಲಿವೆ. ಇದರಿಂದ ಈ ಬಾರಿ ಒಟ್ಟು 12 ತಾಣಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಈಶಾನ್ಯ ಭಾರತದ ಗುವಾಹಟಿ ನಗರ ರಾಜಸ್ಥಾನ ತಂಡದ ಬದಲಿ ತವರು ತಾಣವಾದರೆ, ಹಿಮಾಚಲ ಪ್ರದೇಶದ ಧರ್ಮಶಾಲಾ ನಗರ ಪಂಜಾಬ್​ ಕಿಂಗ್ಸ್​ಗೆ ಬದಲಿ ತಾಣವಾಗಿರಲಿದೆ. ಗುವಾಹಟಿಯಲ್ಲಿ ಮಾ.26ಕ್ಕೆ ಕೆಕೆಆರ್​ ಮತ್ತು ಮಾ. 30ಕ್ಕೆ ಸಿಎಸ್​ಕೆ ವಿರುದ್ಧ ರಾಜಸ್ಥಾನ ತನ್ನ 2 ತವರಿನ ಪಂದ್ಯಗಳನ್ನು ಆಡಲಿದೆ. ಧರ್ಮಶಾಲಾದಲ್ಲಿ ಪಂಜಾಬ್​ ತಂಡ ತನ್ನ ತವರಿನ 3 ಪಂದ್ಯಗಳನ್ನು ಅಡಲಿದೆ ಎನ್ನಲಾಗಿದೆ.

ಮೇ 25ಕ್ಕೆ ಕೋಲ್ಕತದಲ್ಲಿ ಫೈನಲ್​?

ಹಿಂದಿನ ಆವೃತ್ತಿಯ ಫೈನಲ್​ ತಂಡಗಳ ತವರಿನಲ್ಲಿ ಐಪಿಎಲ್​ನ ಪ್ಲೇಆಫ್​-ಫೈನಲ್​ ಪಂದ್ಯಗಳು ನಡೆಯುವುದು ವಾಡಿಕೆಯಾಗಿದೆ. ಅದರಂತೆ ಈ ಬಾರಿಯೂ ರನ್ನರ್​ಅಪ್​ ಸನ್​ರೈಸರ್ಸ್​ನ ತವರಾದ ಹೈದರಾಬಾದ್​ನಲ್ಲಿ ಮೊದಲ ಕ್ವಾಲಿಫೈಯರ್​ ಮತ್ತು ಎಲಿಮಿನೇಟರ್​ ಪಂದ್ಯಗಳು ನಡೆದರೆ, ಚಾಂಪಿಯನ್​ ಕೆಕೆಆರ್​ ತವರಾದ ಕೋಲ್ಕತದಲ್ಲಿ 2ನೇ ಕ್ವಾಲಿಫೈಯರ್​ ಮತ್ತು ಮೇ 25ರಂದು ಫೈನಲ್​ ಪಂದ್ಯ ನಡೆಯಲಿದೆ ಎಂದು ವರದಿಯಾಗಿದೆ.

ಮಧ್ಯಪ್ರದೇಶದ ನಾಯಕರ ಸಮರ?

ಆರ್​ಸಿಬಿ ತಂಡ ಗುರುವಾರವಷ್ಟೇ ಮಧ್ಯಪ್ರದೇಶದ ಬ್ಯಾಟರ್​ ರಜತ್​ ಪಾಟೀದಾರ್​ರನ್ನು ಹೊಸ ನಾಯಕರನ್ನಾಗಿ ನೇಮಿಸಿದೆ. ಕೆಕೆಆರ್​ ತಂಡ ಈ ಬಾರಿ ಆಲ್ರೌಂಡರ್​ ವೆಂಕಟೇಶ್​ ಅಯ್ಯರ್​ರನ್ನು ನಾಯಕರನ್ನಾಗಿ ನೇಮಿಸುವ ನಿರೀಕ್ಷೆ ಇದೆ. ಕಳೆದ ಮೆಗಾ ಹರಾಜಿನಲ್ಲಿ ವೆಂಕಟೇಶ್​ 23.75 ಕೋಟಿ ರೂ.ಗೆ ಕೆಕೆಆರ್​ಗೆ ಮರಳಿದ್ದರು. ಕೆಕೆಆರ್​ ನಾಯಕತ್ವದ ರೇಸ್​ನಲ್ಲಿದ್ದ ಮತ್ತೋರ್ವ ಬ್ಯಾಟರ್​ ಅಜಿಂಕ್ಯ ರಹಾನೆ, ತನ್ನೊಂದಿಗೆ ಇದುವರೆಗೆ ಯಾರೂ ನಾಯಕನ ಜವಾಬ್ದಾರಿಯ ಬಗ್ಗೆ ಮಾತನಾಡಿಲ್ಲ ಎಂದಿದ್ದರು. ಇದರಿಂದ ತಂಡದ ದುಬಾರಿ ಆಟಗಾರ ವೆಂಕಟೇಶ್​ ಅವರೇ ನಾಯಕರಾಗುವ ನಿರೀಕ್ಷೆ ಹೆಚ್ಚಾಗಿದೆ. ಇದರಿಂದ ಈ ಬಾರಿ ಐಪಿಎಲ್​ನಲ್ಲಿ ಮಧ್ಯಪ್ರದೇಶದ ಕ್ರಿಕೆಟಿಗರ ನಾಯಕತ್ವದ ತಂಡಗಳ ನಡುವೆ ಮೊದಲ ಪಂದ್ಯ ಏರ್ಪಡಲಿದೆ. ವೆಂಕಟೇಶ್​ ತಮಿಳುನಾಡು ಮೂಲದವರಾದರೂ ದೇಶೀಯ ಕ್ರಿಕೆಟ್​ನಲ್ಲಿ ಮಧ್ಯಪ್ರದೇಶ ಪರ ಆಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net