

ಬೆಂಗಳೂರು: ಯಾವುದೇ ನಿರೀೆಗಳಿಲ್ಲದೆ ಇಂಗ್ಲೆಂಡ್ಗೆ ಪ್ರಯಾಣಿಸಿದ್ದ ಭಾರತದ ಯುವ ತಂಡ ಎರಡು ಬಾರಿಯ ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಮೊದಲ ಪಂದ್ಯದಲ್ಲೇ ಸೋಲಿಸಿತ್ತು. ಇದೊಂದು ಆಕಸ್ಮಿಕ ಎಂದುಕೊಳ್ಳುತ್ತಿರುವಷ್ಟರಲ್ಲೇ ಭಾರತ ತಂಡ ಒಂದೊಂದು ಅಚ್ಚರಿಯ ಫಲಿತಾಂಶದೊಂದಿಗೆ ಮುನ್ನಡೆದು ಫೈನಲ್ಗೂ ದಾಪುಗಾಲಿಟ್ಟಿತ್ತು. ಲಾರ್ಡ್ಸ್ ಮೈದಾನದಲ್ಲಿ ನಡೆದ ಪ್ರಶಸ್ತಿ ಹೋರಾಟದಲ್ಲಿ ಮತ್ತೊಮ್ಮೆ ಅದೇ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಎದುರಾಗಿತ್ತು. ಈ ಬಾರಿ ಭಾರತ ತಂಡದ ಕಥೆ ಮುಗಿಯಿತು ಎಂದೇ ಎಲ್ಲರೂ ಅಂದುಕೊಂಡಿದ್ದರು. ಸ್ಫೋಟಕ ಬ್ಯಾಟ್ಸ್ಮನ್ ವಿವ್ ರಿಚರ್ಡ್ಸ್, ಪ್ರಚಂಡ ವೇಗಿಗಳಾದ ಜೋಯೆಲ್ ಗಾರ್ನರ್, ಮಾಲ್ಕಂ ಮಾರ್ಷಲ್, ಮೈಕೆಲ್ ಹೋಲ್ಡಿಂಗ್ ಮತ್ತು ಆಂಡಿ ರಾಬರ್ಟ್ಸ್ ಒಳಗೊಂಡ ವಿಂಡೀಸ್ ತಂಡದೆದುರು ನಿರ್ಣಾಯಕ ಪಂದ್ಯದಲ್ಲಿ ಭಾರತ ಗೆಲ್ಲುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಆದರೆ ಅಸಾಧ್ಯವನ್ನು ಸಾಧ್ಯವಾಗಿಸುವ ಸಾಮರ್ಥ್ಯ ಕಪಿಲ್ ದೇವ್ ಸಾರಥ್ಯದ ತಂಡಕ್ಕಿತ್ತು.
1983ರ ಜೂನ್ 25ರಂದು ಲಾರ್ಡ್ಸ್ ಮೈದಾನದಲ್ಲಿ ನಡೆದ ಫೈನಲ್ನಲ್ಲಿ ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿಸಿದ್ದ ಕಪಿಲ್ ದೇವ್ ಬಳಗ, ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಪ್ರುಡೆನ್ಶಿಯಲ್ ವಿಶ್ವಕಪ್ ಟ್ರೋಫಿ ಎತ್ತಿಹಿಡಿದಿತ್ತು. ಭಾರತೀಯ ಕ್ರಿಕೆಟ್ನ ಚಿತ್ರಣವನ್ನೇ ಬದಲಾಯಿಸಿದ ಆ ಗೆಲುವಿಗೆ ಭಾನುವಾರ 40 ವರ್ಷ ಪೂರ್ಣಗೊಂಡಿದೆ.
