

ಶಾರ್ಜಾ: ಯುಎಇ ಚರಣದಲ್ಲಿ ಭರ್ಜರಿ ಗೆಲುವಿನ ಓಟ ಮುಂದುವರಿಸಿರುವ ಕೋಲ್ಕತ ನೈಟ್‌ರೈಡರ್ಸ್ ತಂಡ ಐಪಿಎಲ್ 14ನೇ ಆವೃತ್ತಿಯ ಪ್ರಶಸ್ತಿ ಸುತ್ತಿಗೇರಿದೆ. ಲೀಗ್ ಹಂತದ ಅಗ್ರಸ್ಥಾನಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಕೆಆರ್ ತಂಡ 3 ವಿಕೆಟ್‌ಗಳಿಂದ ಜಯಿಸಿ 7 ವರ್ಷಗಳ ಬಳಿಕ ಫೈನಲ್‌ಗೇರಿದ ಸಾಧನೆ ಮಾಡಿತು. ಇವೊಯಿನ್ ಮಾರ್ಗನ್ ಪಡೆ ಶುಕ್ರವಾರ ನಡೆಯಲಿರುವ ಫೈನಲ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧ ಸೆಣಸಲಿದೆ.
ಶಾರ್ಜಾ ಸ್ಟೇಡಿಯಂನಲ್ಲಿ ಬುಧವಾರ ನಡೆದ ‘ಸೆಮಿಫೈನಲ್’ ಮಾದರಿಯ ಕಾದಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಡೆಲ್ಲಿ ತಂಡ ವರುಣ್ ಚಕ್ರವರ್ತಿ (26ಕ್ಕೆ 2) ಸ್ಪಿನ್ ದಾಳಿಯ ನಡುವೆ 5 ವಿಕೆಟ್‌ಗೆ 135 ರನ್ ಪೇರಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಕೆಕೆಆರ್ ತಂಡ ನಾಟಕೀಯ ಕುಸಿತದ ಹೊರತಾಗಿಯೂ 19.5 ಓವರ್‌ಗಳಲ್ಲಿ 7 ವಿಕೆಟ್‌ಗೆ 136 ರನ್ ಗಳಿಸಿ ಜಯಿಸಿತು.
ವೆಂಕಟೇಶ್-ಶುಭಮಾನ್ ಭರ್ಜರಿ ಚೇಸಿಂಗ್
ಬ್ಯಾಟರ್‌ಗಳಿಗೆ ಸವಾಲೊಡ್ಡುವಂಥ ಶಾರ್ಜಾ ಪಿಚ್‌ನಲ್ಲಿ ಡೆಲ್ಲಿ ತಂಡ ರನ್ ಗಳಿಸಲು ಪರದಾಡಿದರೆ, ಕೆಕೆಆರ್ ಆರಂಭಿಕರಾದ ವೆಂಕಟೇಶ್ ಅಯ್ಯರ್ (55 ರನ್, 41 ಎಸೆತ, 4 ಬೌಂಡರಿ, 3 ಸಿಕ್ಸರ್) ಮತ್ತು ಶುಭಮಾನ್ ಗಿಲ್ (46 ರನ್, 46 ಎಸೆತ, 1 ಬೌಂಡರಿ, 1 ಸಿಕ್ಸರ್) ಸರಾಗವಾಗಿ ಬ್ಯಾಟ್ ಬೀಸಿದರು. ಪವರ್‌ಪ್ಲೇನಲ್ಲೇ 51 ರನ್ ಕಸಿದ ಈ ಜೋಡಿ ಕೆಕೆಆರ್ ಚೇಸಿಂಗ್‌ಗೆ ಬಲ ತುಂಬಿತು. ತಾಳ್ಮೆಯ ಆಟದೊಂದಿಗೆ ಗಿಲ್ ಒದಗಿಸಿದ ಬೆಂಬಲದಿಂದ ವೆಂಕಟೇಶ್ ಅಯ್ಯರ್ 38 ಎಸೆತಗಳಲ್ಲೇ ಟೂರ್ನಿಯ 3ನೇ ಅರ್ಧಶತಕ ಪೂರೈಸಿದರು. ವೆಂಕಟೇಶ್-ಗಿಲ್ ಜೋಡಿ ಬೇರ್ಪಟ್ಟ ಬಳಿಕ ಕೆಕೆಆರ್ 7 ರನ್‌ಗೆ 6 ವಿಕೆಟ್ ಕಳೆದುಕೊಂಡು ದಿಢೀರ್ ಕುಸಿತ ಕಂಡಿತು. ಕೊನೇ ಓವರ್‌ನಲ್ಲಿ 7 ರನ್ ಬೇಕಿದ್ದಾಗ ಅಶ್ವಿನ್ 2 ವಿಕೆಟ್ ಕಬಳಿಸಿದರೂ, ರಾಹುಲ್ ತ್ರಿಪಾಠಿ (12*) 5ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಕೆಕೆಆರ್ ಗೆಲ್ಲಿಸಿದರು. ಟೂರ್ನಿಯ ಎರಡೂ ಚರಣಗಳಲ್ಲಿ ಸ್ಥಿರ ನಿರ್ವಹಣೆ ತೋರಿ 10 ಜಯದೊಂದಿಗೆ ಲೀಗ್ ಹಂತದಲ್ಲಿ ಅಗ್ರಸ್ಥಾನ ಅಲಂಕರಿಸಿದ್ದ ರಿಷಭ್ ಪಂತ್ ಬಳಗ ಸತತ 2ನೇ ಬಾರಿ ಫೈನಲ್‌ಗೇರುವಲ್ಲಿ ಮುಗ್ಗರಿಸಿತು.
ಕಾಡಿದ ವರುಣ್ ಚಕ್ರವರ್ತಿ
ಎಡಗೈ ಆರಂಭಿಕ ಶಿಖರ್ ಧವನ್ ಡೆಲ್ಲಿ ತಂಡಕ್ಕೆ ಭದ್ರ ಬುನಾದಿ ಹಾಕಲು ಶ್ರಮಿಸಿದರು. ಮೊದಲ ವಿಕೆಟ್‌ಗೆ ಪೃಥ್ವಿ ಷಾ (18 ರನ್, 12 ಎಸೆತ, 2 ಬೌಂಡರಿ, 1 ಸಿಕ್ಸರ್) ಜತೆ 32 ರನ್ ಜತೆಯಾಟವಾಡಿದರು. ಬಿರುಸಿನ ಆಟದ ಮೂಲಕ ಪವರ್‌ಪ್ಲೇನಲ್ಲಿ ರನ್‌ಗತಿ ಏರಿಸಲು ಯತ್ನಿಸಿದ ಪೃಥ್ವಿ 5ನೇ ಓವರ್‌ನಲ್ಲಿ ದಾಳಿಗಿಳಿದ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರು. ಬಳಿಕ ವನ್‌ಡೌನ್ ಕ್ರಮಾಂಕದಲ್ಲಿ ಆಡಿದ ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್ (18) ಜತೆಗೂಡಿ 2ನೇ ವಿಕೆಟ್‌ಗೆ 44 ಎಸೆತಗಳಲ್ಲಿ 39 ರನ್ ಸೇರಿಸಿದರು. ಕೆಕೆಆರ್ ಶಿಸ್ತುಬದ್ಧ ದಾಳಿ ಎದುರು ಈ ಜೋಡಿ ವಿಕೆಟ್ ಕಾಯ್ದುಕೊಳ್ಳಲು ಹೆಚ್ಚಿನ ಆದ್ಯತೆ ನೀಡಿದ್ದರಿಂದ ಡೆಲ್ಲಿ ರನ್‌ಗತಿಗೆ ಹೊಡೆತ ಬಿತ್ತು. ಇನಿಂಗ್ಸ್‌ನ 12ನೇ ಓವರ್‌ನಲ್ಲಿ ಸ್ಟೋಯಿನಿಸ್ ಅವರನ್ನು ಬೌಲ್ಡ್ ಮಾಡುವ ಮೂಲಕ ಶಿವಂ ಮಾವಿ ಈ ಜೋಡಿಯನ್ನು ಬೇರ್ಪಡಿಸಿದರು. ಎಚ್ಚರಿಕೆಯ ಆಟದೊಂದಿಗೆ ಡೆಲ್ಲಿ ತಂಡಕ್ಕೆ ಆಸರೆಯಾಗಿದ್ದ ಶಿಖರ್ ಧವನ್ (36 ರನ್, 39 ಎಸೆತ, 1 ಬೌಂಡರಿ, 2 ಸಿಕ್ಸರ್) ಕೂಡ 15ನೇ ಓವರ್‌ನಲ್ಲಿ ಚಕ್ರವರ್ತಿ ಎಸೆತದಲ್ಲಿ ಶಕೀಬ್ ಅಲ್ ಹಸನ್ ಹಿಡಿದ ಡೈವಿಂಗ್ ಕ್ಯಾಚ್‌ಗೆ ಡಗೌಟ್ ಸೇರಿದರು.
ಮೊತ್ತ ಏರಿಸಿದ ಶ್ರೇಯಸ್ ಅಯ್ಯರ್
ಮಾಜಿ ನಾಯಕ ಶ್ರೇಯಸ್ ಅಯ್ಯರ್ (30*ರನ್, 27 ಎಸೆತ, 1 ಬೌಂಡರಿ, 1 ಸಿಕ್ಸರ್) ಹೋರಾಟದ ನೆರವಿನಿಂದ ಡೆಲ್ಲಿ ತಂಡ 130 ರನ್ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಕೊನೇ ಎಸೆತದ ಸಿಕ್ಸರ್ ಸಹಿತ ಶಿವಂ ಮಾವಿ ಎಸೆದ ಇನಿಂಗ್ಸ್‌ನ ಕೊನೇ ಓವರ್‌ನಲ್ಲಿ ಅಯ್ಯರ್ 15 ರನ್ ಕಸಿದರು. ನಾಯಕ ರಿಷಭ್ ಪಂತ್ (6) ಬೇಗನೆ ಔಟಾದ ಬಳಿಕ ಶ್ರೇಯಸ್, ಶಿಮ್ರೊನ್ ಹೆಟ್ಮೆಯರ್ (17) ಜತೆಗೂಡಿ 5ನೇ ವಿಕೆಟ್‌ಗೆ 20 ಎಸೆತಗಳಲ್ಲಿ 27 ರನ್ ಸೇರಿಸಿದರು. ಹೆಟ್ಮೆಯರ್ 3 ರನ್ ಗಳಿಸಿದ್ದಾಗ ಚಕ್ರವರ್ತಿ ಎಸೆತದಲ್ಲಿ ಶುಭಮಾನ್ ಗಿಲ್ ಅದ್ಭುತ ಕ್ಯಾಚ್ ಹಿಡಿದಿದ್ದರೂ, ಅದು ನೋಬಾಲ್ ಆಗಿದ್ದರಿಂದ ಬಚಾವ್ ಆಗಿದ್ದರು. ಇದರಿಂದಾಗಿ ಡೆಲ್ಲಿ ಮೊತ್ತ ಸ್ವಲ್ಪ ಏರಿಕೆ ಕಾಣಲು ನೆರವಾಯಿತು.