'ದಾಖಲೆಗಳ ಸರದಾರ' ಎನ್ನಲು ಇದಕ್ಕಿಂತ ಮತ್ತೊಂದು ಸಾಕ್ಷಿ ಬೇಕಿಲ್ಲ! ಐಪಿಎಲ್​ 18ನೇ ಆವೃತ್ತಿಯತ್ತ ಕೊಹ್ಲಿ ಒಲವು | Virat Kohli

ವಿಜಯವಾಣಿ - 2025-03-13T205107.051
Published on

Virat Kohli: ಕಳೆದ ವರ್ಷ ನವೆಂಬರ್​ನಲ್ಲಿ ಎರಡು ದಿನಗಳ ಕಾಲ ನಡೆದ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿನ (RCB) ಮುಖವಾಣಿ ಆಗಿರುವ ವಿರಾಟ್​ ಕೊಹ್ಲಿಯನ್ನು ಫ್ರಾಂಚೈಸಿ 21 ಕೋಟಿ ರೂ.ಗೆ ತಂಡದಲ್ಲಿ ಉಳಿಸಿಕೊಂಡಿತು. ಇದು ಆರ್​ಸಿಬಿ ಅಭಿಮಾನಿಗಳ ಅತೀವ ಸಂತಸಕ್ಕೆ ಕಾರಣವಾಗಿದ್ದೇ ಆದರೂ ಕ್ಯಾಪ್ಟನ್ ಆಗಿ ‘ರನ್​ ಮಷಿನ್’​ರನ್ನು ಆಯ್ಕೆ ಮಾಡಲಿಲ್ಲ ಎಂಬ ಬೇಸರ ತೀವ್ರವಾಗಿ ಕಾಡಿತು. ಆದರೆ, ಮತ್ತೊಮ್ಮೆ ವಿರಾಟ್​ ದಾಖಲೆಗಳತ್ತ ದಾಪುಗಾಲಿಟ್ಟಿರುವುದು ಸಂಗತಿ ಸದ್ಯ ಫ್ಯಾನ್ಸ್​ಗಳ ಖುಷಿಯನ್ನು ದುಪ್ಪಟ್ಟಾಗಿಸಿದೆ.

ಕಿಂಗ್ ಕೊಹ್ಲಿ

ಇತ್ತೀಚೆಗಷ್ಟೇ 2025ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ಭಾರತ, ಪ್ರತಿಷ್ಠಿತ ಐಸಿಸಿ ಟ್ರೋಫಿಗೆ ಮುತ್ತಿಟ್ಟಿತು. ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವಿರಾಟ್​ ಕೊಹ್ಲಿ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಶತಕ ಗಳಿಸಿ, ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿ 84 ರನ್‌ಗಳನ್ನು ಸಿಡಿಸಿದರು. ಈ ಮೂಲಕ ತಂಡಕ್ಕೆ ಆಸರೆಯಾದರು. ಇನ್ನು ಇದೇ ಮಾ.22ರಿಂದ ಪ್ರಾರಂಭವಾಗಲಿರುವ ಐಪಿಎಲ್​ 18ನೇ ಆವೃತ್ತಿಯತ್ತ ಮುಖಮಾಡಿರುವ ವಿರಾಟ್​, ಇಲ್ಲಿಯವರೆಗೂ ಯಾರು ಐಪಿಎಲ್​ ಇತಿಹಾಸದಲ್ಲಿ ಮಾಡಿರದ ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಳ್ಳಲು ಸಜ್ಜಾಗಿದ್ದಾರೆ.

