ಐಪಿಎಲ್​ನಲ್ಲಿ ಕನ್ನಡಿಗರ ಕಲರವ! ಯಾವ್ಯಾವ ತಂಡದಲ್ಲಿದ್ದಾರೆ ಕರ್ನಾಟಕದ ಕ್ರಿಕೆಟಿಗರು?

ipl karnataka players1
Published on

ಬೆಂಗಳೂರು: ಕರ್ನಾಟಕ ಕ್ರಿಕೆಟ್​ ಇತ್ತೀಚೆಗೆ ಸಾಲು ಸಾಲು ಯಶಸ್ಸನ್ನು ಕಾಣುತ್ತಿದೆ. ದೇಶೀಯ ಮಹಿಳೆಯರ 19 ವಯೋಮಿತಿ ಟಿ20 ಟ್ರೋಫಿ, ಪುರುಷರ ವಿಭಾಗದಲ್ಲಿ 19 ವಯೋಮಿತಿಯ ಕೂಚ್​ ಬೆಹಾರ್​ ಟ್ರೋಫಿ, 23 ವಯೋಮಿತಿಯ ಸಿಕೆ ನಾಯ್ಡು ಟ್ರೋಫಿಯಲ್ಲಿ ರಾಜ್ಯ ತಂಡ ಪ್ರಶಸ್ತಿ ಗೆದ್ದು ಬೀಗಿದ್ದು, ಭವಿಷ್ಯದ ಬಗ್ಗೆ ಭವ್ಯ ಭರವಸೆ ಹರಡಿದೆ. ಇದರ ಬೆನ್ನಲ್ಲೇ ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲೂ ಆರ್​ಸಿಬಿ ಮಹಿಳೆಯರು ಪ್ರಶಸ್ತಿ ಗೆದ್ದು ಹೊಸ ಇತಿಹಾಸ ಬರೆದರು. ಇದೀಗ ಐಪಿಎಲ್​ 17ನೇ ಆವೃತ್ತಿಯಲ್ಲೂ ರಾಜ್ಯದ ಕ್ರಿಕೆಟ್​ ಪ್ರೇಮಿಗಳು ಆರ್​ಸಿಬಿ ತಂಡದ ಜತೆಗೆ ವಿವಿಧ ತಂಡಗಳಲ್ಲಿರುವ ಕನ್ನಡಿಗರ ಆಟವನ್ನೂ ಸಂಭ್ರಮಿಸಲು ಆರಂಭಿಸಿದ್ದಾರೆ. ಕರ್ನಾಟಕದ ಒಟ್ಟು 12 ಆಟಗಾರರು ಕಣದಲ್ಲಿದ್ದು, ವೇಗಿ ಪ್ರಸಿದ್ಧ ಕೃಷ್ಣ ಗಾಯಗೊಂಡಿರುವ ಕಾರಣ ರಾಜಸ್ಥಾನ ರಾಯಲ್ಸ್​ ತಂಡಕ್ಕೆ ಅಲಭ್ಯರಾಗಿದ್ದಾರೆ. ಇನ್ನು ಸಿಎಸ್​ಕೆ ತಂಡದಲ್ಲಿ ರಾಜ್ಯದ ಕ್ರಿಕೆಟಿಗರು ಇಲ್ಲದಿದ್ದರೂ, ಬೆಂಗಳೂರು ಮೂಲದ ಕಿವೀಸ್​ ಕ್ರಿಕೆಟಿಗ ರಚಿನ್​ ರವೀಂದ್ರ ಇರುವುದರಿಂದ ಈ ಬಾರಿ ಟೂರ್ನಿಯಲ್ಲಿ ಆಡುವ ಬಹುತೇಕ ಎಲ್ಲ ತಂಡಗಳಲ್ಲಿ ಕನ್ನಡಿಗರು ಇರುವಂತಾಗಿದೆ.

