

ಕಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನದ ಫಲವಾಗಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಕಲ್ಕತ್ತಾ ನೈಟ್ರೈಡರ್ಸ್ 7 ವಿಕೆಟ್ಗಳ ಜಯ ಸಾಧಿಸಿದೆ. ಗೆಲುವಿನ ಸಂಭ್ರಮದಲ್ಲಿರುವ ಕಲ್ಕತ್ತಾ ನೈಟ್ರೈಡರ್ಸ್ಗೆ ಶಾಕ್ ಒಂದು ಎದುರಾಗಿದ್ದು, ತಂಡದ ವೇಗಿಗೆ ಶೇ. 100 ರಷ್ಟು ದಂಡ ವಿಧಿಸಿ ನಿಷೇಧ ಹೇರಲಾಗಿದೆ.
ತಮ್ಮ ಬಿಗಿ ಬೌಲಿಂಗ್ ದಾಳಿ ಮೂಲಕ ಕೆಕೆಆರ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೇಗಿ ಹರ್ಷಿತ್ ರಾಣಾ ಮೈದಾನದಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಇದರ ಬೆನ್ನಲ್ಲೇ ಅವರಿಗೆ ಬಿಸಿಸಿಐ ಪಂದ್ಯದ ಶೇ. 100ರಷ್ಟು ದಂಡ ವಿಧಿಸಿ ಒಂದು ಪಂದ್ಯ ಆಡದಂತೆ ನಿಷೇಧ ಹೇರಿದೆ.
ಈ ಪಂದ್ಯದಲ್ಲಿ ಡೆಲ್ಲಿ ಬ್ಯಾಟ್ಸ್ಮನ್ಗಳಾದ ಅಭಿಷೇಕ್ ಪೊರೆಲ್ ಹಾಗೂ ರಶಿಕ್ ಸಲಾಂ ಅವರ ವಿಕೆಟ್ ಪಡೆದ ಹರ್ಷಿತ್ ರಾಣಾ ಅತಿಯಾದ ಸಂಭ್ರಮಾಚರಣೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ಹೀಗಾಗಿ ಎರಡು ಬಾರಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಹರ್ಷಿತ್ ರಾಣಾ ಅವರ ಒಟ್ಟು ಪಂದ್ಯ ಶುಲ್ಕದ ಮೇಲೆ ಶೇಕಡ 100 ರಷ್ಟು ದಂಡ ವಿಧಿಸಲಾಗಿದ್ದು, ಒಂದು ಪಂದ್ಯದ ಆಡದಂತೆ ನಿಷೇಧ ಹೇರಲಾಗಿದೆ.
ಈ ಪಂದ್ಯದಲ್ಲಿ 4 ಓವರ್ಗಳನ್ನು ಬೌಲಿಂಗ್ ಮಾಡಿದ್ದ ಹರ್ಷಿತ್ ಒಟ್ಟು 28 ರನ್ ನೀಡಿ 2 ವಿಕೆಟ್ ಕಬಳಿಸಿದರು. ಇತ್ತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬೆನ್ನಲ್ಲೇ ಯುವ ವೇಗಿ ದಂಡದ ಶಿಕ್ಷೆಗೆ ಒಳಗಾಗಿದ್ದಾರೆ.