ಅವಧಿಯೊಳಗೆ ಕ್ರೀಡಾಂಗಣಗಳು ನವೀಕರಣವಾಗದಿದ್ದಕ್ಕೆ ಭಾರತದ ವಿರುದ್ಧ ಕಿಡಿ; Champions Trophy ಸಮೀಪಿಸುತ್ತಿದ್ದಂತೆ ಪಾಕ್ ಹೊಸ ಕ್ಯಾತೆ

Champions Trophy
Published on

ನವದೆಹಲಿ: ಫೆಬ್ರವರಿ 19ರಿಂದ ಮಾರ್ಚ್​ 09ರವರೆಗೆ ಪಾಕಿಸ್ತಾನ ಹಾಗೂ ದುಬೈ ಆತಿಥ್ಯದಲ್ಲಿ (ಭಾರತದ ಪಂದ್ಯಗಳು ಮಾತ್ರ) ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ (Champions Trophy) ದಿನಗಣನೆ ಆರಂಭವಾಗಿದ್ದು, ತಂಡಗಳು ಟೂರ್ನಿಗೆ ಬೇಕಾಗಿರುವ ಅಗತ್ಯ ತಯಾರಿಯನ್ನು ನಡೆಸುತ್ತಿವೆ.  ಇನ್ನೂ ಟೂರ್ನಿಯ ವಿಚಾರಕ್ಕೆ ಬರುವುದಾದರೆ 29 ವರ್ಷಗಳ ಬಳಿಕ ಪಾಕಿಸ್ತಾನ ಐಸಿಸಿ ಟೂರ್ನಿಯೊಂದಕ್ಕೆ ಆತಿಥ್ಯ ವಹಿಸುತ್ತಿದ್ದು, ಚಾಂಪಿಯನ್ಸ್ ಟೂರ್ನಿ ಮುಖಾಂತರ ದೇಶದ ಆರ್ಥಿಕ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸುತ್ತದೆ ಎಂಬ ವಿಶ್ವಾಸದಲ್ಲಿ ಪಾಕ್​ ಎದುರು ನೋಡುತ್ತಿದೆ. ಆದರೆ ಕ್ರೀಡಾಂಗಣಗಳು ಸರಿಯಾದ ಸಮಯದಲ್ಲಿ ನವೀಕರಣಗೊಳ್ಳದ ಕಾರಣ ಆತಿಥ್ಯ ಕೈ ತಪ್ಪುವ ಭೀತಿ ಎದುರಿಸುತ್ತಿದೆ.

ಜನವರಿ 31ರಂದು ಪಿಸಿಬಿ ಕರಾಚಿ, ರಾವಲ್ಪಿಂಡಿ, ಲಾಹೋರ್​ನಲ್ಲಿರುವ ಕ್ರೀಡಾಂಗಣಗಳನ್ನು ಐಸಿಸಿಗೆ ಹಸ್ತಾಂತರಿಸಬೇಕಿತ್ತು. ಆದರೆ. ಕ್ರೀಢಾಂಗಣದ ನವೀಕರಣ ಕಾಮಗಾರಿ ಸರಿಯಾದ ಸಮಯದಲ್ಲಿ ಆಗದಿರುವ ಕಾರಣ ಹಸ್ತಾಂತರ ಕಾರ್ಯ ಮತ್ತಷ್ಟು ವಿಳಂಬವಾಗುತ್ತದೆ ಎಂದು ಹೇಳಲಾಗಿದ್ದು, ಈ ಬಗ್ಗೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್​ ನಖ್ವಿ ಪ್ರತಿಕ್ರಿಯಿಸಿದ್ದು, ಪರೋಕ್ಷವಾಗಿ ಭಾರತದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಕ್ರೀಡಾಂಗಣಗಳು ಸರಿಯಾದ ಸಮಯಕ್ಕೆ ನವೀಕರಣವಾಗದ ಕಾರಣ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರಗೊಳ್ಳುತ್ತದೆ ಎಂದು ಕೆಲವರು ಹೇಳುತ್ತಿದ್ದರು. ಆದರೆ, ಕ್ರೀಡಾಂಗಣಗಳು ಈಗಾಗಲೇ ಸಿದ್ದವಾಗಿದ್ದು, ತ್ರಿಕೋನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಪಿಯನ್ನು ನಡೆಸಿ ನಾವು ಏನೆಂಬುದನ್ನ ತೋರಿಸುತ್ತೇವೆ. ಫೆಬ್ರವರಿ 16ರಂದು ಲಾಹೋರ್​ನಲ್ಲಿ ಉದ್ಘಟನಾ ಸಮಾಂರಭವನ್ನು ಹಮ್ಮಿಕೊಂಡಿದ್ದೇವೆ. ಕೆಲವು ತಂಡಗಳು ತಡವಾಗಿ ಆಗಮಿಸುತ್ತಿರುವುದರಿಂದ ಫೋಟೋಶೂಟ್ ನಡೆಸಲು ಸಾಧ್ಯವಾಗುತ್ತಿಲ್ಲ.

