

ವಡೋದರ: ಭಾರತ ತಂಡದಿಂದ ಹೊರಬಿದ್ದ ಬಳಿಕ ತೀವ್ರ ರನ್ಬರದಿಂದಾಗಿ 2022ರಲ್ಲಿ ಕರ್ನಾಟಕ ತಂಡದಿಂದಲೂ ಕೊಕ್ ಪಡೆದಿದ್ದ ಕರುಣ್ ನಾಯರ್, "ಡಿಯರ್ ಕ್ರಿಕೆಟ್, ದಯವಿಟ್ಟು ನನಗೆ ಇನ್ನೊಂದು ಅವಕಾಶ ನೀಡು' ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ನಂತರದಲ್ಲಿ ಅವರು ವಿದರ್ಭಕ್ಕೆ ವಲಸೆ ಹೋಗಿದ್ದರು. ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲಿ ರನ್ಪ್ರವಾಹ ಹರಿಸುವ ಮೂಲಕ ಅವರ ವೃತ್ತೀಜಿವನ ಮರುಹುಟ್ಟು ಪಡೆದುಕೊಂಡಿದ್ದು, ಮತ್ತೊಮ್ಮೆ ರಾಷ್ಟ್ರೀಯ ಆಯ್ಕೆಗಾರರ ಗಮನಸೆಳೆದಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ತಂಡ ಆಯ್ಕೆಗೆ ಮುನ್ನ ಮತ್ತೆ ಟೀಮ್ ಇಂಡಿಯಾದ ಕದ ತಟ್ಟಿದ್ದಾರೆ. ಮತ್ತೆ ಭಾರತ ಪರ ಆಡುವ ಕನಸು ತನಗಿದೆ ಎಂದಿರುವ 33 ವರ್ಷದ ಕರುಣ್, ಅದೇ ಕಾರಣದಿಂದ ನಾನೀಗಲು ಕ್ರಿಕೆಟ್ ಆಡುತ್ತಿರುವೆ. ಮತ್ತೆ ದೇಶದ ಪರ ಆಡುವುದೇ ನನ್ನ ಏಕಮಾತ್ರ ಗುರಿಯಾಗಿದೆ' ಎಂದಿದ್ದಾರೆ. ಭಾರತ ಪರ ಟೆಸ್ಟ್ ಕ್ರಿಕೆಟ್ನಲ್ಲಿ ತ್ರಿಶತಕ ಸಿಡಿಸಿರುವ 2ನೇ ಭಾರತೀಯರೆನಿಸಿರುವ ಕರುಣ್, "ಕ್ರಿಕೆಟ್ನಿಂದ ಹೊರಗಿದ್ದ ಕಠಿಣ ದಿನಗಳಿಂದ ಪಾಠ ಕಲಿತಿರುವೆ ಮತ್ತು ಬಲಿಷ್ಠವಾಗಿರುವೆ. ಕ್ರಿಕೆಟಿಗನಾಗಿಯೂ ಸುಧಾರಣೆ ಕಂಡಿರುವೆ' ಎಂದಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪ್ರಧಾನ ತಂಡದಲ್ಲಿ ಅಲ್ಲದಿದ್ದರೂ, ಮೀಸಲು ಬಳಗದಲ್ಲಿ ಕರುಣ್ಗೆ ಸ್ಥಾನ ನಿರೀಕ್ಷಿಸಲಾಗಿದೆ. ನಂತರ ಜೂನ್-ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಗೆ ಕರುಣ್ ನಾಯರ್ ಭಾರತ ತಂಡಕ್ಕೆ ಮರಳುವ ಸಾಧ್ಯತೆ ಇದೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಕರುಣ್ ನಾಯರ್ ಪ್ರದರ್ಶಿಸಿರುವ ಭರ್ಜರಿ ಆಟವನ್ನು ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಹೊಗಳಿದ್ದು, ಇದೊಂದು ಅಸಾಧಾರಣ ಬ್ಯಾಟಿಂಗ್. ಇಂಥ ಆಟ ಸುಮ್ಮನೆ ಬರುವುದಿಲ್ಲ. ಅಪಾರ ಏಕಾಗ್ರತೆ ಮತ್ತು ಕಠಿಣ ಪರಿಶ್ರಮ ಅಗತ್ಯವಾಗಿರುತ್ತದೆ. ಇದೇ ರೀತಿ ಆಡುತ್ತಿರುವ ಕರುಣ್, ಪ್ರತಿ ಅವಕಾಶವನ್ನೂ ಬಳಸಿಕೋ ಎಂದು ಬರೆದಿದ್ದಾರೆ.