

ಬೆಂಗಳೂರು: ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಬುಧವಾರ ಮುಕ್ತಾಯಗೊಂಡ 69ನೇ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ಮಹಿಳೆಯರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಭಾರತೀಯ ಬಾಲ್ ಬ್ಯಾಡ್ಮಿಂಟನ್ ಫೆಡರೇಷನ್ ಹಾಗೂ ಮಹಾರಾಷ್ಟ್ರ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಜಂಟಿ ಆಶ್ರಯದಲ್ಲಿ ನಡೆದ ಕೂಟದ ಫೈನಲ್ನಲ್ಲಿ ಕರ್ನಾಟಕ ತಂಡ ಕಳೆದ ಬಾರಿಯ ಚಾಂಪಿಯನ್ ತಮಿಳುನಾಡು ತಂಡವನ್ನು 35-29, 35-26 ನೇರ ಸೆಟ್ಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಸೆಮಿಫೈನಲ್ ಪಂದ್ಯದಲ್ಲಿ ರಾಜ್ಯ ತಂಡ ಕೇರಳ ತಂಡವನ್ನು 35-11, 35-16 ನೇರ ಸೆಟ್ಗಳಿಂದ ಹಾಗೂ ತಮಿಳುನಾಡು ತಂಡ ಆಂಧ್ರ ಪ್ರದೇಶ ತಂಡವನ್ನು 35-28, 35-20 ನೇರ ಸೆಟ್ಗಳಿಂದ ಸೋಲಿಸಿತು.
ದಿವ್ಯ ಎಂ.ಎಸ್. ನೇತೃತ್ವದ ರಾಜ್ಯ ಮಹಿಳಾ ತಂಡ ಲೀಗ್ ಹಂತದ ಪಂದ್ಯಗಳಲ್ಲಿ ಬಿ ಬಣದ ಅಗ್ರಸ್ಥಾನಿಯಾಗಿ ಕ್ವಾರ್ಟರ್ಫೈನಲ್ನಲ್ಲಿ ರಾಜಸ್ಥಾನವನ್ನು ನೇರ ಸೆಟ್ಗಳಿಂದ ಸೋಲಿಸಿತ್ತು. ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನವನ್ನು ನೀಡಿದ ಕರ್ನಾಟಕ ರಾಜ್ಯ ತಂಡದ ಪಲ್ಲವಿ.ಬಿ.ಎಸ್. ಹಾಗೂ ಸಹನ ಎಚ್.ವೈ.ಗೆ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪಲ್ಲವಿ ಬಿ.ಎಸ್. ಟೂರ್ನಿಯ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ರಾಜ್ಯ ಮಹಿಳಾ ತಂಡ ಡಬಲ್ಸ್ ಪಂದ್ಯದಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಪುರುಷರ ಡಬಲ್ಸ್ ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡಿತು.