ಕರ್ನಾಟಕದ ಶ್ರೀನಿಧಿಗೆ ಐಟಿಎಫ್​ ಜೂನಿಯರ್​ ಟೆನಿಸ್​ ಟೂರ್ನಿಯಲ್ಲಿ ಅವಳಿ ಪ್ರಶಸ್ತಿ

web ten
Published on

ಬೆಂಗಳೂರು: ಕರ್ನಾಟಕದ ಉದಯೋನ್ಮುಖ ಆಟಗಾರ್ತಿ ಶ್ರೀನಿಧಿ ಬಾಲಾಜಿ ಕೀನ್ಯಾದ ನೈರೋಬಿಯಲ್ಲಿ ನಡೆದ ಐಟಿಎಫ್​​ ಜೂನಿಯರ್​ (18 ವಯೋಮಿತಿ) ಟೆನಿಸ್​ ಟೂರ್ನಿಯಲ್ಲಿ ಅವಳಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಬೆಂಗಳೂರಿನ 18 ವರ್ಷದ ಶ್ರೀನಿಧಿ ಬಾಲಾಜಿ ಸಿಂಗಲ್ಸ್​ ವಿಭಾಗದ ಫೈನಲ್​ನಲ್ಲಿ 3ನೇ ಶ್ರೇಯಾಂಕಿತೆ ದಿವ್ಯಾ ರಮೇಶ್​ ಎದುರು ಹಿನ್ನಡೆಯಿಂದ ಮೇಲೆದ್ದು ಗೆಲುವು ದಾಖಲಿಸಿದರು. 4ನೇ ಶ್ರೇಯಾಂಕಿತೆ ಶ್ರೀನಿಧಿ 3-6, 6-1, 6-4ರಿಂದ ದಿವ್ಯಾಗೆ ಸೋಲುಣಿಸಿದರು. ಈ ಮೂಲಕ ಸಿಂಗಲ್ಸ್​ ವಿಭಾಗದಲ್ಲಿ ತನ್ನ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡರು. ಇದಕ್ಕೆ ಮುನ್ನ ಸೆಮೀಸ್​ನಲ್ಲಿ ಶ್ರೀನಿಧಿ ಅಗ್ರ ಶ್ರೇಯಾಂಕಿತೆ ಹರಿತಾ ಶ್ರೀ ವೆಂಕಟೇಶ್​ ಎದುರು 6-4, 4-6, 6-3ರಿಂದ ಗೆಲುವು ಸಾಧಿಸಿದ್ದರು.

ಶ್ರೀನಿಧಿ ನಂತರ ಡಬಲ್ಸ್​ ವಿಭಾಗದಲ್ಲಿ ದೇಶಬಾಂಧವೆ ಜಾನ್ನೆಟ್​ ಚಿರಿಪಲ್​ ಜತೆಗೂಡಿ ಪ್ರಶಸ್ತಿ ಗೆದ್ದುಕೊಂಡರು. 2ನೇ ಶ್ರೇಯಾಂಕಿತ ಶ್ರೀನಿಧಿ-ಜಾನ್ನೆಟ್​ ಜೋಡಿ ಸೆರ್ಬಿಯಾದ ಇನಾ ಇಲಿಕ್​ ಮತ್ತು ಇಟಲಿಯ ಅಲೈಸ್​ ಲೋಜಿ ವಿರುದ್ಧ 6-7, 6-3, 10-6ರಿಂದ ಗೆಲುವು ದಾಖಲಿಸಿದರು. ಶ್ರೀನಿಧಿಗೆ ಡಬಲ್ಸ್​ ವಿಭಾಗದಲ್ಲಿ ಇದು 4ನೇ ಐಟಿಎ್​ ಪ್ರಶಸ್ತಿ ಗೆಲುವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net