

ನ್ಯೂಯಾರ್ಕ್: ಜೂನ್ 09ರಂದು ಇಲ್ಲಿನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕ್ ವಿರುದ್ಧ 6 ರನ್ಗಳ ರೋಚಕ ಗೆಲುವು ಸಾಧಿಸಿದ ಟೀಂ ಇಂಡಿಯಾಗೆ ಎಲ್ಲಿಲ್ಲದ ಮೆಚ್ಚುಗೆ, ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು. ಅದರಲ್ಲೂ ಭಾರತ ಕೊಟ್ಟ 119 ರನ್ಗಳ ಸಾಧಾರಣ ಗುರಿಯನ್ನು ತಲುಪುವಲ್ಲಿ ಮುಗ್ಗರಿಸಿದ ಪಾಕಿಸ್ತಾನ ತಂಡಕ್ಕೆ ಮತ್ತೊಮ್ಮೆ ಟೀಕೆಗಳು ವ್ಯಕ್ತವಾಗಿವೆ.
ಮೊದಲ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಸೂಪರ್ ಓವರ್ ಮ್ಯಾಚ್ನಲ್ಲಿ ಸೋಲುಂಡ ಪಾಕಿಸ್ತಾನ ತಂಡಕ್ಕೆ ವ್ಯಾಪಕ ಟ್ರೋಲ್ಗಳು ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಟೀಂ ಇಂಡಿಯಾದ ವಿರುದ್ಧವೂ ಹೀನಾಯವಾಗಿ ಸೋತ ಬಾಬರ್ ಪಡೆಗೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಫ್ಯಾನ್ಸ್ ಭಾರೀ ಆಕ್ರೋಶ ಹೊರಹಾಕಿದ್ದರು. ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದ ಪಾಕ್ನ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್, ವಿಶ್ವಕಪ್ ತಂಡಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು, ಯಾರು ಬೇಡ ಎಂಬ ನಿರ್ಧಾರ ಕೈಗೊಳ್ಳುವಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಎಡವಿದೆ ಎಂದರು.
"ಆಟಗಾರರ ನಡುವೆ ಮನಸ್ತಾಪ ತರುತ್ತಿರುವ ಕ್ಯಾಪ್ಟನ್ ಬಾಬರ್ ಆಜಂರನ್ನು ಮೊದಲು ನಾಯಕತ್ವದಿಂದ ವಜಾಗೊಳಿಸಬೇಕು. ಇಂದಿನಿಂದ ಪಾಕಿಸ್ತಾನ ತಂಡವು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ನ ಮಹಿಳಾ ಟೀಮ್ಗಳ ವಿರುದ್ಧ ಆಡುವುದನ್ನು ಪ್ರಾರಂಭಿಸಲಿ. ಪುರುಷರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಟವಾಡಿದ್ದು ಸಾಕು. ಯಾವ ಹಂತದಿಂದ ಎಲ್ಲಿಗೆ ಬಂತು ನಿಂತಿದ್ದಾರೆ ಎಂಬುದನ್ನು ಒಮ್ಮೆ ಇವರು ತಿಳಿದುಕೊಳ್ಳುವುದು ಸೂಕ್ತ. ಕೆಲವರಂತು ಟಿ20 ವಿಶ್ವಕಪ್ ತಂಡದಲ್ಲಿರಲು ಅನರ್ಹರು. ಆದರೂ ಸಹ ತಂಡದಲ್ಲಿದ್ದಾರೆ ಅನ್ನೋದು ಬೇಸರದ ಸಂಗತಿ" ಎಂದು ಹೇಳಿದ್ದಾರೆ.
"ಇವರಾರು ಫಿಟ್ ಇಲ್ಲ ಮತ್ತು ಸರಿಯಾಗಿ ಫೀಲ್ಡಿಂಗ್ ಮಾಡಲು ಸಾಧ್ಯವಿಲ್ಲ. ಆದರೂ ಸಹ ಪಾಕಿಸ್ತಾನದ ರಾಷ್ಟ್ರೀಯ ತಂಡದ ಭಾಗವಾಗಿ ಮುಂದುವರಿಯುತ್ತಿದ್ದಾರೆ. ಇಂಥವರಿಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷರು ಅವಕಾಶ ನೀಡಬಾರದು. ಆಯ್ಕೆ ಪ್ರಕ್ರಿಯೆಯಲ್ಲಿ ತನಗೆ ತಪ್ಪು ಸಲಹೆಗಳನ್ನು ನೀಡಿದ ವ್ಯಕ್ತಿಯ ಬಾಯಿಯನ್ನು ಅಂದೇ ಮುಚ್ಚಬೇಕಿತ್ತು” ಎಂದು ಕಮ್ರಾನ್ ಅಕ್ಮಲ್ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).