ಟೆಸ್ಟ್​ ವಿಶ್ವಕಪ್ ಫೈನಲ್​ ಈ ರೀತಿ ಇದ್ದರೆ ಚೆನ್ನಾಗಿತ್ತು ಎಂದ ಕಪಿಲ್​ ದೇವ್​!

kapil web
Published on

ನವದೆಹಲಿ: ಭಾರತಕ್ಕೆ 1983ರಲ್ಲಿ ಚೊಚ್ಚಲ ವಿಶ್ವಕಪ್​ ಗೆದ್ದುಕೊಟ್ಟ ನಾಯಕ ಕಪಿಲ್​ ದೇವ್​ ಇದೀಗ ಭಾರತ ತಂಡ ಚೊಚ್ಚಲ ಟೆಸ್ಟ್​ ವಿಶ್ವಕಪ್​ನಲ್ಲಿ (ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​) ಪ್ರಶಸ್ತಿ ಸುತ್ತಿನ ಹೋರಾಟ ನಡೆಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಟೆಸ್ಟ್​ ವಿಶ್ವಕಪ್​ನ ಫೈನಲ್​ ಪಂದ್ಯ ಈಗ ನಿಗದಿಯಾಗಿರುವ ಮಾದರಿಗಿಂತ ಭಿನ್ನವಾಗಿರುತ್ತದೆ ಚೆನ್ನಾಗಿತ್ತು ಎಂದು ಹೇಳಿದ್ದಾರೆ. ಹಾಗಾದರೆ ಕಪಿಲ್​ ದೇವ್​ ಪ್ರಕಾರ ಟೆಸ್ಟ್​ ವಿಶ್ವಕಪ್ ಫೈನಲ್​ ಸ್ವರೂಪ ಹೇಗಿರಬೇಕಾಗಿತ್ತು ಗೊತ್ತೇ?

ಟೆಸ್ಟ್​ ವಿಶ್ವಕಪ್​ನ ಪ್ರಶಸ್ತಿ ಸುತ್ತಿನ ಹೋರಾಟ ಬೆಸ್ಟ್​ ಆಫ್​ ತ್ರಿ ಮಾದರಿಯಲ್ಲಿ ನಡೆಯಬೇಕಾಗಿತ್ತು ಎಂದು ಕಪಿಲ್​ ದೇವ್​ ಅಭಿಪ್ರಾಯಪಟ್ಟಿದ್ದಾರೆ. ಟೆಸ್ಟ್​ ವಿಶ್ವಕಪ್​ ಫೈನಲ್​ನಲ್ಲಿ ಒಂದಕ್ಕಿಂತ ಹೆಚ್ಚು ಪಂದ್ಯಗಳಿದ್ದರೆ ಚೆನ್ನಾಗಿತ್ತು. ಯಾಕೆಂದರೆ ಇದು ಅಷ್ಟು ಮಹತ್ವದ ಪಟ್ಟವಾಗಿದೆ. ಟೆಸ್ಟ್​ ಕ್ರಿಕೆಟ್​ ಆಟವನ್ನು ಜನಪ್ರಿಯಗೊಳಿಸಲು ಐಸಿಸಿ ಇದನ್ನು ನಡೆಸುತ್ತಿದೆ. ಹೀಗಾಗಿ ಬೆಸ್ಟ್​ ಆಫ್​ ತ್ರಿ ಫೈನಲ್​ ಪಂದ್ಯವಿದ್ದರೆ ಜನರಿಗೆ ಇನ್ನೂ ಹೆಚ್ಚಿನ ಮನರಂಜನೆ ಲಭಿಸುತ್ತಿತ್ತು ಎಂದು ಕಪಿಲ್​ ದೇವ್​ ಹೇಳಿದ್ದಾರೆ. ಅಂದರೆ ಟೆಸ್ಟ್​ ವಿಶ್ವಕಪ್​ನಲ್ಲಿ 3 ಪಂದ್ಯಗಳನ್ನು ಆಡಿಸಿ 2ರಲ್ಲಿ ಗೆದ್ದ ತಂಡಕ್ಕೆ ಟ್ರೋಫಿ ನೀಡಬೇಕಾಗಿತ್ತು ಎಂಬುದು ಕಪಿಲ್​ ದೇವ್​ ವಾದವಾಗಿದೆ.

ಭಾರತ ಮತ್ತು ನ್ಯೂಜಿಲೆಂಡ್​ ನಡುವೆ ಜೂನ್​ 18ರಿಂದ ಸೌಥಾಂಪ್ಟನ್​ನಲ್ಲಿ ಟೆಸ್ಟ್​ ವಿಶ್ವಕಪ್ ಫೈನಲ್​ ಪಂದ್ಯ ನಡೆಯಲಿದ್ದು, 5 ದಿನಗಳ ಪಂದ್ಯ ಡ್ರಾಗೊಂಡರೆ ಉಭಯ ತಂಡಗಳಿಗೂ ಟ್ರೋಫಿ ಹಂಚುವ ಯೋಜನೆಯನ್ನೂ ಐಸಿಸಿ ಹೊಂದಿದೆ. ಫೈನಲ್​ ಪಂದ್ಯ ಐತಿಹಾಸಿಕ ಲಾರ್ಡ್ಸ್​ ಮೈದಾನದಲ್ಲೇ ನಡೆಯುತ್ತಿದ್ದರೆ ಚೆನ್ನಾಗಿತ್ತು ಎಂದೂ ಕಪಿಲ್​ ದೇವ್​ ಹೇಳಿದ್ದಾರೆ.

ಫೈನಲ್​ ಪಂದ್ಯದಲ್ಲಿ ಭಾರತ ತಂಡವೇ ಬಲಿಷ್ಠ ಬ್ಯಾಟಿಂಗ್​ ಕ್ರಮಾಂಕವನ್ನು ಹೊಂದಿದೆ. ಆದರೆ ಇಂಗ್ಲೆಂಡ್​ನ ವೇಗದ ಬೌಲಿಂಗ್​ ಸ್ನೇಹಿ ಪಿಚ್​ನಲ್ಲಿ ನ್ಯೂಜಿಲೆಂಡ್​ ತಂಡದ ಬೌಲಿಂಗ್​ ದಾಳಿಯನ್ನು ಭಾರತ ಹೇಗೆ ಎದುರಿಸಿ ನಿಲ್ಲಲಿದೆ ಎಂಬುದು ನಿರ್ಣಾಯಕವೆನಿಸಲಿದೆ ಎಂದಿದ್ದಾರೆ ಕಪಿಲ್​ ದೇವ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net