ಲಖನೌ ಸೂಪರ್​ಜೈಂಟ್ಸ್​

(ಕೆಎಲ್​ ರಾಹುಲ್​, ದೇವದತ್​ ಪಡಿಕ್ಕಲ್​, ಕೆ. ಗೌತಮ್​)

ಕನ್ನಡಿಗ ಕೆಎಲ್​ ರಾಹುಲ್​ ಸಾರಥ್ಯದ ಲಖನೌ ಸೂಪರ್​ಜೈಂಟ್ಸ್​ ಈ ಬಾರಿ ಕರ್ನಾಟಕದ ಗರಿಷ್ಠ 3 ಆಟಗಾರರನ್ನು ಹೊಂದಿರುವುದು ವಿಶೇಷವಾಗಿದೆ. ಫಿಟ್ನೆಸ್​ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಕೆಎಲ್​ ರಾಹುಲ್​ ಐಪಿಎಲ್​ನಲ್ಲಿ ಮಿಂಚುವ ಮೂಲಕ ಟಿ20 ವಿಶ್ವಕಪ್​ ತಂಡದಲ್ಲೂ ಸ್ಥಾನ ಸಂಪಾದಿಸಲು ಹೋರಾಡಲಿದ್ದಾರೆ. ಇತ್ತೀಚೆಗೆ ಟೆಸ್ಟ್​ ಪದಾರ್ಪಣೆ ಮಾಡಿರುವ ಎಡಗೈ ಬ್ಯಾಟರ್​ ದೇವದತ್​ ಪಡಿಕ್ಕಲ್​ ಭರ್ಜರಿ ಫಾರ್ಮ್​ನಲ್ಲಿದ್ದು, ದೇಶೀಯ ಕ್ರಿಕೆಟ್​ ರನ್​ಪ್ರವಾಹವನ್ನು ಐಪಿಎಲ್​ನಲ್ಲೂ ಮುಂದುವರಿಸುವ ನಿರೀಕ್ಷೆ ಇದೆ. ಅವರು ಈ ಬಾರಿ ರಾಜಸ್ಥಾನದಿಂದ ಲಖನೌ ತಂಡಕ್ಕೆ ವರ್ಗಾವಣೆಗೊಂಡಿದ್ದಾರೆ. ಇನ್ನು ಕಳೆದ ದೇಶೀಯ ಕ್ರಿಕೆಟ್​ ಋತುವಿನಲ್ಲಿ ಕರ್ನಾಟಕ ತಂಡದಿಂದ ಹೊರಬಿದ್ದಿದ್ದ ಆಲ್ರೌಂಡರ್​ ಕೆ. ಗೌತಮ್​ ಐಪಿಎಲ್​ನಲ್ಲಿ ತನ್ನ ಪ್ರಾಮುಖ್ಯತೆ ಸಾರುವ ಹಂಬಲದಲ್ಲಿದ್ದಾರೆ.

ಸನ್​ರೈಸರ್ಸ್​ ಹೈದರಾಬಾದ್​

(ಮಯಾಂಕ್​ ಅಗರ್ವಾಲ್​)

ಕಳೆದ ದೇಶೀಯ ಕ್ರಿಕೆಟ್​ ಋತುವಿನಲ್ಲಿ ಕರ್ನಾಟಕ ತಂಡದ ನಾಯಕರಾಗಿ ಹೆಚ್ಚಿನ ಯಶಸ್ಸು ತಂದುಕೊಡಲು ವಿಲರಾಗಿರುವ ಆರಂಭಿಕ ಮಯಾಂಕ್​ ಅಗರ್ವಾಲ್​, ಸನ್​ರೈಸರ್ಸ್​ ಪರ ಬ್ಯಾಟಿಂಗ್​ನಲ್ಲಿ ಯಶ ಕಾಣುವ ತವಕದಲ್ಲಿದ್ದಾರೆ. ರಣಜಿ ವೇಳೆ ವಿಮಾನ ಪ್ರಯಾಣದಲ್ಲಿ ಕಲುಷಿತ ನೀರು ಕುಡಿದು ಆರೋಗ್ಯ ಕೆಡಿಸಿಕೊಂಡಿದ್ದ ಮಯಾಂಕ್​, ಐಪಿಎಲ್​ನಲ್ಲಿ ತನ್ನ ಹಿಂದಿನ ಲಯಕ್ಕೆ ಮರಳಬೇಕಾಗಿದೆ.

