

ಸೂರತ್: ಸಂಘಟಿತ ಬೌಲಿಂಗ್ ನಿರ್ವಹಣೆಯೊಂದಿಗೆ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ತನ್ನ 5ನೇ ಲೀಗ್ ಪಂದ್ಯದಲ್ಲಿ ಆತಿಥೇಯ ರೈಲ್ವೇಸ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರೂ, ಬ್ಯಾಟಿಂಗ್ ವಿಭಾಗದ ವೈಫಲ್ಯದಿಂದಾಗಿ ಎದಿರೇಟು ಎದುರಿಸಿದೆ. ಇದರಿಂದಾಗಿ ಪಂದ್ಯದ 2ನೇ ದಿನ ಯಾವ ತಂಡ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಲಾಲ್ಬಾಯಿ ಕಂಟ್ರಾಕ್ಟರ್ ಸ್ಟೇಡಿಯಂನಲ್ಲಿ ಶುಕ್ರವಾರ ಆರಂಭಗೊಂಡ ಸಿ ಗುಂಪಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ರೈಲ್ವೇಸ್, 56 ಓವರ್ಗಳಲ್ಲಿ 155 ರನ್ಗಳಿಗೆ ಸರ್ವಪತನ ಕಂಡಿತು. ವಾಸುಕಿ ಕೌಶಿಕ್ ಮತ್ತು ಹಾರ್ದಿಕ್ ರಾಜ್ ತಲಾ 3 ವಿಕೆಟ್ ಕಬಳಿಸಿದರೆ, ವಿದ್ವತ್ ಕಾವೇರಪ್ಪ ಮತ್ತು ವೈಶಾಕ್ ವಿಜಯ್ಕುಮಾರ್ ತಲಾ 2 ವಿಕೆಟ್ ಪಡೆದರು. ಪ್ರತಿಯಾಗಿ ಕರ್ನಾಟಕ ತಂಡ ಬ್ಯಾಟಿಂಗ್ ವಿಭಾಗದ ವೈಫಲ್ಯ ಮುಂದುವರಿಸಿದ್ದು, ದಿನದಂತ್ಯಕ್ಕೆ 27.5 ಓವರ್ಗಳಲ್ಲಿ 6 ವಿಕೆಟ್ಗೆ 90 ರನ್ ಗಳಿಸಿದೆ. ರಾಜ್ಯ ತಂಡ ಇನ್ನೂ 65 ರನ್ ಹಿನ್ನಡೆಯಲ್ಲಿದೆ. ಹಾರ್ದಿಕ್ ರಾಜ್ (1) ಔಟಾದ ಬೆನ್ನಲ್ಲೇ ದಿನದಾಟ ಕೊನೆಗೊಂಡಿತು. ಇದರಿಂದ ಕಿಶನ್ ಬಿದರೆ (2*) ಏಕಾಂಗಿಯಾಗಿ ಕ್ರೀಸ್ನಲ್ಲಿದ್ದಾರೆ.
ರೈಲ್ವೇಸ್: 56 ಓವರ್ಗಳಲ್ಲಿ 155 (ಪ್ರಥಮ್ ಸಿಂಗ್ 56, ಮೊಹಮದ್ ಸೈಫ್ 45, ವಿದ್ವತ್ 25ಕ್ಕೆ 2, ಕೌಶಿಕ್ 22ಕ್ಕೆ 3, ವೈಶಾಕ್ 57ಕ್ಕೆ 2, ಹಾರ್ದಿಕ್ ರಾಜ್ 28ಕ್ಕೆ 3), ಕರ್ನಾಟಕ: 27.5 ಓವರ್ಗಳಲ್ಲಿ 6 ವಿಕೆಟ್ಗೆ 90 (ಸಮರ್ಥ್ 22, ನಿಶ್ಚಲ್ 20, ಅನೀಶ್ 27, ನಿಕಿನ್ ಜೋಸ್ 0, ಮನೀಷ್ ಪಾಂಡೆ 18, ಹಾರ್ದಿಕ್ ರಾಜ್ 1, ಕಿಶನ್ ಬಿದರೆ 2*, ಆಕಾಶ್ ಪಾಂಡೆ 21ಕ್ಕೆ 3, ಅಯನ್ 18ಕ್ಕೆ 2).
ಕುಸಿದ ಕರ್ನಾಟಕ
ಇನಿಂಗ್ಸ್ ಮುನ್ನಡೆಯ ನಿರೀಕ್ಷೆಯೊಂದಿಗೆ ಕಣಕ್ಕಿಳಿದ ಕರ್ನಾಟಕ ತಂಡ 57 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಆರಂಭಿಕರಾದ ಡಿ. ನಿಶ್ಚಲ್ (20), ಆರ್. ಸಮರ್ಥ್ (22) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಹಂಗಾಮಿ ನಾಯಕ ನಿಕಿನ್ ಜೋಸ್ ಖಾತೆಯನ್ನೇ ತೆರೆಯದೆ ಗೋಲ್ಡನ್ ಡಕ್ಗೆ ಬಲಿಯಾದರು. ದಿನದಂತ್ಯದಲ್ಲಿ ರಾಜ್ಯ ತಂಡ 7 ರನ್ ಅಂತರದಲ್ಲಿ ಮತ್ತೆ 3 ವಿಕೆಟ್ ಕಳೆದುಕೊಂಡಿತು. ಮಯಾಂಕ್ ಗೈರಿನಲ್ಲಿ ಮನೀಷ್ ಪಾಂಡೆ (18) ಅನುಭವದ ಬಲ ತುಂಬುವ ನಿರೀೆ ಹುಸಿಯಾಯಿತು.
*55: ನಿಕಿನ್ ಜೋಸ್ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡದ ನಾಯಕತ್ವ ವಹಿಸಿದ 55ನೇ ಆಟಗಾರ ಎನಿಸಿದರು.
ಮರಳಿದ ಮನೀಷ್
ವಿಮಾನದಲ್ಲಿ ದಿಢೀರ್ ಅಸ್ವಸ್ಥಗೊಂಡು ಅಲಭ್ಯರಾಗಿರುವ ನಾಯಕ ಮಯಾಂಕ್ ಅಗರ್ವಾಲ್ ಬದಲಿಗೆ ಮನೀಷ್ ಪಾಂಡೆ ರಾಜ್ಯ ತಂಡಕ್ಕೆ ಮರಳಿದರು. ಅನುಭವಿ ಬ್ಯಾಟರ್ ಮನೀಷ್ ಪಾಂಡೆ ಗಾಯದಿಂದಾಗಿ ಕಳೆದ ಪಂದ್ಯ ತಪ್ಪಿಸಿಕೊಂಡಿದ್ದರು. ಇನ್ನು ರಾಜ್ಯ ತಂಡ ತ್ರಿವಳಿ ವೇಗಿಗಳೊಂದಿಗೆ ಏಕೈಕ ಸ್ಪಿನ್ನರ್ ಆಡಿಸುವ ಕಾರ್ಯತಂತ್ರಕ್ಕೆ ಮೊರೆ ಹೋದ ಕಾರಣ ಶಶಿಕುಮಾರ್ ಬದಲಿಗೆ ಡಿ. ನಿಶ್ಚಲ್ ಆರಂಭಿಕರಾಗಿ ಮರಳಿದರು. 17 ವರ್ಷದ ಹಾರ್ದಿಕ್ ರಾಜ್ ತಂಡದ ಏಕೈಕ ಸ್ಪಿನ್ನರ್ ಆಗಿದ್ದಾರೆ.