

ನವದೆಹಲಿ: ಟಿ20 ವಿಶ್ವಕಪ್ಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 17 ರಿಂದ ನವೆಂಬರ್ 14ರವರೆಗೆ ಯುಎಇನಲ್ಲಿ ಪುರುಷರ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬಿಸಿಸಿಐ ಟೀಮ್ ಇಂಡಿಯಾದ ಹೊಸ ಬ್ರ್ಯಾಂಡ್ ಜರ್ಸಿಯನ್ನು ಬುಧವಾರ (ಅ.13) ಅನಾವರಣಗೊಳಿಸಿದೆ.
ಅಭಿಮಾನಿಗಳ ಬಿಲಿಯನ್ ಚಿಯರ್ಸ್ನಿಂದ ಸ್ಫೂರ್ತಿಗೊಂಡು 'ಬಿಲಿಯನ್ ಚಿಯರ್ಸ್ ಜರ್ಸಿ' ಅನ್ನು ನಾವು ಪ್ರಸ್ತುತ ಪಡಿಸಿದ್ದೇವೆ ಎಂದು ಟ್ವೀಟ್ ಮಾಡಿರುವ ಬಿಸಿಸಿಐ, ಹೊಸ ಜರ್ಸಿ ತೊಟ್ಟು ಒಟ್ಟಿಗೆ ಪೋಸ್ ನೀಡಿರುವ ಕೆ.ಎಲ್. ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಮತ್ತು ಜಸ್ಪ್ರಿತ್ ಬೂಮ್ರಾ ಅವರ ಫೋಟೋವನ್ನು ಪೋಸ್ಟ್ ಮಾಡಿದೆ.
ಹೊಸ ಜರ್ಸಿಯನ್ನು ಟೀಮ್ ಇಂಡಿಯಾದ ಅಧಿಕೃತ ಪ್ರಾಯೋಜಕರಾಗಿರುವ ಎಂಪಿಎಲ್ ಸ್ಫೋರ್ಟ್ಸ್ (MPL Sports) ಉದ್ಘಾಟಿಸಿದೆ. ಇದು ಕೇವಲ ಒಂದು ತಂಡ ಮಾತ್ರವಲ್ಲ, ಭಾರತದ ಹೆಮ್ಮೆ. ಇದು ಕೇವಲ ಜರ್ಸಿ ಮಾತ್ರವಲ್ಲ, ಬಿಲಿಯನ್ ಅಭಿಮಾನಿಗಳ ಆಶೀರ್ವಾದ. ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾವನ್ನು ಹುರಿದುಂಬಿಸಲು ಸಿದ್ಧರಾಗಿ ಎಂದು ಎಂಪಿಎಲ್ ಟ್ವೀಟ್ ಮಾಡಿದೆ.
ಪ್ರಸ್ತುತ ಬಿಡುಗಡೆ ಆಗಿರುವ ಹೊಸ ಜರ್ಸಿ ಗಾಢ ನೀಲಿ ಬಣ್ಣದ್ದಾಗಿದ್ದು, ಕಳೆದ ವರ್ಷ ಡಿಸೆಂಬರ್ನಲ್ಲಿ ಬಿಡುಗಡೆಯಾಗಿದ್ದ ಕಡು ನೀಲಿ ಕಪ್ಪು ಮಾದರಿ ಜರ್ಸಿಯ ಬದಲಾದ ರೂಪವಾಗಿದೆ. ವಿಶೇಷವೆಂದರೆ, 1992ರ ವಿಶ್ವಕಪ್ ಸಮಯದಲ್ಲಿ ಟೀಮ್ ಇಂಡಿಯಾ ಧರಿಸಿದ್ದ ಜರ್ಸಿಗೆ ಪ್ರಸ್ತುತ ಜರ್ಸಿ ಹೋಲಿಕೆಯಾಗಿದೆ.