ನಾಯಕ ಸಚಿನ್​ ಬೇಬಿ ಹೋರಾಟದ ನಡುವೆ ಕುಸಿದ ಕೇರಳ; ವಿದರ್ಭಕ್ಕೆ ಅಮೂಲ್ಯ ಮುನ್ನಡೆ

web ranji
Published on

ನಾಗ್ಪುರ: ಸಂಘಟಿತ ಬೌಲಿಂಗ್​ ದಾಳಿಯ ಮೂಲಕ ಪ್ರವಾಸಿ ಕೇರಳ ತಂಡಕ್ಕೆ ನಿಯಂತ್ರಣ ಹೇರಿರುವ ವಿದರ್ಭ ತಂಡ 90ನೇ ಆವೃತ್ತಿಯ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಯ ಫೈನಲ್​ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಅಮೂಲ್ಯವಾದ ಮುನ್ನಡೆ ಸಾಧಿಸಿದೆ. ಈ ಮೂಲಕ ಅಕ್ಷಯ್​ ವಾಡ್ಕರ್​ ಸಾರಥ್ಯದ ವಿದರ್ಭ ತಂಡ ಪ್ರಶಸ್ತಿ ಒಲಿಸಿಕೊಳ್ಳುವ ಅವಕಾಶ ಹೆಚ್ಚಿಸಿಕೊಂಡಿದೆ.

ಜಾಮ್ತಾದ ವಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪ್ರಶಸ್ತಿ ಹೋರಾಟದ 3ನೇ ದಿನವಾದ ಶುಕ್ರವಾರ 3 ವಿಕೆಟ್​ಗೆ 131 ರನ್​ಗಳಿಂದ ಇನಿಂಗ್ಸ್​ ಮುಂದುವರಿಸಿದ ಕೇರಳ ದಿನದಂತ್ಯಕ್ಕೆ 125 ಓವರ್​ಗಳಲ್ಲಿ 342 ರನ್​ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ವಿದರ್ಭ ಮೊದಲ ಇನಿಂಗ್ಸ್​ನಲ್ಲಿ 37 ರನ್​ ಮುನ್ನಡೆ ಸಾಧಿಸಿತು.

2ನೇ ದಿನ 44 ರನ್​ಗಳಿಸಿ ಕ್ರೀಸ್​ನಲ್ಲಿದ್ದ ಆದಿತ್ಯ ಸರ್ವಟೆ 3ನೇ ದಿನ ಬೆಳಗ್ಗೆ 79 ರನ್​ಗಳಿಗೆ ಔಟಾದರು. ಬಳಿಕ ನಾಯಕ ಸಚಿನ್​ ಬೇಬಿ (98 ರನ್​, 235 ಎಸೆತ, 10 ಬೌಂಡರಿ) ಕೇರಳ ಇನಿಂಗ್ಸ್​ಗೆ ಆಸರೆಯಾಗಿ ನಿಂತರು. ಸಚಿನ್​ಗೆ ಸಲ್ಮಾನ್​ ನಿಜರ್​ (21), ಮೊಹಮದ್​ ಅಜರುದ್ದೀನ್​ (34), ಜಲಜ್​ ಸಕ್ಸೇನಾ (28) ಉಪಯುಕ್ತ ಬೆಂಬಲ ಒದಗಿಸಿದರು. ಕೇರಳ ತಂಡ ಇನ್ನೂ 55 ರನ್​ ಹಿನ್ನಡೆಯಲ್ಲಿದ್ದಾಗ, ಶತಕದಂಚಿನಲ್ಲಿದ್ದ ಸಚಿನ್​ ಬೇಬಿ ಔಟಾದರು. ಇದರಿಂದ ದಿಢೀರ್​ ಕುಸಿತ ಕಂಡ ಕೇರಳ 18 ರನ್​ ಅಂತರದಲ್ಲಿ ಕೊನೇ 4 ವಿಕೆಟ್​ ಕಳೆದುಕೊಂಡಿತು. ದರ್ಶನ್​ ನಲ್ಕಂಡೆ (52ಕ್ಕೆ 3), ಹರ್ಷ್​ ದುಬೆ (88ಕ್ಕೆ 3) ಮತ್ತು ಪಾರ್ಥ ರೇಖಾಡೆ (65ಕ್ಕೆ 3) ಕೇರಳಕ್ಕೆ ಕಡಿವಾಣ ಹಾಕಿದರು.

