

ಬೆಂಗಳೂರು: ಸ್ಟಾರ್ ಸ್ಪೋರ್ಟ್ಸ್ನ ಪಿಕೆಎಲ್ ಸೀಸನ್ 11ರ ಜಾಹೀರಾತು ಅಭಿಯಾನದಲ್ಲಿ ಬೆಂಗಳೂರು ಬುಲ್ಸ್ (Bengaluru Bulls) ತಂಡದ ಅದ್ಭುತ ಸಾಮರ್ಥ್ಯ ತಿಳಿಸಿದ ಕನ್ನಡ ಚಿತ್ರರಂಗದ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep), ಪ್ರೊ ಕಬಡ್ಡಿ ಲೀಗ್ (Pro kabbadi) ನ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ಪಿಕೆಎಲ್ ಸೀಸನ್ 11ರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಅತಿ ಹುಮ್ಮಸ್ಸಿನ ಈ ಚಿತ್ರವು ಪ್ರಸಾರ ಆರಂಭಿಸಿದೆ. ಅತ್ಯಾಕರ್ಷಕ ಉಪಸ್ಥಿತಿ ಹೊಂದಿರುವ ಮತ್ತು ಅದ್ಭುತ ನಟನಾ ಚಾತುರ್ಯಕ್ಕೆ ಹೆಸರಾಗಿರುವ ಸುದೀಪ್ ಅವರು, ಜನಪ್ರಿಯ ಮತ್ತು ಅತ್ಯುತ್ತಮ ತಂಡಗಳಲ್ಲಿ ಒಂದಾಗಿರುವ ಬೆಂಗಳೂರು ಬುಲ್ಸ್ ತಂಡದ ಶಕ್ತಿ, ದೃಢತೆ ಮತ್ತು ತಂಡದ ಸಾಮರ್ಥ್ಯವನ್ನು ಈ ಜಾಹೀರಾತಿನ ಮೂಲಕ ತಿಳಿಸಿದ್ದಾರೆ.
ಜಾಹೀರಾತು ಚಿತ್ರದ ಪ್ರೋಮೋದಲ್ಲಿ, ಕಿಚ್ಚ ಸುದೀಪ್ ಅವರು ಕರ್ನಾಟಕದ ಜನತೆಯ ಪೂಜ್ಯ ನಂದಿಯ ಶಕ್ತಿ ಮತ್ತು ಹುಮ್ಮಸ್ಸನ್ನು ಪ್ರತಿನಿಧಿಸಿರುವುದನ್ನು ಕಾಣಬಹುದು. ಈ ಪ್ರೋಮೋದಲ್ಲಿ ಅವರು ಬಲಶಾಲಿ ಎದುರಾಳಿ ತಂಡಗಳನ್ನು ಪ್ರತಿನಿಧಿಸುವ ಆನೆಯ ವಿರುದ್ಧ ಮುಖಾಮುಖಿ ಆಗುತ್ತಾರೆ. ದೊಡ್ಡದಾದ ಬಲಶಾಲಿ ಆನೆಯು ತನ್ನ ಸೊಂಡಿಲಿನ ಮೂಲಕ ಅವರನ್ನು ಹಿಡಿದು ಹಿಂದಕ್ಕೆ ಎಳೆಯುತ್ತಿದ್ದಂತೆ ಅವರು ಇಡುವ ಪ್ರತೀ ಹೆಜ್ಜೆಯೂ ಅದ್ಭುತ ಶಕ್ತಿ ಪರೀಕ್ಷೆಯಾಗುತ್ತದೆ. ಬಸವನ ಉತ್ಕೃಷ್ಟ ಶಕ್ತಿ ಮತ್ತು ಆನೆಯ ಪರಾಕ್ರಮದ ನಡುವಿನ ಭೀಕರ ಹೋರಾಟವನ್ನು ಈ ಪ್ರೋಮೋ ತೋರಿಸುತ್ತದೆ. ಕಿಚ್ಚ ಸುದೀಪ್ ಅವರು ತಮ್ಮ ದೃಢವಾದ ಧ್ವನಿಯಲ್ಲಿ "ಕಬಡ್ಡಿ, ಕಬಡ್ಡಿ, ಕಬಡ್ಡಿ" ಎನ್ನುತ್ತಿದ್ದರೆ ಆ ಧ್ವನಿ ಹಿನ್ನೆಲೆಯಲ್ಲಿ ಅನುರಣಿಸುತ್ತಿರುತ್ತದೆ. ಆ ಧ್ವನಿಯೇ ಶಕ್ತಿ ಮತ್ತು ಹುಮ್ಮಸ್ಸನ್ನು ತುಂಬುತ್ತಿರುತ್ತದೆ. ಆ ಧ್ವನಿ ಶಕ್ತಿಯ ನೆರವಿನಿಂದ ಅವರು ಬಲಶಾಲಿ ಆನೆಯನ್ನು ಹಿಮ್ಮೆಟ್ಟಿಸಲು ಯಶಸ್ಸು ಗಳಿಸುತ್ತಾರೆ. ಈ ಕಬಡ್ಡಿ ಕಬಡ್ಡಿ ಎಂಬ ಅದ್ಭುತ ಶಕ್ತಿ ಮಂತ್ರ ಪಠಣವು ಈ ತೀವ್ರವಾದ 'ಉಸಿರಿನ ಯುದ್ಧ'ದ ವಿಜಯವನ್ನು ಪ್ರತಿನಿಧಿಸುತ್ತದೆ.
ಆ ಆಟದಲ್ಲಿ ಅಂತಿಮವಾಗಿ ಕಿಚ್ಚ ಸುದೀಪ್ ಅವರು ಗೆಲುವಿನ ಗೆರೆಯನ್ನು ದಾಟಿದ ಬಳಿಕ ತೊಡೆ ತಟ್ಟಿ ಸಂಭ್ರಮಿಸುತ್ತಾರೆ. ಅಸಾಧಾರಣ ಎದುರಾಳಿಗಳ ವಿರುದ್ಧದ ಗೆಲುವನ್ನು ಸಂಭ್ರಮಿಸುತ್ತಾರೆ. ಈ ದೃಶ್ಯಾವಳಿಯು ಕನ್ನಡಿಗರ ಅಸಾಧಾರಣ ಶಕ್ತಿ ಮತ್ತು ಶೌರ್ಯವನ್ನು ನಿರೂಪಿಸುತ್ತದೆ. ಜತೆಗೆ ಬೆಂಗಳೂರು ಬುಲ್ಸ್ ತಂಡದ ಶಕ್ತಿ ಮತ್ತು ಸಾಮರ್ಥ್ಯ ಪ್ರದರ್ಶಿಸುವ ಅತ್ಯುತ್ತಮ ದೃಶ್ಯ ರೂಪಕಗಳಾಗಿ ಮೂಡಿಬಂದಿದೆ. ಈ ಚಿತ್ರದ ಮೂಲಕ ಸ್ಟಾರ್ ಸ್ಪೋರ್ಟ್ಸ್ ಸ್ಥಳೀಯ ಸಂಸ್ಕೃತಿ ಮತ್ತು ಕಬಡ್ಡಿ ಕ್ರೀಡೆಯ ಸೂಕ್ಷ್ಮತೆಗಳನ್ನು ಸೊಗಸಾಗಿ ಮಿಳಿತಗೊಳಿಸಿದೆ. ಇದರೊಟ್ಟಿಗೆ ಪ್ರೊ ಕಬಡ್ಡಿ ಲೀಗ್ ಜತೆಗಿನ ಕರ್ನಾಟಕದ ಜನತೆಯ ಬಲವಾದ ಬಾಂಧವ್ಯವನ್ನು ಕೂಡ ಸಾರುತ್ತದೆ.
ಈ ಜಾಹೀರಾತು ಚಿತ್ರದ ಕುರಿತು ಮಾತನಾಡಿದ ಜನಪ್ರಿಯ ನಟ ಕಿಚ್ಚ ಸುದೀಪ್ ಅವರು, "ಪ್ರೊ ಕಬಡ್ಡಿ ಲೀಗ್ ಮತ್ತು ನನ್ನದು ಹಲವು ವರ್ಷಗಳ ಸಂಬಂಧ. ಈ ಬಾಂಧವ್ಯದ ಮೂಲಕ ಕ್ರೀಡೆಯು ಹೇಗೆ ಕಚ್ಚಾ ಶಕ್ತಿ, ದೃಢತೆ ಮತ್ತು ದೃಢ ನಿರ್ಣಯವನ್ನು ಪ್ರತಿಪಾದಿಸುತ್ತದೆ ಎಂಬುದನ್ನು ನಾನು ಹತ್ತಿರದಿಂದ ನೋಡಿದ್ದೇನೆ ಮತ್ತು ಆ ಗುಣಗಳು ನನ್ನೊಂದಿಗೆ ಮತ್ತು ಕರ್ನಾಟದ ಜನರಲ್ಲಿ ಆಳವಾಗಿ ಬೇರೂರಿವೆ ಎಂದು ಗಾಢವಾಗಿ ನಂಬಿದ್ದೇನೆ. ಬೆಂಗಳೂರು ಬುಲ್ಸ್ ತಂಡವನ್ನು ಪ್ರತಿನಿಧಿಸುವ ಈ ಜಾಹೀರಾತು ಅಭಿಯಾನವು ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಯಾಕೆಂದರೆ ಇದು ಕೇವಲ ಆಟದ ಶಕ್ತಿಯನ್ನು ಪ್ರತಿಬಿಂಬಿಸುವುದು ಮಾತ್ರವೇ ಅಲ್ಲ, ಜೊತೆಗೆ ಕನ್ನಡಿಗರಿಗೆ ಸ್ಫೂರ್ತಿ ನೀಡುವ ಪ್ರತ್ನವಾಗಿ ಮತ್ತು ತವರಿನ ತಂಡದ ಶಕ್ತಿಯ ಸಂಕೇತವಾಗಿ ಮೂಡಿಬಂದಿದೆ. ಮತ್ತೊಮ್ಮೆ ಈ ಪ್ರಯಾಣದ ಭಾಗವಾಗಲು ನಾನು ಉತ್ಸುಕ ನಾಗಿದ್ದೇನೆ ಮತ್ತು ಈ ಋತುವಿನಲ್ಲಿ ಅದ್ಭುತ ಶಕ್ತಿಯೊಂದಿಗೆ ನಮ್ಮ ಬುಲ್ಸ್ ಚಂಡಮಾರುತವನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದೇನೆ" ಎಂದು ಹೇಳಿದರು.
"Define Your Team’s Superpower" ಅಭಿಯಾನದ ಯಶಸ್ಸಿನ ನಂತರ, ಪ್ರೊ ಕಬಡ್ಡಿ ಲೀಗ್ ತಂಡಗಳಿಗಾಗಿ 10 ಜನಮತಗಳ ಸಮೀಕ್ಷೆಗಳು ಪ್ರಕಟವಾಗಿದ್ದು, ತಮಿಳು ತಲೈವಾಸ್ ಮತ್ತು ಯುಪಿ ಯೋಧಾಸ್ ಕೊನೆಯದಾಗಿ ಇಂದು ಲೈವ್ ಆಗಿವೆ. ಈ ಅಭಿಯಾನವು ಅಭಿಮಾನಿಗಳಿಂದ ವಿಶೇಷವಾದ ತತ್ವದ ಮಾತುಕತೆಗಳನ್ನು ಸೃಷ್ಟಿಸಿದೆ. ಈ ಸಮೀಕ್ಷೆಗಳು, ಆಟಗಾರರ ವಿಡಿಯೋಗಳೊಂದಿಗೆ ಒಟ್ಟಾರೆ 438k ಮತಗಳು, 5.81 ಮಿಲಿಯನ್ ವೀಕ್ಷಣೆಗಳು, 7.78 ಮಿಲಿಯನ್ ಮಂದಿ ತಲುಪಿದ್ದು, 653k ವಹಿವಾಟುಗಳನ್ನು ಪಡೆಯಿತು. ಬೆಂಗಳೂರು ಬುಲ್ಸ್ ತಂಡಕ್ಕಾಗಿ, ಅಭಿಮಾನಿಗಳು 74% ಮತಗಳೊಂದಿಗೆ "ಶಕ್ತಿ" ಅನ್ನು ಪ್ರಧಾನ ಗುಣವೆಂದು ಆರಿಸಿಕೊಂಡಿದ್ದಾರೆ, ಇದು ತಂಡದ ಅಭಿಯಾನದಲ್ಲಿ ಕೇಂದ್ರ ಸ್ಥಾನ ಪಡೆದಿದೆ. PKL ತನ್ನ ಅಭಿಮಾನಿಗಳ ಅಭಿಪ್ರಾಯಗಳನ್ನು ಬೆಲೆ ಕೊಡುತ್ತದೆ ಮತ್ತು ಈ ವಿಶಿಷ್ಟ ಅಭಿಮಾನಿ ಅನುಭವ ಅಭಿಯಾನದ ಮೂಲಕ, ತಂಡದ ಕಥಾಹಂದರಗಳು ಮತ್ತು ಸೀಸನ್ 11 ಅಭಿಯಾನಕ್ಕೆ ಅವರ ಧ್ವನಿಗಳನ್ನು ಕೇಂದ್ರವಾಗಿ ಮಾಡುತ್ತಿದೆ.
ಪಿಕೆಎಲ್ ಸೀಸನ್ 11 ಅವಿಸ್ಮರಣೀಯ ಅನುಭವವನ್ನು ಒದಗಿಸಲಿದೆ. ಈ ಸಲ ಮತ್ತೆ ಮೂರು ನಗರ ಸ್ವರೂಪದಲ್ಲಿ ಈ ಪಂದ್ಯಾವಳಿಯು ಆಯೋಜನೆಗೊಂಡಿದೆ. ಅಕ್ಟೋಬರ್ 18ರಿಂದ ನವೆಂಬರ್ 9ರವರೆಗೆ ಹೈದರಾಬಾದ್ನ ಜಿಎಂಸಿ ಬಾಲಯೋಗಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಲೀಗ್ ಪ್ರಾರಂಭವಾಗಲಿದೆ. ನಂತರ ನವೆಂಬರ್ 10ರಿಂದ ಡಿಸೆಂಬರ್ 1 ರವರೆಗೆ ನೋಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ಎರಡನೇ ಹಂತದ ಪಂದ್ಯಾವಳಿ ನಡೆಯಲಿದೆ. ಡಿಸೆಂಬರ್ 3 ರಿಂದ 24ರವರೆಗೆ ಪುಣೆಯ ಬಾಲೆವಾಡಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಪಂದ್ಯಾವಳಿಯು ಅದ್ದೂರಿಯಾಗಿ ಮುಕ್ತಾಯಗೊಳ್ಳಲಿದೆ. ಆ ಸೀಸಸ್ನ ಆರಂಭಿಕ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತು ಬೆಂಗಳೂರು ಬುಲ್ಸ್ ನಡುವೆ ರೋಮಾಂಚಕ ಹಣಾಹಣಿ ನಡೆಯಲಿದೆ.