

ಕಾನ್ಪುರ: ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ನಾಲ್ಕು ದಿನದೊಳಗಾಗಿ ಸೋಲಿಸಿರುವ ಭಾರತ ತಂಡ 2ನೇ ಹಾಗೂ ಅಂತಿಮ ಟೆಸ್ಟ್ನಲ್ಲೂ ತನ್ನ ಗೆಲುವಿನ ಓಟ ಮುಂದುವರಿಸುವ ಹಂಬಲದಲ್ಲಿದೆ. ಆದರೆ ಶುಕ್ರವಾರದಿಂದ ಕಾನ್ಪುರದ ಗ್ರೀನ್ಪಾರ್ಕ್ ಮೈದಾನದಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ಗೆ ಮಳೆ ಅಡಚಣೆಯ ಭೀತಿ ಎದುರಾಗಿದೆ.
ಪಂದ್ಯ ಒಟ್ಟು 5 ದಿನಗಳ ಪೈಕಿ ಮೊದಲ 4 ದಿನಗಳಲ್ಲಿ ಮಳೆ ಅಡಚಣೆ ತರುವ ಸಾಧ್ಯತೆ ಹೆಚ್ಚಿದೆ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಇತ್ತೀಚೆಗೆ ಅಫ್ಘಾನಿಸ್ತಾನ-ನ್ಯೂಜಿಲೆಂಡ್ ನಡುವೆ ನಿಗದಿಯಾಗಿದ್ದ ಏಕೈಕ ಟೆಸ್ಟ್ ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. ಅಲ್ಲಿಂದ 477 ಕಿಲೋಮೀಟರ್ ದೂರದಲ್ಲಿರುವ ಕಾನ್ಪುರದಲ್ಲಿ ಈಗ ಭಾರತ&ಬಾಂಗ್ಲಾ ಟೆಸ್ಟ್ ನಿಗದಿಯಾಗಿದೆ. ಈ ಪಂದ್ಯದಲ್ಲಿ ಮಳೆಯಿಂದಾಗಿ ಸ್ಪಷ್ಟ ಲಿತಾಂಶ ಬಾರದಿದ್ದರೂ ಸರಣಿಯಂತೂ ಭಾರತಕ್ಕೆ ಒಲಿಯಲಿದೆ. ಆದರೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಸತತ 3ನೇ ಬಾರಿ ಫೈನಲ್ಗೇರುವ ಭಾರತದ ಆಸೆಗೆ ಸ್ವಲ್ಪ ಹಿನ್ನಡೆಯೂ ಎದುರಾಗಲಿದೆ.
ಹವಾಮಾನ ವರದಿಯ ಪ್ರಕಾರ, ಕಾನ್ಪುರ ಟೆಸ್ಟ್ ಪಂದ್ಯದ ಮೊದಲ ದಿನದಾಟಕ್ಕೆ ಮಳೆ ಅಡಚಣೆ ತರುವ ಸಾಧ್ಯತೆ ಶೇ.92ರಷ್ಟಿದೆ. ಅದರಲ್ಲೂ ಮೊದಲ ದಿನದ ಮೊದಲ 2 ಅವಧಿಗಳಲ್ಲಿ ಮಳೆ ಅಡಚಣೆಯ ಸಾಧ್ಯತೆ ಅಧಿಕವಾಗಿದೆ. 2, 3 ಮತ್ತು 4ನೇ ದಿನ ಮಳೆ ಕಾಡುವ ಸಾಧ್ಯತೆ ಶೇ. 49, 65, 56ರಷ್ಟಿದೆ. ಪಂದ್ಯದ ಕೊನೇ ದಿನದಾಟದಲ್ಲಿ ಮಾತ್ರ ಮಳೆ ಅಡಚಣೆ ಸಾಧ್ಯತೆ ಕೇವಲ ಶೇ.3ರಷ್ಟಿದೆ.