ಡ್ರಾ ಆದರೆ ವಿದರ್ಭಕ್ಕೆ ಪ್ರಶಸ್ತಿ

ವಿದರ್ಭ&ಕೇರಳ ನಡುವಿನ ಫೈನಲ್​ ಪಂದ್ಯದಲ್ಲಿ ಇನ್ನೂ 2 ದಿನಗಳ ಆಟ ಬಾಕಿ ಉಳಿದಿದೆ. ಪಂದ್ಯದಲ್ಲಿ ಸ್ಪಷ್ಟ ಲಿತಾಂಶ ದಾಖಲಾಗುವ ಸಾಧ್ಯತೆ ಈಗಲೂ ಜೀವಂತವಾಗಿದೆ. ಆದರೆ ಒಂದು ವೇಳೆ ಪಂದ್ಯ ಡ್ರಾ ಅಥವಾ ಟೈನಲ್ಲಿ ಮುಕ್ತಾಯಗೊಂಡರೆ, ಮೊದಲ ಇನಿಂಗ್ಸ್​ ಮುನ್ನಡೆ ಆಧಾರದಲ್ಲಿ ವಿದರ್ಭಕ್ಕೆ ಪ್ರಶಸ್ತಿ ಒಲಿಯುವುದು ಖಚಿತವೆನಿಸಿದೆ. ಇದರೊಂದಿಗೆ ಚೊಚ್ಚಲ ಪ್ರಶಸ್ತಿ ಗೆಲ್ಲುವ ಕೇರಳದ ಆಸೆ ಭಗ್ನಗೊಳ್ಳಲಿದ್ದರೆ, ವಿದರ್ಭ ಕಳೆದ ವರ್ಷ ಕೈತಪ್ಪಿದ್ದ ಪ್ರಶಸ್ತಿಯನ್ನು 3ನೇ ಬಾರಿ ಒಲಿಸಿಕೊಂಡಂತಾಗುತ್ತದೆ. ವಿದರ್ಭ ಈ ಮುನ್ನ 2017&18 ಮತ್ತು 2018&19ರಲ್ಲಿ ಸತತ 2 ವರ್ಷ ಪ್ರಶಸ್ತಿ ಜಯಿಸಿತ್ತು.

ಹರ್ಷ್​ ದುಬೆ ದಾಖಲೆ

ವಿದರ್ಭದ ಎಡಗೈ ಸ್ಪಿನ್ನರ್​ ಹರ್ಷ್​ ದುಬೆ ರಣಜಿ ಟ್ರೋಫಿ ಆವೃತ್ತಿಯೊಂದರಲ್ಲಿ ಸರ್ವಾಧಿಕ 69 ವಿಕೆಟ್​ ಕಬಳಿಸಿದ ದಾಖಲೆ ಬರೆದರು. 2018-19ರ ಆವೃತ್ತಿಯಲ್ಲಿ ಬಿಹಾರದ ಆಶುತೋಷ್​ ಅಮನ್​ 68 ವಿಕೆಟ್​ ಕಬಳಿಸಿದ್ದು ಹಿಂದಿನ ದಾಖಲೆಯಾಗಿತ್ತು. 22 ವರ್ಷದ ಹರ್ಷ್​ ದುಬೆ ಹಾಲಿ ಆವೃತ್ತಿಯಲ್ಲಿ 5 ಅರ್ಧಶತಕಗಳ ಸಹಿತ 472 ರನ್​ ಗಳಿಸಿ ಮಿಂಚಿದ್ದು, ಭಾರತೀಯ ಟೆಸ್ಟ್​ ತಂಡದಲ್ಲಿ ರವೀಂದ್ರ ಜಡೇಜಾ ಉತ್ತರಾಧಿಕಾರಿ ಆಗುವರು ಎಂದು ಬಣ್ಣಿಸಲಾಗುತ್ತಿದೆ.

ವಿದರ್ಭ: 379, ಕೇರಳ: 125 ಓವರ್​ಗಳಲ್ಲಿ 342 (ಸರ್ವಟೆ 79, ಇಮ್ರಾನ್​ 37, ಸಚಿನ್​ ಬೇಬಿ 98, ಸಲ್ಮಾನ್​ ನಿಜರ್​ 21, ಅಜರುದ್ದೀನ್​ 34, ಜಲಜ್​ 28, ಈಡನ್​ 10, ದರ್ಶನ್​ 52ಕ್ಕೆ 3, ಹರ್ಷ್​ ದುಬೆ 88ಕ್ಕೆ 3, ಪಾರ್ಥ 65ಕ್ಕೆ 3, ಯಶ್​ ಠಾಕೂರ್​ 83ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net