ಕೊಹ್ಲಿ ಅಬ್ಬರ ತಡೆಯಲು ಯಾವ ಬೌಲರ್​ನಿಂದಲೂ ಸಾಧ್ಯವಿಲ್ಲ! ಯಾರಿಗೆ ಹೇಳ್ತಿದ್ದೀರಾ? ಮಾಜಿ ಕ್ರಿಕೆಟಿಗನಿಗೆ ಫ್ಯಾನ್ಸ್ ಪ್ರಶ್ನೆ

WhatsApp Image 2024-05-17 at 4.11.25 PM
Published on

ನವದೆಹಲಿ: ಐಪಿಎಲ್ 17ನೇ ಆವೃತ್ತಿ ಅಂತ್ಯಕ್ಕೆ ಇನ್ನೇನೂ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ಸದ್ಯ ಕ್ರಿಕೆಟ್ ಅಭಿಮಾನಿಗಳ ಚಿತ್ತ ಮೂಡಿರುವುದು ಕೇವಲ ಶನಿವಾರ (ಮೇ.18) ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯದ ಮೇಲೆ. ಈ ಪಂದ್ಯ ಆರಂಭಕ್ಕೂ ಮುನ್ನವೇ ಭಾರೀ ಕುತೂಹಲ ಮೂಡಿದ್ದು, ಯಾರು ಪ್ಲೇಆಫ್​ಗೆ ಅಧಿಕೃತವಾಗಿ ಎಂಟ್ರಿ ಕೊಡಲಿದ್ದಾರೆ ಎಂಬುದೇ ಇದೀಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಪರಿಣಮಿಸಿದೆ. ಸದ್ಯ ಇದೆಲ್ಲದರ ಮಧ್ಯೆ ಟೀಂ ಇಂಡಿಯಾದ ಮಾಜಿ ಆಟಗಾರ ನೀಡಿದ ಹೇಳಿಕೆ ಮಾತ್ರ ಸದ್ಯ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ.

ಐಪಿಎಲ್ 2024ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ಪರ ಓಪನರ್​ ಆಗಿ ಆಕರ್ಷಕ ಹಾಗೂ ಅಬ್ಬರದ ಬ್ಯಾಟಿಂಗ್ ಕೊಡುಗೆ ನೀಡಿರುವ ವಿರಾಟ್​ ಕೊಹ್ಲಿ ಸದ್ಯ ಅಸಾಧಾರಣ ಫಾರ್ಮ್‌ನಲ್ಲಿದ್ದಾರೆ. ತಮ್ಮ ಪರಾಕ್ರಮ ಮತ್ತು ನಿರ್ಣಯವನ್ನು ಅತ್ಯುತ್ತಮವಾಗಿ ಪ್ರದರ್ಶಿಸಿರುವ ಕೊಹ್ಲಿ ಆಟದ ವೈಖರಿ ಬಗ್ಗೆ ಕ್ರಿಕೆಟ್​ ಅಭಿಮಾನಿಗಳು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸೀಸನ್​ನಲ್ಲಿ ನಿರಂತರ ಉತ್ತಮ ಪ್ರದರ್ಶನ ನೀಡಿರುವ ವಿರಾಟ್,​ ಅತ್ಯಧಿಕ ರನ್​ ಗಳಿಸಿ ಆರೆಂಜ್ ಕ್ಯಾಪ್ ತೊಟ್ಟು, ಮಿಂಚಿದ್ದಾರೆ. ​

ಸಿಎಸ್​ಕೆ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನಮ್ಮ ತಂಡ ಜಯ ಗಳಿಸಲೇಬೇಕು ಎಂಬ ದೃಢ ಸಂಕಲ್ಪದಿಂದ ಭಾರೀ ತಯಾರಿ ನಡೆಸುತ್ತಿರುವ ವಿರಾಟ್ ಕೊಹ್ಲಿ, ಈ ಮ್ಯಾಚ್​ನಲ್ಲಿಯೂ ಉತ್ತಮ ಓಪನಿಂಗ್ ಜತೆಗೆ ಅಬ್ಬರದ ಬ್ಯಾಟಿಂಗ್ ನಡೆಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಬಗ್ಗೆ ಮಾತನಾಡಿರುವ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್​, ವಿರಾಟ್​ನ ತಡೆಯುವವರು ಯಾರು ಇಲ್ಲ ಎಂದಿದ್ದಾರೆ.

“ಹಿಮಾಲಯಕ್ಕೆ ಹೋದ ಒಬ್ಬ ಸಾಧು ಬೇರೆ ಬೇರೆ ವಲಯದಲ್ಲಿ ಧ್ಯಾನಮಗ್ನನಾಗಿರುತ್ತಾನೆ. ಯಾವುದೂ ಸಹ ಅವನ ಗಮನವನ್ನು ವಿಚಲಿತಗೊಳಿಸಲು ಸಾಧ್ಯವಿಲ್ಲ. ಯಾರೇ ಕೂಗಿದರೂ, ದೊಡ್ಡ ಸದ್ದು ಆದರೂ ಕೂಡ ಧ್ಯಾನಕ್ಕೆ ಮಾತ್ರ ಭಂಗವಿಲ್ಲ. ಸಾಧು ತಲುಪಿದ ವಲಯವನ್ನೇ ಈಗ ವಿರಾಟ್ ತಲುಪಿದ್ದಾರೆ. ಅಂದಮೇಲೆ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಯಾವ ಬೌಲರ್​ನಿಂದಲೂ ಕೊಹ್ಲಿ ಅಬ್ಬರವನ್ನು ವಿಚಲಿತಗೊಳಿಸಲು ಆಗಲ್ಲ ಎಂದಿದ್ದಾರೆ. ಸದ್ಯ ಈ ಹೇಳಿಕೆ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಮಿಶ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net