ಕೋಲ್ಕತದ ಮೂರರ ಪೋರ ಅನೀಶ್​ ಸರ್ಕಾರ್​ ಈಗ ಫಿಡೆ ರೇಟೆಡ್​ ಚೆಸ್​ ಆಟಗಾರ!

web chess
Published on

ಕೋಲ್ಕತ: ಹೆಚ್ಚಿನ ಮಕ್ಕಳು ಚೋಟಾ ಭೀಮ್​ ನೋಡುತ್ತ, ಆಟಿಕೆಗಳಲ್ಲಿ ಆಡುವ ವಯಸ್ಸಿನಲ್ಲಿ ಕೋಲ್ಕತದ ಪೋರನೊಬ್ಬ ಫಿಡೆ ರೇಟೆಡ್​ ಚೆಸ್​ ಆಟಗಾರನಾಗುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಕೋಲ್ಕತದ 3 ವರ್ಷ, 8 ತಿಂಗಳು, 19 ದಿನ ವಯಸ್ಸಿನ ಅನೀಶ್​ ಸರ್ಕಾರ್​ ಶುಕ್ರವಾರ ವಿಶ್ವದ ಅತ್ಯಂತ ಕಿರಿಯ ಫಿಡೆ ರೇಟೆಡ್​ ಚೆಸ್​ ಆಟಗಾರ ಎನಿಸಿದ್ದಾನೆ. ಇದೀಗ 5 ರೇಟೆಡ್​ ಆಟಗಾರರನ್ನು ಎದುರಿಸುವ ಕನಿಷ್ಠ ಮಾನದಂಡವನ್ನು ಪೂರೈಸುವುದರೊಂದಿಗೆ ಅನೀಶ್​, 1555ನೇ ಫಿಡೆ ರೇಟಿಂಗ್​ ಪಡೆದಿದ್ದಾರೆ. 5ನೇ ವಯಸ್ಸಿನ ತೇಜಸ್​ ತಿವಾರಿ ಈ ಹಿಂದಿನ ಅತಿ ಕಿರಿಯ ರೇಟೆಡ್​ ಆಟಗಾರ ಎನಿಸಿದ್ದ.

2021ರ ಜನವರಿ 26ರಂದು ಜನಿಸಿದ ಅನೀಶ್​, ಕಳೆದ ತಿಂಗಳು ಪಶ್ಚಿಮ ಬಂಗಾಳದ 9 ವಯೋಮಿತಿ ಮುಕ್ತ ಚೆಸ್​ ಟೂರ್ನಿಯಲ್ಲಿ ಆಡುವ ಮೂಲಕ ಸ್ಪರ್ಧಾತ್ಮಕ ಚೆಸ್​ ಆಟಕ್ಕೆ ಪ್ರವೇಶ ಪಡೆದಿದ್ದ. ಟೂರ್ನಿಯಲ್ಲಿ 8ರಲ್ಲಿ 5.5 ಅಂಕ ಕಲೆಹಾಕಿದ್ದ ಅನೀಶ್​ 24ನೇ ಸ್ಥಾನ ಗಳಿಸಿದ್ದ. ಜತೆಗೆ ಇಬ್ಬರು ಫಿಡೆ ರೇಟೆಡ್​ ಆಟಗಾರರನ್ನು ಸೋಲಿಸಿದ್ದ. ಬೆಂಗಾಲ್​ ರ್ಯಾಪಿಡ್​ ರೇಟಿಂಗ್​ ಓಪನ್​ ಟೂರ್ನಿಯ ಪ್ರದರ್ಶನ ಪಂದ್ಯದಲ್ಲಿ ವಿಶ್ವ ನಂ. 4 ಹಾಗೂ ಹಾಲಿ ಭಾರತದ ನಂ. 1 ಚೆಸ್​ ಆಟಗಾರ ಅರ್ಜುನ್​ ಇರಿಗೈಸಿ ವಿರುದ್ಧ ಆಡುವ ಅವಕಾಶವನ್ನೂ ಪಡೆದಿದ್ದ. ವಾರದ ನಂತರ ಪಶ್ಚಿಮ ಬಂಗಾಳದ 13 ವಯೋಮಿತಿ ಟೂರ್ನಿಯಲ್ಲೂ ಆಡಿದ್ದ.

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅನೀಶ್​ ತಂದೆ-ತಾಯಿ ಇಬ್ಬರಿಗೂ ಚೆಸ್​ ಆಟದ ಬಗ್ಗೆ ಯಾವುದೇ ಜ್ಞಾನವಿಲ್ಲ. ಮಗ ಒಂದು ವರ್ಷದ ಹಿಂದೆ ಯುಟ್ಯೂಬ್​ ನೋಡುವಾಗ ಚೆಸ್​ ಆಟದ ವಿಡಿಯೋಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದ್ದನ್ನು ನೋಡಿ ಗ್ರಾಂಡ್​ಮಾಸ್ಟರ್​ ಹಾಗೂ ಚೆಸ್​ ಕೋಚ್​ ದಿವ್ಯೇಂದು ಬರುವಾ ಬಳಿ ತರಬೇತಿಗೆ ಸೇರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net