

ಬೆಂಗಳೂರು: ಇತ್ತೀಚೆಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಕನ್ನಡಿಗ ಮನು ಡಿ.ಪಿ. ಸಹಿತ ಭಾರತದ ಮೂವರು ಜಾವೆಲಿನ್ ಎಸೆತಗಾರರು ಅಗ್ರ-6ರಲ್ಲಿ ಸ್ಥಾನ ಪಡೆದು ಮಿಂಚಿದ್ದರು. ಆದರೆ ಮುಂಬರುವ ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಈ ರೀತಿ ಪ್ರಾಬಲ್ಯ ಸಾಧಿಸಲು ಅವಕಾಶ ಇಲ್ಲದಂತಾಗಿದೆ. ಏಷ್ಯಾಡ್ ನಿಯಮದ ಪ್ರಕಾರ, ಅಥ್ಲೆಟಿಕ್ಸ್ನ ಒಂದು ಸ್ಪರ್ಧೆಯಲ್ಲಿ ಒಂದು ದೇಶದಿಂದ ಗರಿಷ್ಠ ಇಬ್ಬರಷ್ಟೇ ಸ್ಪರ್ಧಿಸಲು ಅವಕಾಶ ಇರುವುದರಿಂದ ಮನು ಅವಕಾಶ ವಂಚಿತರಾಗಿದ್ದಾರೆ.
ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಸಹಜವಾಗಿಯೇ ಭಾರತದ ಮೊದಲ ಆಯ್ಕೆಯ ಸ್ಪರ್ಧಿಯಾಗಿದ್ದರೆ, ಮನುಗಿಂತ (84.35 ಮೀ) ಹೆಚ್ಚಿನ ವೈಯಕ್ತಿಕ ಶ್ರೇಷ್ಠ ನಿರ್ವಹಣೆಯ ದಾಖಲೆ ಹೊಂದಿರುವುದರಿಂದ ಒಡಿಶಾದ ಕಿಶೋರ್ ಜೆನಾ (84.77 ಮೀ) ಭಾರತದ 2ನೇ ಆಯ್ಕೆಯ ಜಾವೆಲಿನ್ ಎಸೆತಗಾರರಾಗಿದ್ದಾರೆ. ಹೀಗಾಗಿ ಇನ್ನು ನೀರಜ್ ಅಥವಾ ಕಿಶೋರ್ ಏಷ್ಯಾಡ್ನಿಂದ ಹೊರಗುಳಿದರಷ್ಟೇ ಮನುಗೆ ಅವಕಾಶ ಲಭಿಸಲಿದೆ ಎಂದು ಮನು ಅವರ ಕೋಚ್ ಆಗಿರುವ ಕನ್ನಡಿಗ ಕಾಶಿನಾಥ್ ನಾಯ್ಕ್ "ವಿಜಯವಾಣಿ'ಗೆ ತಿಳಿಸಿದ್ದಾರೆ.
ಏಷ್ಯಾಡ್ಗೆ ಜಾವೆಲಿನ್ ಎಸೆತದಲ್ಲಿ ಅರ್ಹತಾ ಮಾನದಂಡ 78.23 ಮೀ. ಆಗಿದ್ದು, ಮನು ಮಾತ್ರವಲ್ಲದೆ ಭಾರತದ ಇನ್ನಿಬ್ಬರು ಜಾವೆಲಿನ್ ಎಸೆತಗಾರರಾದ ರೋಹಿತ್ ಯಾದವ್ (83.28 ಮೀ) ಮತ್ತು ಶಿವಪಾಲ್ ಸಿಂಗ್ (81.96 ಮೀ) ಕೂಡ ಅದಕ್ಕಿಂತ ಉತ್ತಮ ದಾಖಲೆ ಹೊಂದಿದ್ದರೂ, ಏಷ್ಯಾಡ್ ನಿಯಮದಿಂದಾಗಿ ಪದಕ ಸ್ಪರ್ಧೆ ತಪ್ಪಿಸಿಕೊಂಡಿದ್ದಾರೆ. ಒಟ್ಟಾರೆ ಈ ಬೆಳವಣಿಗೆ, ಜಾವೆಲಿನ್ ಎಸೆತದಲ್ಲಿ ಭಾರತ ಶಕ್ತಿಕೇಂದ್ರವಾಗಿ ರೂಪುಗೊಳ್ಳುತ್ತಿರುವ ಸ್ಪಷ್ಟ ಸಂದೇಶವನ್ನು ರವಾನಿಸಿದೆ.
ಒಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್ಷಿಪ್ಗಳಲ್ಲಿ ಒಂದು ಸ್ಪರ್ಧೆಯಲ್ಲಿ ಒಂದು ದೇಶದಿಂದ ಗರಿಷ್ಠ ಮೂವರು ಸ್ಪರ್ಧಿಗಳು ಭಾಗವಹಿಸಲು ಅವಕಾಶವಿದ್ದರೂ, ಏಷ್ಯಾಡ್ನಲ್ಲಿ ಮಾತ್ರ ಇದು ಇಬ್ಬರಿಗೆ ಸೀಮಿತಗೊಂಡಿದೆ.