ದಾಖಲೆಗಳ 'ರನ್​ ಮಷಿನ್'​

2025ರ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಅಖಾಡಕ್ಕಿಳಿಯಲಿರುವ ಕಿಂಗ್ ಕೊಹ್ಲಿ, ಐಪಿಎಲ್​ ಆವೃತ್ತಿ ಆರಂಭದಿಂದಲೂ ಒಂದೇ ತಂಡದಲ್ಲಿ ಸತತ 18 ಸೀಸನ್​ ಆಡಿದ ಆಟಗಾರರಾಗಿ ಹೊರಹೊಮ್ಮಲಿದ್ದಾರೆ. ಈ ಸಾಲಿನಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮ ಹೆಸರು ಕೂಡ ಇಲ್ಲ. ಅದಕ್ಕೆ ಕಾರಣ, ಎರಡು ವರ್ಷಗಳ ಕಾಲ ಐಪಿಎಲ್​ನಿಂದ ಸಿಎಸ್​ಕೆ ತಂಡ ಬ್ಯಾನ್​ ಆದ ಹಿನ್ನೆಲೆ ಧೋನಿ ಈ ರೆಕಾರ್ಡ್​ಗೆ ಸೇರುವುದಿಲ್ಲ. ಇನ್ನು ರೋಹಿತ್​ ಶರ್ಮ, ಐಪಿಎಲ್ ಆರಂಭದಲ್ಲಿ ಡೆಕ್ಕಾನ್ ಚಾರ್ಜರ್ಸ್ ತಂಡದ​ ಪರ ಆಡಿದ್ದರಿಂದ ಅವರೂ ಸಹ ಈ ದಾಖಲೆಯಿಂದ ದೂರ ಉಳಿದಿದ್ದಾರೆ.

ಇದರೊಟ್ಟಿಗೆ ಮತ್ತೊಂದು ಇತಿಹಾಸ ನಿರ್ಮಿಸುವ ಅಂಚಿನಲ್ಲಿರುವ ವಿರಾಟ್​, 10 ಟಿ20 ಶತಕ ಗಳಿಸುವ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಶೀಘ್ರವೇ ಪಾತ್ರರಾಗಲಿದ್ದಾರೆ. ಟಿ20 ಫಾರ್ಮೆಟ್​ನ ಪಂದ್ಯಗಳಲ್ಲಿ ಅತಿ ಹೆಚ್ಚು ಸೆಂಚುರಿ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ನಿರ್ಮಿಸಲು ಸದ್ಯ ತುದಿಗಾಲಿನಲ್ಲಿದ್ದಾರೆ. 10 ಟಿ20 ಶತಕ ದಾಖಲಿಸಿದ ಮೊದಲ ಭಾರತೀಯ ಆಟಗಾರ ಎಂಬ ಪಟ್ಟಿಯಿಂದ ವಿರಾಟ್​ ಕೇವಲ ಒಂದು ಶತಕದ ದೂರದಲ್ಲಿದ್ದಾರೆ.

2016ರ ಐಪಿಎಲ್‌ನಲ್ಲಿ ತಮ್ಮ ಮೊದಲ ಟಿ20 ಶತಕ ಬಾರಿಸಿದ ಕೊಹ್ಲಿ, ಟಿ20 ಲೀಗ್‌ನಲ್ಲಿ 8 ಮತ್ತು ಅಫ್ಘಾನಿಸ್ತಾನ ವಿರುದ್ಧದ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಒಂದು ಶತಕ ಗಳಿಸಿ ಮಿಂಚಿದ್ದಾರೆ. ಇದೀಗ 18ನೇ ಆವೃತ್ತಿಯಲ್ಲಿ ಆರ್​ಸಿಬಿ ಪರ ಅಖಾಡಕ್ಕಿಳಿಯಲು ಮೈದಾನದಲ್ಲಿ ಕಸರತ್ತು ನಡೆಸುತ್ತಿರುವ ಕಿಂಗ್ ಕೊಹ್ಲಿ, ಇನ್ನೊಂದು ಶತಕ ದಾಖಲಿಸಿದರೆ ಅವರ ಹೆಸರು ಇತಿಹಾಸ ಪುಟದಲ್ಲಿ ಬೇರೂರುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಮೊದಲ ಪಂದ್ಯವೇ...

ಮಾರ್ಚ್ 22ರಂದು ಕಳೆದ ಬಾರಿಯ ಚಾಂಪಿಯನ್ಸ್​ ಕೆಕೆಆರ್ ಮತ್ತು ಆರ್​ಸಿಬಿ ಶುಭಾರಂಭ ಪಂದ್ಯದಲ್ಲಿ ಮುಖಾಮುಖಿಯಾಗಿ ಸೆಣಸಲಿದೆ. ಈ ಮೂಲಕ 18ನೇ ಆವೃತ್ತಿಗೆ ಚಾಲನೆ ನೀಡಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net