IPL 2024: ಫಲ ನೀಡಿದ ವೆಂಕಟೇಶ್​-ಮನೀಷ್​ ಹೋರಾಟ; ಮುಂಬೈಗೆ ಬೌಲಿಂಗ್​ನಲ್ಲಿ ತಿರುಗೇಟು ನೀಡಿ ಗೆದ್ದ ಕೆಕೆಆರ್​

web kkr
Published on

ಮುಂಬೈ: ವೆಂಕಟೇಶ್​ ಅಯ್ಯರ್​ (70 ರನ್​, 52 ಎಸೆತ, 6 ಬೌಂಡರಿ, 3 ಸಿಕ್ಸರ್​), ಕನ್ನಡಿಗ ಮನೀಷ್​ ಪಾಂಡೆ (42 ರನ್​, 31 ಎಸೆತ, 2 ಬೌಂಡರಿ, 2 ಸಿಕ್ಸರ್​) ಪ್ರತಿಹೋರಾಟ ಮತ್ತು ಬೌಲರ್​ಗಳು ನೀಡಿದ ದಿಟ್ಟ ತಿರುಗೇಟಿನಿಂದ ಕೋಲ್ಕತ ನೈಟ್​ರೈಡರ್ಸ್​ ತಂಡ ಐಪಿಎಲ್​&17ರಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್​ ವಿರುದ್ಧ 24 ರನ್​ಗಳಿಂದ ಜಯಿಸಿದೆ. ಇದರೊಂದಿಗೆ ಕೆಕೆಆರ್​ ವಾಂಖೆಡೆ ಸ್ಟೇಡಿಯಂನಲ್ಲಿ 12 ವರ್ಷಗಳ ಬಳಿಕ ಅಂದರೆ, 2012ರ ಬಳಿಕ ಮೊದಲ ಬಾರಿ ಮುಂಬೈ ವಿರುದ್ಧ ಗೆದ್ದ ಸಾಧನೆ ಮಾಡಿತು. ಜತೆಗೆ ಪ್ಲೇಆ್​ ಪ್ರವೇಶಕ್ಕೂ ಸನಿಹ ತಲುಪಿದರೆ, ಮುಂಬೈ ಬಹುತೇಕ ಹೊರಬಿದ್ದಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಕೆಕೆಆರ್​, ವೇಗಿಗಳಾದ ನುವಾನ್​ ತುಷಾರ (42ಕ್ಕೆ 3) ಮತ್ತು ಜಸ್​ಪ್ರೀತ್​ ಬುಮ್ರಾ (18ಕ್ಕೆ 3) ದಾಳಿಗೆ ತತ್ತರಿಸಿ 19.5 ಓವರ್​ಗಳಲ್ಲಿ 169 ರನ್​ಗಳಿಗೆ ಆಲೌಟ್​ ಆಯಿತು. ಪ್ರತಿಯಾಗಿ ಮಿಚೆಲ್​ ಸ್ಟಾರ್ಕ್​ (33ಕ್ಕೆ 4), ಆಂಡ್ರೆ ರಸೆಲ್​ (30ಕ್ಕೆ 2), ವರುಣ್​ ಚಕ್ರವರ್ತಿ (22ಕ್ಕೆ 2), ಸುನೀಲ್​ ನಾರಾಯಣ್​ (22ಕ್ಕೆ 2) ದಾಳಿಗೆ ನಲುಗಿದ ಮುಂಬೈ 18.5 ಓವರ್​ಗಳಲ್ಲಿ 145 ರನ್​ಗಳಿಗೆ ಸರ್ವಪತನ ಕಂಡು ಶರಣಾಯಿತು. ಎಂದಿನ ಸಿಕ್ಸರ್​-ರನ್​ ಮಳೆಗೆ ಬದಲಾಗಿ ಈ ಪಂದ್ಯ ಒಟ್ಟು 20 ವಿಕೆಟ್​ ಪತನಕ್ಕೆ ಸಾಕ್ಷಿಯಾಯಿತು.

ಮುಂಬೈಗೆ ಕಡಿವಾಣ: ಮುಂಬೈ ಕೂಡ ಆಘಾತಕಾರಿ ಆರಂಭ ಎದುರಿಸಿತು. ಇಶಾನ್​ ಕಿಶನ್​ (13), ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಆಡಿದ ರೋಹಿತ್​ ಶರ್ಮ (11) ಮತ್ತು ನಮನ್​ ಧೀರ್​ (11) ಪವರ್​ಪ್ಲೇನಲ್ಲೇ ಔಟಾದರು. ನಂತರದಲ್ಲಿ ತಿಲಕ್​ ವರ್ಮ (4), ನೇಹಲ್​ ವಧೇರ (6), ನಾಯಕ ಹಾರ್ದಿಕ್​ ಪಾಂಡ್ಯ (1) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಮತ್ತೊಂದೆಡೆ ಏಕಾಂಗಿ ಹೋರಾಟ ತೋರಿದ ಸೂರ್ಯಕುಮಾರ್​ ಯಾದವ್​ (56 ರನ್​, 35 ಎಸೆತ, 6 ಬೌಂಡರಿ, 2 ಸಿಕ್ಸರ್​) ಕೊನೇ 28 ಎಸೆತಗಳಲ್ಲಿ 50 ರನ್​ ಬೇಕಿದ್ದಾಗ ಕೈಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net