

ನವದೆಹಲಿ: ಕಳೆದ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡದಲ್ಲಿದ್ದ ಬ್ಯಾಟರ್ ಅಭಿಮನ್ಯು ಈಶ್ವರನ್, ವೇಗಿಗಳಾದ ಆಕಾಶ್ದೀಪ್, ಅರ್ಷದೀಪ್ ಸಿಂಗ್, ಅಂಶುಲ್ ಕಾಂಬೋಜ್ ಮತ್ತು ಶಾರ್ದೂಲ್ ಠಾಕೂರ್ರನ್ನೂ ವಿಂಡೀಸ್ ವಿರುದ್ಧ ಸರಣಿಗೆ ಕೈಬಿಡಲಾಗಿದೆ. ಇಂಗ್ಲೆಂಡ್ಗೆ 18 ಆಟಗಾರರೊಂದಿಗೆ ಭಾರತ ತೆರಳಿದ್ದರೆ, ತವರಿನ ಸರಣಿಯಲ್ಲಿ 15 ಆಟಗಾರರೊಂದಿಗೆ ಆಡಲಿರುವುದು ಕೂಡ ಇದಕ್ಕೆ ಕಾರಣವಾಗಿದೆ. ಆದರೆ ಬಂಗಾಳದ ಈಶ್ವರನ್, ಕಳೆದ ಆಸೀಸ್, ಇಂಗ್ಲೆಂಡ್ ಪ್ರವಾಸದ ತಲಾ 5 ಟೆಸ್ಟ್ ಪಂದ್ಯಗಳ ಸರಣಿಗೆ ತಂಡದಲ್ಲಿದ್ದರೂ, ಒಂದೂ ಪಂದ್ಯ ಆಡುವ ಅವಕಾಶ ಪಡೆದಿರಲಿಲ್ಲ. ಹೀಗಾಗಿ ಅವರನ್ನು ಕೈಬಿಟ್ಟಿರುವುದು ನಿಷ್ಠುರ ನಡೆಯಾಗಿದೆ.
ಕಳೆದ 3-4 ವರ್ಷಗಳಿಂದ 30 ವರ್ಷದ ಈಶ್ವರನ್, ಭಾರತ ತಂಡದೊಂದಿಗೆ ಹಲವು ಪ್ರವಾಸಗಳಿಗೆ ತೆರಳಿದ್ದರು. ಆದರೂ, ದೇಶೀಯ ಕ್ರಿಕೆಟ್ನಲ್ಲಿ 27 ಶತಕ ಸಿಡಿಸಿದ ಬ್ಯಾಟರ್, ಒಂದೂ ಟೆಸ್ಟ್ ಆಡದೆ ಹೊರಬಿದ್ದಿರುವುದು ವಿಪರ್ಯಾಸ. 3ನೇ ಆರಂಭಿಕನಾಗಿ ಎನ್. ಜಗದೀಶನ್ರನ್ನೂ ಪರಿಗಣಿಸಿರುವುದರಿಂದ ಈಶ್ವರನ್ಗೆ ಮತ್ತೆ ಅವಕಾಶ ಲಭಿಸುವುದು ಅನುಮಾನ ಎಂದೂ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ತಿಳಿಸಿದರು. ಇದರ ಬೆನ್ನಲ್ಲೇ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ 'ಜಸ್ಟಿಸ್ ಫಾರ್ ಅಭಿಮನ್ಯು' ಅಭಿಯಾನ ಆರಂಭಿಸಿದ್ದು, ಒಂದೂ ಟೆಸ್ಟ್ ಆಡುವ ಅವಕಾಶ ನೀಡದೆ ಹೊರದಬ್ಬಿದ ಕ್ರಮವನ್ನು ಪ್ರಶ್ನಿಸಿದ್ಧಾರೆ.
ದಕ್ಷಿಣ ಆಫ್ರಿಕಾ ಸರಣಿಗೆ ಪಂತ್ ಫಿಟ್
ಇಂಗ್ಲೆಂಡ್ ಪ್ರವಾಸದಲ್ಲಿ ಕಾಲ್ಬೆರಳಿನ ಮೂಳೆ ಮುರಿತಕ್ಕೊಳಗಾದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ನವೆಂಬರ್ನಲ್ಲಿ ಪ್ರವಾಸಿ ದಣ ಆಫ್ರಿಕಾ ವಿರುದ್ಧ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿಗೆ ಫಿಟ್ ಆಗುವ ವಿಶ್ವಾಸವನ್ನು ಅಗರ್ಕರ್ ವ್ಯಕ್ತಪಡಿಸಿದರು. ಆಗ ಪಂತ್ಗೆ ಉಪನಾಯಕನ ಪಟ್ಟವನ್ನೂ ಮರಳಿ ನೀಡಲಾಗುವುದು. ಜಡೇಜಾ ತಂಡದ ಅನುಭವಿ ಆಟಗಾರ ಆಗಿರುವುದರಿಂದ ವಿಂಡೀಸ್ ಸರಣಿಗೆ ಹಂಗಾಮಿ ಉಪನಾಯಕರಾಗಿದ್ದಾರೆ ಎಂದು ಅಗರ್ಕರ್ ವಿವರಿಸಿದರು. ಈ ಹಿಂದೆ ಏಕದಿನ, ಟಿ20 ತಂಡಗಳ ಉಪನಾಯಕರಾಗಿದ್ದ 36 ವರ್ಷದ ಜಡೇಜಾಗೆ ಟೆಸ್ಟ್ ತಂಡದಲ್ಲಿ ಈ ಜವಾಬ್ದಾರಿ ಲಭಿಸಿರುವುದು ಇದೇ ಮೊದಲಾಗಿದೆ.