ಎಂಎಸ್ ಧೋನಿ ಸಾರಥ್ಯದಲ್ಲಿ ಭಾರತ ತಂಡ 2011ರಲ್ಲಿ 2ನೇ ಬಾರಿ ಏಕದಿನ ವಿಶ್ವಕಪ್ ಗೆಲುವು ದಾಖಲಿಸಿದಾಗ ತವರು ಮೈದಾನದಲ್ಲೇ ಕನಸು ನನಸಾದ ಸಾರ್ಥಕ ಕ್ಷಣ ಅದಾಗಿತ್ತು. ಆದರೆ ಅದಕ್ಕೆ 28 ವರ್ಷ ಮುನ್ನ ಭಾರತ ಚೊಚ್ಚಲ ವಿಶ್ವಕಪ್ ಟ್ರೋಫಿ ಜಯಿಸಿದಾಗ ಅದು ಬರೀ ಗೆಲುವಾಗಿರಲಿಲ್ಲ. ಲಾರ್ಡ್ಸ್ ಬಾಲ್ಕನಿಯಲ್ಲಿ ವಿಶ್ವಕಪ್ ಟ್ರೋಫಿ ಸ್ವೀಕರಿಸುತ್ತ ನಾಯಕ ಕಪಿಲ್ ದೇವ್ ಬೀರಿದ್ದ ನಗು ಹೊಸ ಸಂಚಲನವನ್ನೇ ಮೂಡಿಸಿತ್ತು. ಯುವಕರೆಲ್ಲ ಕ್ರಿಕೆಟ್ನತ್ತ ಆಕರ್ಷಿತರಾಗುವಂತೆ ಮಾಡಿ ಭಾರತದಲ್ಲಿ ಕ್ರಿಕೆಟ್ ಹೊಸ ಧರ್ಮವಾಗಿ ಬೆಳಯುವಂತೆ ಮಾಡಿದ್ದು ಮಾತ್ರವಲ್ಲ, ಕ್ರಿಕೆಟ್ಗೆ ಹಣದ ಪ್ರವಾಹ ಹರಿದು ಬರುವಂತೆ ಮತ್ತು ಕ್ರಿಕೆಟ್ ಶ್ರೀಮಂತ ಆಟವಾಗಿ ಬೆಳೆದುನಿಲ್ಲುವ ವಿಶ್ವಾಸ ತುಂಬಿದ ಗೆಲುವು ಅದಾಗಿತ್ತು.
ಫೈನಲ್ ಪಂದ್ಯ ಹೀಗಿತ್ತು: 1983ರ ಜೂನ್ 25ರಂದು ಲಾರ್ಡ್ಸ್ ಮೈದಾನದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದಿದ್ದ ಭಾರತ ತಂಡ 54.5 ಓವರ್ಗಳಲ್ಲಿ 183 ರನ್ಗಳಿಗೆ ಕುಸಿದಿತ್ತು. ಕೆ. ಶ್ರೀಕಾಂತ್ (38) ಮತ್ತು ಮೊಹಿಂದರ್ ಅಮರ್ನಾಥ್ (26) ಅಗ್ರ ಸರದಿಯಲ್ಲಿ ತಂಡಕ್ಕೆ ಆಸರೆಯಾಗಿದ್ದರೆ, ಮಧ್ಯಮ ಸರದಿಯಲ್ಲಿ ಸಂದೀಪ್ ಪಾಟೀಲ್ (27) ಮತ್ತು ಕಪಿಲ್ ದೇವ್ (15) ಮೊತ್ತ ಏರಿಸಿದ್ದರು. ಬಾಲಂಗೋಚಿಗಳಾದ ಕೊನೇ ಮೂವರು ಆಟಗಾರರು (ಮದನ್ ಲಾಲ್ 17, ಕಿರ್ಮಾನಿ 14, ಸಂಧು 11) ಒಟ್ಟು 42 ರನ್ ಕೊಡುಗೆ ನೀಡಿದ್ದರು.
ತಲಾ 60 ಓವರ್ಗಳ ಪಂದ್ಯದಲ್ಲಿ ವಿಂಡೀಸ್ಗೆ ಇದು ಸುಲಭ ಸವಾಲಾಗಿತ್ತು. ಆದರೆ ನಾಯಕ ಕಪಿಲ್ ದೇವ್ ರೂಪಿಸಿದ್ದ ಕಾರ್ಯತಂತ್ರಗಳ ಎದುರು ವಿಂಡೀಸ್ ಮುಗ್ಗರಿಸಿತ್ತು. ಅಪಾಯಕಾರಿ ಆರಂಭಿಕ ಗಾರ್ಡನ್ ಗ್ರೀನಿಜ್ರನ್ನು (1) ಬಲ್ವಿಂದರ್ ಸಿಂಗ್ ಸಂಧು ಬೌಲ್ಡ್ ಮಾಡಿ ಪೆವಿಲಿಯನ್ಗೆ ಅಟ್ಟಿದ್ದರೂ, ವಿವ್ ರಿಚರ್ಡ್ಸ್ ಆಕ್ರಮಣಕಾರಿ ಆಟದ ಮೂಲಕ ಪಂದ್ಯವನ್ನು ಬೇಗನೆ ಮುಗಿಸುವ ದಾವಂತದಲ್ಲಿದ್ದರು. ಇದರಿಂದ ವಿಂಡೀಸ್ ತಂಡ 1 ವಿಕೆಟ್ಗೆ 50 ರನ್ ಗಳಿಸಿ ಬಲಿಷ್ಠ ಸ್ಥಿತಿಯಲ್ಲಿತ್ತು. ಕ್ಯಾಚ್ ಪಂದ್ಯ ಗೆಲ್ಲಿಸುತ್ತದೆ ಎಂಬ ಮಾತು ಆ ಕ್ಷಣ ನಿಜವಾಗಿತ್ತು. ಮದನ್ ಲಾಲ್ ಎಸೆತದಲ್ಲಿ ವಿವ್ ರಿಚರ್ಡ್ಸ್ ಗಾಳಿಯಲ್ಲಿ ಬಾರಿಸಿದ ಚೆಂಡನ್ನು ಕಪಿಲ್ ದೇವ್ ಹಿಮ್ಮುಖವಾಗಿ ಓಡಿ ಅದ್ಭುತವಾಗಿ ಕ್ಯಾಚ್ ಹಿಡಿದಿದ್ದರು. ಅಲ್ಲಿಂದ ಮುಂದೆ ವಿಂಡೀಸ್ ಅಧ@ಪತನ ಆರಂಭಗೊಂಡಿತ್ತು. 76 ರನ್ಗೆ 6 ವಿಕೆಟ್ ಕಳೆದುಕೊಂಡ ವಿಂಡೀಸ್ ನಂತರ ಚೇತರಿಕೆ ಕಾಣಲಿಲ್ಲ. ಆಲ್ರೌಂಡ್ ನಿರ್ವಹಣೆಯ ಮೂಲಕ ಗೆಲುವಿನ ರೂವಾರಿಯಾಗಿ ಮೂಡಿಬಂದ ಮೊಹಿಂದರ್ ಅಮರ್ನಾಥ್ ಕೊನೇ ಆಟಗಾರ ಮೈಕೆಲ್ ಹೋಲ್ಡಿಂಗ್ರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸುವುದರೊಂದಿಗೆ ವಿಂಡೀಸ್ ತಂಡವನ್ನು 52 ಓವರ್ಗಳಲ್ಲಿ 140 ರನ್ಗೆ ಕಟ್ಟಿಹಾಕಿದ ಭಾರತ, 43 ರನ್ಗಳಿಂದ ಗೆದ್ದು ವಿಶ್ವದ ಗಮನ ಸೆಳೆದಿತ್ತು.
ಭಾರತ: 54.4 ಓವರ್ಗಳಲ್ಲಿ 183 (ಗಾವಸ್ಕರ್ 2, ಶ್ರೀಕಾಂತ್ 38, ಅಮರ್ನಾಥ್ 26, ಯಶ್ಪಾಲ್ 11, ಸಂದೀಪ್ ಪಾಟೀಲ್ 27, ಕಪಿಲ್ 15, ಮದನ್ ಲಾಲ್ 17, ಕಿರ್ಮಾನಿ 14, ರಾಬರ್ಟ್ಸ್ 32ಕ್ಕೆ 3, ಮಾರ್ಷಲ್ 24ಕ್ಕೆ 2, ಹೋಲ್ಡಿಂಗ್ 26ಕ್ಕೆ 2, ಗೋಮ್ಸ್ 49ಕ್ಕೆ 2), ವೆಸ್ಟ್ ಇಂಡೀಸ್: 52 ಓವರ್ಗಳಲ್ಲಿ 140 (ಗ್ರೀನಿಜ್ 1, ಹೇಯ್ನ್$್ಸ 13, ರಿಚರ್ಡ್ಸ್ 33, ಲಾಯ್ಡ್ 8, ಮಾರ್ಷಲ್ 18, ಕಪಿಲ್ 21ಕ್ಕೆ 1, ಸಂಧು 32ಕ್ಕೆ 2, ಮದನ್ 31ಕ್ಕೆ 3, ರೋಜರ್ 23ಕ್ಕೆ 1, ಅಮರ್ನಾಥ್ 12ಕ್ಕೆ 3). ಭಾರತಕ್ಕೆ 43 ರನ್ ಜಯ. ಪಂದ್ಯಶ್ರೇಷ್ಠ: ಮೊಹಿಂದರ್ ಅಮರ್ನಾಥ್.
ಭಾರತದ ವಿಶ್ವಕಪ್ ಗೆಲುವಿನ ಹಾದಿ...
ಗುಂಪು ಹಂತ: ವಿಂಡೀಸ್ ವಿರುದ್ಧ 34 ರನ್ ಜಯ.
ಗುಂಪು ಹಂತ: ಜಿಂಬಾಬ್ವೆ ವಿರುದ್ಧ 5 ವಿಕೆಟ್ ಜಯ.
ಗುಂಪು ಹಂತ: ಆಸೀಸ್ ವಿರುದ್ಧ 162 ರನ್ ಸೋಲು.
ಗುಂಪು ಹಂತ: ವಿಂಡೀಸ್ ವಿರುದ್ಧ 66 ರನ್ ಸೋಲು.
ಗುಂಪು ಹಂತ: ಜಿಂಬಾಬ್ವೆ ವಿರುದ್ಧ 31 ರನ್ ಜಯ.
ಗುಂಪು ಹಂತ: ಆಸೀಸ್ ವಿರುದ್ಧ 118 ರನ್ ಜಯ.
ಸೆಮಿಫೈನಲ್: ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಜಯ.
ಫೈನಲ್: ವೆಸ್ಟ್ ಇಂಡೀಸ್ ವಿರುದ್ಧ 43 ರನ್ ಗೆಲುವು.
ಇಬ್ಬರು ಕನ್ನಡಿಗರ ಕೊಡುಗೆ
83ರ ವಿಶ್ವಕಪ್ ವಿಜೇತ ತಂಡದಲ್ಲಿ ಇಬ್ಬರು ಕನ್ನಡಿಗರೂ ಪ್ರಮುಖ ಕೊಡುಗೆ ನೀಡಿದ್ದರು. ವೇಗಿ ರೋಜರ್ ಬಿನ್ನಿ ಟೂರ್ನಿಯಲ್ಲಿ ಗರಿಷ್ಠ 18 ವಿಕೆಟ್ ಕಬಳಿಸಿದ್ದರು. ಸಯ್ಯದ್ ಕಿರ್ಮಾನಿ ವಿಕೆಟ್ ಕೀಪಿಂಗ್ನಲ್ಲಿ ಕೆಲವು ಪ್ರಮುಖ ಕ್ಯಾಚ್ ಹಿಡಿಯುವ ಜತೆಗೆ ಬ್ಯಾಟಿಂಗ್ನಲ್ಲೂ ಉಪಯುಕ್ತ ಕೊಡುಗೆಗಳನ್ನು ನೀಡಿದ್ದರು.
ಅಲ್ಪ ಬಹುಮಾನ ಮೊತ್ತ
ಭಾರತ ಕ್ರಿಕೆಟ್ ತಂಡದ ಆಟಗಾರರು ಈಗ ಕೋಟಿ ಲೆಕ್ಕಾಚಾರದಲ್ಲಿ ಸಂಭಾವನೆ ಗಳಿಸುತ್ತಿದ್ದಾರೆ. ಇದಕ್ಕೆಲ್ಲ ಕಾರಣ 1983ರ ವಿಶ್ವಕಪ್ ಗೆಲುವಿನ ನಂತರ ಆದ ಬದಲಾವಣೆ. ಆದರೆ 83ರ ವಿಶ್ವಕಪ್ ವಿಜೇತ ತಂಡದ ಆಟಗಾರರ ಸಂಭಾವನೆ ಸಾವಿರದ ಲೆಕ್ಕಾಚಾರದಲ್ಲೇ ಇತ್ತು. ಕಪಿಲ್ ದೇವ್ ಬಳಗದ ಆಟಗಾರರಿಗೆ ಪ್ರತಿ ಪಂದ್ಯದ ಸಂಭಾವನೆ 1,500 ರೂ. ಆಗಿತ್ತು. ಜತೆಗೆ 200 ರೂ. ದಿನಭತ್ಯೆ. ವಿಶ್ವಕಪ್ ಪ್ರಾಯೋಜಕ ಪ್ರುಡೆನ್ಶಿಯಲ್ ಕಂಪನಿಯಿಂದ ಆಗ 20 ಸಾವಿರ ಪೌಂಡ್ಸ್ ಬಹುಮಾನ ಲಭಿಸಿತ್ತು. ಲತಾ ಮಂಗೇಶ್ಕರ್ ಸಾರಥ್ಯದಲ್ಲಿ ಆಗ ಸಂಗೀತಗೋಷ್ಠಿಯೊಂದನ್ನು ನಡೆಸುವ ಮೂಲಕ ಹಣ ಸಂಗ್ರಹ ಮಾಡಿದ್ದ ಬಿಸಿಸಿಐ, ಎಲ್ಲ ಆಟಗಾರರಿಗೆ ತಲಾ 1 ಲಕ್ಷ ರೂ. ಬಹುಮಾನ ವಿತರಿಸಿತ್ತು. ಕಪಿಲ್ ದೇವ್ ಸಹಿತ ಕೆಲ ಆಟಗಾರರಿಗೆ ಆಗ ವಿವಿಧ ಜಾಹೀರಾತು ಆಫರ್ಗಳಿಂದ 30ರಿಂದ 50 ಸಾವಿರ ರೂ. ಮೊತ್ತದ ಒಪ್ಪಂದಗಳು ಲಭಿಸಿದ್ದವು.
ಬಾಲಿವುಡ್ ಸಿನಿಮಾವೂ ಬಂದಿದೆ
ಕಪಿಲ್ ದೇವ್ ಬಳಗದ 1983ರ ವಿಶ್ವಕಪ್ ಯಶೋಗಾಥೆ ಈಗಾಗಲೆ ಬೆಳ್ಳಿತೆರೆಗೂ ಬಂದಿದೆ. "83' ಹೆಸರಿನ ಬಾಲಿವುಡ್ ಸಿನಿಮಾ 2021ರ ಡಿಸೆಂಬರ್ 24ರಂದು ತೆರೆ ಕಂಡು ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾದರೂ ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಯಶ ಕಂಡಿತ್ತು. ಕಬೀರ್ ಖಾನ್ ನಿರ್ದೇಶನದ ಸಿನಿಮಾದಲ್ಲಿ ರಣವೀರ್ ಸಿಂಗ್ ನಾಯಕ ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಪಿಲ್ ಪತ್ನಿ ರೋಮಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದರು.