77ನೇ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಕರ್ನಾಟಕ ಸಮಗ್ರ ಚಾಂಪಿಯನ್​; ರಾಜ್ಯದ ಅನೀಶ್​, ಹಷಿಕಾಗೆ ವೈಯಕ್ತಿಕ ಪ್ರಶಸ್ತಿ

web swimm
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ಆತಿಥೇಯ ಕರ್ನಾಟಕ ತಂಡ 77ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್​ಷಿಪ್​ನಲ್ಲಿ ಸಮಗ್ರ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಈ ಮೂಲಕ ಕಳೆದ ಆವೃತ್ತಿಯಲ್ಲಿ ಗೆದ್ದಿದ್ದ ಪ್ರಶಸ್ತಿಯನ್ನು ಉಳಿಸಿಕೊಂಡ ಕರ್ನಾಟಕ, ದೇಶೀಯ ಈಜು ಸ್ಪರ್ಧೆಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ.

ಮಂಗಳೂರಿನ ಎಮ್ಮೆಕೆರೆಯ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ಶುಕ್ರವಾರ ಮುಕ್ತಾಯಗೊಂಡ ಕೂಟದಲ್ಲಿ ಕರ್ನಾಟಕ ತಂಡ ಒಟ್ಟು 17 ಚಿನ್ನ, 12 ಬೆಳ್ಳಿ, 4 ಕಂಚಿನ ಸಹಿತ 33 ಪದಕಗಳನ್ನು ಗೆದ್ದುಕೊಂಡು, 274 ಅಂಕಗಳೊಂದಿಗೆ ಪ್ರಶಸ್ತಿ ಗೆದ್ದುಕೊಂಡರೆ, ಮಹಾರಾಷ್ಟ್ರ (167 ಅಂಕ) ರನ್ನರ್​ಅಪ್​ ಸ್ಥಾನ ಪಡೆಯಿತು. ಕರ್ನಾಟಕ ತಂಡ ಪುರುಷರ (11 ಚಿನ್ನ, 7 ಬೆಳ್ಳಿ, 1 ಕಂಚು, 156 ಅಂಕ) ಮತ್ತು ಮಹಿಳೆಯರ (6 ಚಿನ್ನ, 5 ಬೆಳ್ಳಿ, 3 ಕಂಚು, 118 ಅಂಕ) ವಿಭಾಗದಲ್ಲೂ ಟೀಮ್​ ಚಾಂಪಿಯನ್​ಷಿಪ್​ ಗೆದ್ದುಕೊಂಡಿತು. ಕೂಟದಲ್ಲಿ ಒಟ್ಟು 5 ಹೊಸ ದಾಖಲೆಗಳು ನಿರ್ಮಾಣಗೊಂಡವು.

ಕೂಟದಲ್ಲಿ 4 ಸ್ವರ್ಣ ಪದಕ ಗೆದ್ದುಕೊಂಡ ರಾಜ್ಯದ ಅನೀಶ್​ ಎಸ್​. ಗೌಡ ಪುರುಷರ ವಿಭಾಗದಲ್ಲಿ ವೈಯಕ್ತಿಕ ಪ್ರಶಸ್ತಿ ಗೆದ್ದುಕೊಂಡರೆ, ಮಹಿಳೆಯರ ವಿಭಾಗದಲ್ಲಿ ಒಂದು ಕೂಟ ದಾಖಲೆಯೊಂದಿಗೆ 3 ಚಿನ್ನ, 1 ಬೆಳ್ಳಿ ಪದಕ ಜಯಿಸಿದ ರಾಜ್ಯದ ಹಷಿಕಾ ರಾಮಚಂದ್ರ ಅತ್ಯುತ್ತಮ ಈಜುಪಟು ಪ್ರಶಸ್ತಿಗೆ ಭಾಜನರಾದರು.

ಕೊನೇ ದಿನ ರಾಜ್ಯಕ್ಕೆ 5 ಸ್ವರ್ಣ

ಕೂಟದ 4ನೇ ಹಾಗೂ ಅಂತಿಮ ದಿನ ಕರ್ನಾಟಕದ ಈಜುಪಟುಗಳು ಮತ್ತೆ 5 ಚಿನ್ನ, 1 ಬೆಳ್ಳಿ, 2 ಕಂಚಿನ ಸಹಿತ ಒಟ್ಟು 8 ಪದಕಗಳನ್ನು ಗೆದ್ದುಕೊಂಡರು. ರಾಜ್ಯದ ತಾನ್ಯಾ ಷಡಕ್ಷರಿ, ಹಷಿಕಾ ರಾಮಚಂದ್ರ, ಅನೀಶ್​ ಎಸ್​. ಗೌಡ, ವಿದಿತ್​ ಎಸ್​. ಶಂಕರ್​ ಸ್ವರ್ಣ ಗೆದ್ದರು.

ತಾನ್ಯಾ ಷಡಕ್ಷರಿ ಮಹಿಳೆಯರ 400 ಮೀ. ಮೆಡ್ಲೆ ಸ್ಪರ್ಧೆಯಲ್ಲಿ 5 ನಿಮಿಷ, 8.10 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ಚಿನ್ನಕ್ಕೆ ಮುತ್ತಿಟ್ಟರೆ, ಹಷಿಕಾ ರಾಮಚಂದ್ರ ಮಹಿಳೆಯರ 200 ಮೀ. ಫ್ರೀಸ್ಟೆ$ಲ್​ ವಿಭಾಗದಲ್ಲಿ 2 ನಿಮಿಷ, 6.49 ಸೆಕೆಂಡ್​ಗಳಲ್ಲಿ ಈಜಿ ಚಿನ್ನಕ್ಕೆ ಕೊರಳೊಡ್ಡಿದರು.

ಅನೀಶ್​ ಎಸ್​. ಗೌಡ ಪುರುಷರ 200 ಮೀ. ಫ್ರೀಸ್ಟೆ$ಲ್​ ವಿಭಾಗದಲ್ಲಿ 1 ನಿಮಿಷ, 52.09 ಸೆಕೆಂಡ್​ಗಳಲ್ಲಿ ಈಜಿ ಕೊನೇ ದಿನವೂ ಚಿನ್ನದ ಪದಕ ಒಲಿಸಿಕೊಂಡರೆ, ವಿದಿತ್​ ಎಸ್​. ಶಂಕರ್​ ಪುರುಷರ 100 ಮೀ. ಬ್ರೆಸ್ಟ್​ ಸ್ಟ್ರೊಕ್​ ವಿಭಾಗದಲ್ಲಿ 1 ನಿಮಿಷ, 2.75 ಸೆಕೆಂಡ್​ಗಳಲ್ಲಿ ಈಜಿ ಚಿನ್ನ ಗೆದ್ದುಕೊಂಡರು. ಪುರುಷರ 200 ಮೀ. ಬ್ಯಾಕ್​ಸ್ಟ್ರೊಕ್​ ವಿಭಾಗದಲ್ಲಿ ರಾಜ್ಯದ ಆಕಾಶ್​ ಮಣಿ ಮತ್ತು ಮಹಿಳೆಯರ 100 ಮೀ. ಬಟರ್​್ಲೆ$ ವಿಭಾಗದಲ್ಲಿ ಸುಹಾಸಿನಿ ಘೋಷ್​ ಕಂಚಿನ ಪದಕ ಜಯಿಸಿದರು.

ರಾಜ್ಯ ಪುರುಷರ ರಿಲೇ ತಂಡದಿಂದ ದಾಖಲೆ

ಒಲಿಂಪಿಯನ್​ ಶ್ರೀಹರಿ ನಟರಾಜ್​, ಆಕಾಶ್​ ಮಣಿ, ಪೃಥ್ವಿ ಎಂ, ಕಾರ್ತಿಕೇಯನ್​ ನಾಯರ್​ ಒಳಗೊಂಡ ರಾಜ್ಯ ತಂಡ, ಪುರುಷರ 4/100 ಮೀ. ಫ್ರೀಸ್ಟೆ$ಲ್​ ರಿಲೇ ಸ್ಪರ್ಧೆಯಲ್ಲಿ ನೂತನ ಕೂಟದಾಖಲೆಯೊಂದಿಗೆ ಸ್ವರ್ಣ ಪದಕ ಗೆದ್ದುಕೊಂಡಿತು. ರಾಜ್ಯ ತಂಡ 3 ನಿಮಿಷ, 28.09 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ 2023ರಲ್ಲಿ ತಾನೇ ನಿರ್ಮಿಸಿದ್ದ 3 ನಿಮಿಷ, 28.16 ಸೆಕೆಂಡ್​ಗಳ ದಾಖಲೆಯನ್ನು ಸುಧಾರಿಸಿಕೊಂಡಿತು. ಮಹಿಳೆಯರ 4/100 ಮೀ. ಫ್ರೀಸ್ಟೆ$ಲ್​ ರಿಲೇ ಸ್ಪರ್ಧೆಯಲ್ಲಿ ರೈಲ್ವೇಸ್​ ತಂಡ 4 ನಿಮಿಷ, 2.24 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ರಾಷ್ಟ್ರೀಯ ದಾಖಲೆ ಬರೆಯಿತು. ಕರ್ನಾಟಕದ ಹಷಿಕಾ ರಾಮಚಂದ್ರ, ವಿಹಿತಾ ನಯನಾ ಲೋಕನಾಥನ್​, ಶಾಲಿನಿ ಆರ್​. ದೀತ್​, ಶಿರಿನ್​ ಒಳಗೊಂಡ ತಂಡ ಈ ಸ್ಪರ್ಧೆಯಲ್ಲಿ (4 ನಿಮಿಷ, 2.62) ರಜತ ಪದಕ ಗೆದ್ದುಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net