ಏಷ್ಯಾಡ್​ನಲ್ಲಿ ಬೆಳ್ಳಿ ಪದಕ ಗೆದ್ದು ಬೀಗಿದ ಕರ್ನಾಟಕದ ಶೂಟರ್​ ದಿವ್ಯಾ

divya web
Published on

ಹಾಂಗ್​ಝೌ: ರಾಜ್ಯದ ಶೂಟರ್​ ದಿವ್ಯಾ ಟಿ.ಎಸ್​. ಏಷ್ಯಾಡ್​ನಲ್ಲಿ ಶುಕ್ರವಾರ ನಡೆದ ಶೂಟಿಂಗ್​ ಸ್ಪರ್ಧೆಯಲ್ಲಿ ಮಹಿಳೆಯರ 10 ಮೀ. ಏರ್​ ಪಿಸ್ತೂಲ್​ ತಂಡ ವಿಭಾಗದಲ್ಲಿ ಬೆಳ್ಳಿ ಗೆದ್ದು ಸಂಭ್ರಮಿಸಿದರು. ಅವರು ಏಷ್ಯಾಡ್​ನಲ್ಲಿ ಕರ್ನಾಟಕದ 2ನೇ ಪದಕ ವಿಜೇತೆ ಎನಿಸಿದರು. ಈ ಮುನ್ನ ರಾಜೇಶ್ವರಿ ಗಾಯಕ್ವಾಡ್​ ಚಿನ್ನ ಗೆದ್ದ ಮಹಿಳಾ ಕ್ರಿಕೆಟ್​ ತಂಡದ ಭಾಗವಾಗಿದ್ದರು. ಇನ್ನು ಟೆನಿಸ್​ನಲ್ಲಿ ರೋಹನ್​ ಬೋಪಣ್ಣ ಮಿಶ್ರ ಡಬಲ್ಸ್​ನಲ್ಲಿ ಫೈನಲ್​ಗೇರಿದ್ದು, ರಾಜ್ಯಕ್ಕೆ 3ನೇ ಪದಕವನ್ನೂ ಖಚಿತಪಡಿಸಿದ್ದಾರೆ.

ಮೊದಲಿಗೆ ಬಾಸ್ಕೆಟ್​ಬಾಲ್​ ಆಟಗಾರ್ತಿಯಾಗಿದ್ದ 28 ವರ್ಷದ ದಿವ್ಯಾ, ಗಾಯದಿಂದಾಗಿ ಅದರಲ್ಲಿ ಮುಂದುವರಿಯಲು ಸಾಧ್ಯವಾಗದ ಕಾರಣ ಶೂಟರ್​ ಆಗಿ ಬದಲಾಗಿದ್ದರು. ಕಳೆದ ವರ್ಷವಷ್ಟೇ ಅಂತಾರಾಷ್ಟ್ರೀಯ ಶೂಟಿಂಗ್​ಗೆ ಪದಾರ್ಪಣೆ ಮಾಡಿದ್ದ ದಿವ್ಯಾ, ಶನಿವಾರ ಮಿಶ್ರ ತಂಡ ವಿಭಾಗದಲ್ಲೂ ಕಣಕ್ಕಿಳಿಯಲಿದ್ದಾರೆ.

ಮಹಿಳೆಯರ 10 ಮೀ. ಏರ್​ ಪಿಸ್ತೂಲ್​ ವೈಯಕ್ತಿಕ ವಿಭಾಗದಲ್ಲಿ 17 ವರ್ಷದ ಪಾಲಕ್​ ಗುಲಿಯಾ ಮತ್ತು ಇಶಾ ಸಿಂಗ್​ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದು ಬೀಗಿದರು. ಪಾಕಿಸ್ತಾನದ ತಲತ್​ ಕಿಶ್ಮಲಾ ಕಂಚು ಗೆಲ್ಲುವುದರೊಂದಿಗೆ ಈ ಸ್ಪರ್ಧೆಯಲ್ಲಿ ಆತಿಥೇಯ ಚೀನಾ ಶೂಟರ್​ಗಳಿಗೆ ಪದಕ ವೇದಿಕೆ ಏರಲಾಗಲಿಲ್ಲ. ಹರಿಯಾಣದ ಪಾಲಕ್​, 242.1 ಅಂಕದೊಂದಿಗೆ ಗೇಮ್ಸ್​ ದಾಖಲೆ ನಿರ್ಮಿಸಿ ಚಿನ್ನಕ್ಕೆ ಮುತ್ತಿಟ್ಟರು. ಇಶಾ 239.7 ಅಂಕ ಗಳಿಸಿ ಬೆಳ್ಳಿ ಒಲಿಸಿಕೊಂಡರು. ಈ ಮೂಲಕ ಹಾಲಿ ಏಷ್ಯಾಡ್​ನಲ್ಲಿ ಭಾರತದ ಸ್ಪರ್ಧಿಗಳು ಮೊದಲ ಬಾರಿಗೆ ಒಂದೇ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಗೆದ್ದುಕೊಂಡರು. ಪಾಲಕ್​ (577), ಇಶಾ (579) ತಂಡ ವಿಭಾಗದಲ್ಲಿ ಕರ್ನಾಟಕದ ಶೂಟರ್​ ದಿವ್ಯಾ ಟಿಎಸ್​ (575) ಜತೆಗೂಡಿ ಒಟ್ಟು 1,731 ಅಂಕ ಕಲೆಹಾಕುವ ಮೂಲಕ ಕೂಟ ದಾಖಲೆಯೊಂದಿಗೆ ರಜತ ಪದಕ ಗೆದ್ದುಕೊಂಡರು.

ಭಾರತದ ಶೂಟರ್​ಗಳು ಶುಕ್ರವಾರ 2 ಚಿನ್ನ, 3 ಬೆಳ್ಳಿಗೆ ಗುರಿಯಿಟ್ಟರು. ಇದರೊಂದಿಗೆ ಕೂಟದ ಶೂಟಿಂಗ್​ ಸ್ಪರ್ಧೆಯಲ್ಲಿ ಭಾರತ ಇದುವರೆಗೆ ಒಟ್ಟು 18 ಪದಕ (6 ಚಿನ್ನ, 7 ಬೆಳ್ಳಿ, 5 ಕಂಚು) ಬೇಟೆಯಾಡಿದಂತಾಗಿದೆ. ಈ ಮೂಲಕ 2006ರ ದೋಹಾ ಏಷ್ಯಾಡ್​ನಲ್ಲಿ ದಿಗ್ಗಜ ಜಸ್ಪಾಲ್​ ರಾಣಾ ಸಾಧನೆಯಿಂದ ಗರಿಷ್ಠ 14 ಪದಕ ಗೆದ್ದಿದ್ದ ದಾಖಲೆಯನ್ನು ಶೂಟರ್​ಗಳು ಸುಧಾರಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net