

ಪುದುಚೇರಿ: ಕನ್ನಡಿಗ ಕಾರ್ತಿಕೇಯ ಕೆಪಿ (85*ರನ್, 99 ಎಸೆತ, 9 ಬೌಂಡರಿ, 2 ಸಿಕ್ಸರ್, 30ಕ್ಕೆ 2 ವಿಕೆಟ್) ಆಲ್ರೌಂಡ್ ನಿರ್ವಹಣೆಯ ಬಲದಿಂದ ಭಾರತ ತಂಡ 19 ವಯೋಮಿತಿಯ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೆಲಿಯಾ ತಂಡವನ್ನು 7 ವಿಕೆಟ್ಗಳಿಂದ ಮಣಿಸಿದೆ. ಈ ಮೂಲಕ ಭಾರತ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆಸೀಸ್, ಮೊಹಮದ್ ಇನಾನ್ (32ಕ್ಕೆ 4) ದಾಳಿಗೆ ಕುಸಿದು 49.4 ಓವರ್ಗಳಲ್ಲಿ 184 ರನ್ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಭಾರತ 32 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿದಾಗ ಕಾರ್ತಿಕೇಯ, ನಾಯಕ ಮೊಹಮದ್ ಅಮಾನ್ (58*) ಜತೆ ಮುರಿಯದ 4ನೇ ವಿಕೆಟ್ಗೆ 153 ರನ್ ಸೇರಿಸಿ 36 ಓವರ್ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.