ಕೆಕೆಆರ್​

(ಮನೀಷ್​ ಪಾಂಡೆ)

ಇತ್ತೀಚಿನ ವರ್ಷಗಳಲ್ಲಿ ಐಪಿಎಲ್​ನಲ್ಲಿ ರನ್​ಬರ ಎದುರಿಸಿದ್ದ ಅನುಭವಿ ಬ್ಯಾಟರ್​ ಮನೀಷ್​ ಪಾಂಡೆ ಖರೀದಿ ಈ ಬಾರಿ ಹರಾಜಿನಲ್ಲಿ ಯಾವುದೇ ತಂಡ ಮೊದಲ ಸುತ್ತಿನಲ್ಲಿ ಆಸಕ್ತಿ ತೋರಿರಲಿಲ್ಲ. 2ನೇ ಸುತ್ತಿನಲ್ಲಿ ಕೆಕೆಆರ್​ 50 ಲಕ್ಷ ರೂ. ಮೂಲಬೆಲೆಗೆ ಖರೀದಿಸಿ 34 ವರ್ಷದ ಮನೀಷ್​ ವೃತ್ತೀಜಿವನಕ್ಕೆ ಮರುಹುಟ್ಟು ನೀಡಿದೆ. 7 ವರ್ಷಗಳ ಬಳಿಕ ಕೆಕೆಆರ್​ ತಂಡಕ್ಕೆ ಮರಳಿರುವ ಮನೀಷ್​, ಹಿಂದೆ ಗೌತಮ್​ ಗಂಭೀರ್​ ನಾಯಕತ್ವದಡಿಯಲ್ಲಿ ತೋರಿದ್ದ ಭರ್ಜರಿ ಬ್ಯಾಟಿಂಗ್​ ನಿರ್ವಹಣೆಯನ್ನು ಈ ಬಾರಿ ಅವರ ಮಾರ್ಗದರ್ಶನದಲ್ಲೂ ಮರುಕಳಿಸಬೇಕಾಗಿದೆ.

ಗುಜರಾತ್​ ಟೈಟಾನ್ಸ್​

(ಅಭಿನವ್​ ಮನೋಹರ್​, ಬಿಆರ್​ ಶರತ್​)

ಕಳೆದ 2 ಆವೃತ್ತಿಗಳಿಂದ ಗುಜರಾತ್​ ಪರ ಮಿಂಚುತ್ತಿರುವ ಸ್ಫೋಟಕ ಬ್ಯಾಟರ್​ ಅಭಿನವ್​ ಮನೋಹರ್​ ಈ ಸಲವೂ ಅದೇ ತಂಡದಲ್ಲಿದ್ದಾರೆ. ಆದರೆ ಈ ಬಾರಿ ಅವರು ಹಾರ್ದಿಕ್​ ಪಾಂಡ್ಯ ಬದಲಿಗೆ ಶುಭಮಾನ್​ ಗಿಲ್​ ನಾಯಕತ್ವದಡಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಜತೆಗೆ ರಾಜ್ಯದ ವಿಕೆಟ್​ ಕೀಪರ್​ ಬಿಆರ್​ ಶರತ್​ ಕೊನೇಕ್ಷಣದಲ್ಲಿ ಬದಲಿ ಆಟಗಾರನಾಗಿ ಗುಜರಾತ್​ ತಂಡ ಸೇರಿದ್ದಾರೆ.

ಪಂಜಾಬ್​ ಕಿಂಗ್ಸ್​

(ವಿದ್ವತ್ಕಾವೇರಪ್ಪ)

ಕಳೆದ ಆವೃತ್ತಿಯಲ್ಲಿ 20 ಲಕ್ಷ ರೂ. ಮೂಲಬೆಲೆಗೆ ಪಂಜಾಬ್​ ತಂಡ ಸೇರಿದ್ದ ಕೊಡಗಿನ ವೇಗಿ ವಿದ್ವತ್​ ಕಾವೇರಪ್ಪ ಒಂದೂ ಪಂದ್ಯ ಆಡುವ ಅವಕಾಶ ಪಡೆದಿರಲಿಲ್ಲ. ಆದರೆ ಈ ಬಾರಿ ದೇಶೀಯ ಕ್ರಿಕೆಟ್​ನಲ್ಲಿ ಗಮನಾರ್ಹ ನಿರ್ವಹಣೆ ತೋರಿರುವ ವಿದ್ವತ್​, ರಣಜಿಯಲ್ಲಿ 5 ಪಂದ್ಯಗಳಲ್ಲಿ 25 ವಿಕೆಟ್​ ಕಬಳಿಸಿದ್ದರು. ಹೀಗಾಗಿ ಈ ಬಾರಿ ಅವರಿಗೆ ಆಡುವ 11ರ ಬಳಗದಲ್ಲೂ ಸ್ಥಾನ ಲಭಿಸುವ ನಿರೀಕ್ಷೆ ಇದೆ.

ಆರ್​ಸಿಬಿ

(ವೈಶಾಕ್​ ವಿಜಯ್​ಕುಮಾರ್​, ಮನೋಜ್​ ಭಾಂಡಗೆ)

ತವರಿನ ಆರ್​ಸಿಬಿ ತಂಡ ಈ ಬಾರಿ ಇಬ್ಬರು ಕನ್ನಡಿಗರನ್ನು ಒಳಗೊಂಡಿದೆ. ಕಳೆದ ವರ್ಷ ಟೂರ್ನಿಯ ನಡುವೆ ಬದಲಿ ಆಟಗಾರನಾಗಿ ತಂಡ ಸೇರಿದ್ದ ವೇಗಿ ವೈಶಾಕ್​ ವಿಜಯ್​ಕುಮಾರ್​ 7 ಪಂದ್ಯಗಳಲ್ಲಿ 9 ವಿಕೆಟ್​ ಕಬಳಿಸಿ ಗಮನಸೆಳೆದಿದ್ದರೆ, ಆಲ್ರೌಂಡರ್​ ಮನೋಜ್​ ಭಾಂಡಗೆ ಮೀಸಲು ಬಳಗದಲ್ಲೇ ಉಳಿದಿದ್ದರು. ಈ ಬಾರಿ ಹಲವು ವರ್ಷಗಳ ಬಳಿಕ ಆರ್​ಸಿಬಿ 11ರ ಬಳಗದಲ್ಲಿ ಇಬ್ಬರು ಕನ್ನಡಿಗರನ್ನು ನೋಡುವ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್​

(ಪ್ರವಿಣ್​ ದುಬೆ)

ಕಳೆದ 4 ಆವೃತ್ತಿಗಳಿಂದ ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿರುವ ರಾಜ್ಯದ ಸ್ಪಿನ್ನರ್​ ಪ್ರವಿಣ್​ ದುಬೆ ಹೆಚ್ಚಿನ ಪಂದ್ಯ ಆಡುವ ಅವಕಾಶ ಸಿಗದಿದ್ದರೂ, ಈ ಸಲವೂ ರಿಟೇನ್​ ಆಗಿದ್ದಾರೆ. ಡೆಲ್ಲಿ ಪರ ಇದುವರೆಗೆ ಒಟ್ಟಾರೆ 4 ಪಂದ್ಯ ಆಡಿರುವ ಪ್ರವಿಣ್​, ಈ ಬಾರಿ ಹೆಚ್ಚಿನ ಪಂದ್ಯದಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಮುಂಬೈ ಇಂಡಿಯನ್ಸ್​

(ಶ್ರೇಯಸ್​ ಗೋಪಾಲ್​)

ಕಳೆದ ದೇಶೀಯ ಕ್ರಿಕೆಟ್​ ಋತುವಿನಲ್ಲಿ ಕೇರಳಕ್ಕೆ ವಲಸೆ ಹೋಗಿರುವ ಸ್ಪಿನ್ನರ್​ ಶ್ರೇಯಸ್​ ಗೋಪಾಲ್​, ಕಳೆದ ವರ್ಷದ ಹರಾಜಿನಲ್ಲಿ ಯಾವುದೇ ತಂಡಕ್ಕೆ ಮಾರಾಟವಾಗದೆ ನಿರಾಸೆ ಅನುಭವಿಸಿದ್ದರು. ಈ ಮುನ್ನ ರಾಜಸ್ಥಾನ ಪರ ಹ್ಯಾಟ್ರಿಕ್​ ವಿಕೆಟ್​ ಪಡೆದು ಗಮನಸೆಳೆದಿದ್ದ ಶ್ರೇಯಸ್​, ಈ ಬಾರಿ ಮುಂಬೈ ಇಂಡಿಯನ್ಸ್​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮುನ್ನ 2014ರಿಂದ 17ರವರೆಗೂ ಮುಂಬೈ ತಂಡದಲ್ಲಿದ್ದರೂ, ಆಡುವ ಅವಕಾಶ ಪಡೆಯದಿದ್ದ ಶ್ರೇಯಸ್​ಗೆ ಈ ಬಾರಿ 11ರ ಬಳಗ ಸೇರುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net