Mohsin Naqvi

ಐಸಿಸಿ ನಿಗದಿಪಡಿಸಿರುವ ಬಜೆಟ್​ಗಿಂತ 12 ಶತಕೋಟಿ ಪಾಕಿಸ್ತಾನಿ ರೂಪಾಯಿ ಹೆಚ್ಚಿಗೆ ಖರ್ಚಾಗಿದ್ದು, ಈ ವೆಚ್ಚವನ್ನು ಐಸಿಸಿಯಿಂದ ಮರುಪಡೆಯುತ್ತೇವೆ. ಇದಲ್ಲದೆ ಐಸಿಸಿಗೆ ಕೆಲವು ಬೇಡಿಕೆಗಳನ್ನು ಇರಿಸಲಾಗಿದ್ದು, ಸಕಾರಾತ್ಮಕ ಸ್ಪಂದನೆ ಸಿಗುವ ವಿಶ್ವಾಸದಲ್ಲಿದ್ದೇವೆ. ಈವೆಂಟ್​ಗೆ ಸಂಬಂಧಿಸಿದಂತೆ ಭಾರತ ಸೇರಿದಂತೆ ಟೂರ್ನಿಯಲ್ಲಿ ಭಾಗಿಯಾಗುತ್ತಿರುವ ದೇಶಗಳ ಕ್ರಿಕೆಟ್​ ಮಂಡಳಿಗಳನ್ನು ಈಗಾಗಲೇ ಆಮಂತ್ರಣ ನೀಡಲಾಗಿದ್ದು, ಮುಂದಿನ ಕೆಲವೇ ದಿನಗಕಳಲ್ಲಿ ಈ ಬಗ್ಗೆ ತಿಳಿದು ಬರಲಿದೆ ಎಂದು ಪಿಸಿಬಿ ಅಧ್ಯಕ್ಷ ಮೊಹ್ಸಿನ್​ ನಖ್ವಿ ತಿಳಿಸಿದ್ದಾರೆ.

ಟೂರ್ನಿಯ ಭವಿಷ್ಯಕ್ಕೆ ಕೊಳ್ಳಿ? 

ಪಾಕಿಸ್ತಾನದ ಮೂರು ಕ್ರೀಡಾಂಗಣಗಳ ನವೀಕರಣಕ್ಕಾಗಿ ಪಿಸಿಬಿ 373 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಟೂರ್ನಿ ಆರಂಭವಾಗುವ ವೇಳೆಗೆ ಕ್ರೀಡಾಂಗಣಗಳು ಪೂರ್ಣಪ್ರಮಾಣದಲ್ಲಿ ಸಿದ್ದವಾಗುವುದು ಡೌಟ್​ ಎಂದು ಹೇಳಲಾಗಿದೆ. ನಿಗದಿತ ಅವಧಿಯೊಳಗೆ ಕ್ರೀಡಾಂಗಣಗಳು ಸಿದ್ದವಾಗದ ಕಾರಣ ಚಾಂಪಿಯನ್ಸ್ ಟ್ರೋಫಿ (Champions Trophy) ಉದ್ಘಾಟನಾ ಸಮಾರಂಭವನ್ನು ಮುಂದೂಡುವುದು ಅಥವಾ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿಯ ಮೂರು ಸ್ಥಳಗಳಲ್ಲಿ ಈಗಾಗಲೇ ಟಿಕೆಟ್ ಮಾರಾಟ ಆರಂಭವಾಗಿದ್ದು, ಟೂರ್ನಿ ಕೈತಪ್ಪುವ ಭೀತಿಯನ್ನು ಎದುರಿಸುತ್ತಿದೆ. ಮೊದಲಿಗೆ ಹೈಬ್ರಿಡ್‌ ಮಾದರಿಗೆ ವಿರೋಧ ವ್ಯಕ್ತಪಡಿಸಿದ್ದ ಪಾಕಿಸ್ತಾನ ಈಗ ಅಗತ್ಯ ತಯಾರಿ ಇಲ್ಲದೇ ಟೂರ್ನಿ ಆಯೋಜನೆಗೆ ಮುಂದಾಗುವ ಮೂಲಕ ಟೂರ್ನಿಯ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net