ಕೇವಲ ಒಂದು ರನ್​ ಮುನ್ನಡೆಯ ಆಧಾರದಲ್ಲಿ ರಣಜಿ ಟ್ರೋಫಿ ಸೆಮಿಫೈನಲ್​ಗೇರಿದ ಕೇರಳ!

web kl
Published on

ಪುಣೆ: ವಿಕೆಟ್​ ಕೀಪರ್​&ಬ್ಯಾಟರ್​ ಮೊಹಮದ್​ ಅಜರುದ್ದೀನ್​ (67*) ಮತ್ತು ಸಲ್ಮಾನ್​ ನಿಜರ್​ (44) ದಿಟ್ಟ ಜತೆಯಾಟದ ಬಲದಿಂದ ಕೇರಳ ತಂಡ ರಣಜಿ ಟ್ರೋಫಿ ಕ್ವಾರ್ಟರ್​ಫೈನಲ್​ನಲ್ಲಿ ಜಮ್ಮು-ಕಾಶ್ಮೀರ ಎದುರು ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ, ಮೊದಲ ಇನಿಂಗ್ಸ್​ನಲ್ಲಿ ಕಂಡ ಕೇವಲ 1 ರನ್​ ಮುನ್ನಡೆಯ ಆಧಾರದಲ್ಲಿ ಕೇರಳ ಸೆಮಿಫೈನಲ್​ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

ಎಂಸಿಎ ಸ್ಟೇಡಿಯಂನಲ್ಲಿ ಬುಧವಾರ ಮುಕ್ತಾಯಗೊಂಡ ಪಂದ್ಯದಲ್ಲಿ 399 ರನ್​ ಸವಾಲಿಗೆ ಪ್ರತಿಯಾಗಿ 2 ವಿಕೆಟ್​ಗೆ 100 ರನ್​ಗಳಿಂದ 5ನೇ ಹಾಗೂ ಅಂತಿಮ ದಿನದಾಟ ಆರಂಭಿಸಿದ ಕೇರಳ, ಜಮ್ಮು-ಕಾಶ್ಮೀರದ ದಾಳಿಗೆ ಕುಸಿದು 180 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡಿತು. ಆಗ ಜತೆಗೂಡಿದ ಅಜರುದ್ದೀನ್​-ಸಲ್ಮಾನ್​ ಜೋಡಿ ಮುರಿಯದ 7ನೇ ವಿಕೆಟ್​ಗೆ 257 ಎಸೆತಗಳಲ್ಲಿ 115 ರನ್​ ಜತೆಯಾಟವಾಡುವ ಮೂಲಕ ಕೇರಳವನ್ನು ಸೋಲಿನಿಂದ ಪಾರು ಮಾಡಿತು. ಅಂತಿಮವಾಗಿ ಸಚಿನ್​ ಬೇಬಿ ಸಾರಥ್ಯದ ಕೇರಳ 126 ಓವರ್​ಗಳಲ್ಲಿ 6 ವಿಕೆಟ್​ಗೆ 295 ರನ್​ ಗಳಿಸುವ ಮೂಲಕ ಡ್ರಾ ಸಾಧಿಸಿ ಜಮ್ಮು&ಕಾಶ್ಮೀರದ ಚೊಚ್ಚಲ ಸೆಮೀಸ್​ ಕನಸು ಭಗ್ನಗೊಳಿಸಿತು.

ಕೇರಳ ತಂಡ ರಣಜಿ ಟ್ರೋಫಿ ಇತಿಹಾಸದಲ್ಲಿ 2ನೇ ಬಾರಿ ಸೆಮಿಫೈನಲ್​ ಪ್ರವೇಶಿಸಿದೆ. ಈ ಮುನ್ನ 2018-19ರಲ್ಲಿ ಮೊದಲ ಬಾರಿ ಈ ಸಾಧನೆ ಮಾಡಿತ್ತು ಮತ್ತು ಆಗ ಸೆಮೀಸ್​ನಲ್ಲಿ ವಿದರ್ಭ ಎದುರು ಸೋತಿತ್ತು.

ಜಮ್ಮು-ಕಾಶ್ಮೀರ: 280 ಮತ್ತು 9 ವಿಕೆಟ್​ಗೆ 399 ಡಿಕ್ಲೇರ್​; ಕೇರಳ: 281 ಮತ್ತು 6 ವಿಕೆಟ್​ಗೆ 295 (ಕುನ್ನುಮಲ್​ 36, ಅಕ್ಷಯ್​ 48, ಸಚಿನ್​ ಬೇಬಿ 48, ಜಲಜ್​ 18, ಸಲ್ಮಾನ್​ 44*, ಅಜರುದ್ದೀನ್​ 67*, ಯುಧ್ವೀರ್​ 61ಕ್ಕೆ 2, ಸಾಹಿಲ್​ 50ಕ್ಕೆ 2, ಅಬಿದ್​ 56ಕ್ಕೆ 2).

*ಸೆಮಿಫೈನಲ್ಸ್​

ವಿದರ್ಭ-ಮುಂಬೈ

ಎಲ್ಲಿ: ನಾಗ್ಪುರ

ಗುಜರಾತ್​-ಕೇರಳ

ಎಲ್ಲಿ: ಅಹಮದಾಬಾದ್​

ಯಾವಾಗ: ಫೆ. 17-21

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net